ಕೊಪ್ಪಳ ನಗರದ ಬಳಿ ಬಲ್ಡೋಟ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಸಂಸ್ಥೆಯು ಸ್ಥಾಪಿಸುತ್ತಿದ್ದ ಉಕ್ಕು ಮತ್ತು ವಿದ್ಯುತ್ ಸ್ಥಾವರದ ವಿರುದ್ಧ ಭಾರೀ ಆಕ್ರೋಶ, ಪ್ರತಿಭಟನೆಗಳು ನಡೆದಿವೆ. ಜನರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕಾರ್ಖಾನೆ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಕಾಮಗಾರಿಯನ್ನು ಮುಂದುವರೆಸದಂತೆ ಕೊಪ್ಪಳ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕಳೆದ ತಿಂಗಳು, ಕೊಪ್ಪಳದಲ್ಲಿ ಉಕ್ಕು ಮತ್ತು ವಿದ್ಯುತ್ ಸ್ಥಾವರ ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸರ್ಕಾರ ಸಹಿ ಹಾಕಿತ್ತು. ಆದರೆ, ಸ್ಥಾವರ ಕೊಪ್ಪಳದ ಪರಿಸರವನ್ನು ನಾಶ ಮಾಡಲಿದೆ. ಮತ್ತಷ್ಟು ಶಾಖವನ್ನು ಹೆಚ್ಚಿಸಲಿದೆ. ಜನ ಜೀವನವೂ ಸೇರಿದಂತೆ ಇಡೀ ವ್ಯವಸ್ಥೆ ಹಾಳಾಗಲಿದೆ. ಮಾಲಿನ್ಯವು ಇನ್ನೂ ಹೆಚ್ಚಾಗುತ್ತದೆ. ಜನ-ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಎದುರಾಗುತ್ತವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಹಲವು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಅಲ್ಲದೆ, ಮಂಗಳವಾರ, ಕೊಪ್ಪಳ ಜಿಲ್ಲೆಯ ಎಲ್ಲ ರಾಜಕೀಯ ಮುಖಂಡರು, ನಾಗರಿಕರು ಹಾಗೂ ಪರಿಸರ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ,ಕಾರ್ಖಾನೆ ಕಾಮಗಾರಿಯನ್ನು ಕೈಬಿಡುವಂತೆ ಒತ್ತಾಯಿಸಿದ್ದರು. ಜೊತೆಗೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕೂಡ ಸ್ಥಾವರದ ನಿರ್ಮಾಣದಿಂದಾಗುವ ಅಪಾಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಿಸಿದ್ದರು. ಪರಿಣಾಮವಾಗಿ, ಸ್ಥವರ ಸ್ಥಾಪನೆಯ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚಿಸಿದ್ದಾರೆ.
ತಮ್ಮ ಆದೇಶದಲ್ಲಿ, “ಕೊಪ್ಪಳದಲ್ಲಿ ಸ್ಥಾವರ ಸ್ಥಾಪನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿಲ್ಲ. ಈ ವಿಚಾರ ಕುರಿತು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರೊಂದಿಗೆ ಚರ್ಚಿಸಿ ವರದಿ ಪಡೆಯುತ್ತವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಹ ಹೇಳಿದ್ದಾರೆ.