ಕುಡುಕ ಗಂಡನ ಕಿರುಕುಳ ತಾಳಲಾರದೇ ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಚಿಂಚಲಿ ಪಟ್ಟಣದ ನಿವಾಸಿಗಳಾದ ಶಾರದಾ ಅಶೋಕ ಡಾಲೆ(32), ಅಮೃತಾ(14), ಆದರ್ಶ(8) ಮತ್ತು ಅನುಷಾ(5) ಮೃತರು.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಕುಡಚಿ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ, “ಮೃತ ಮಹಿಳೆ ಶಾರದಾ ಅವರ ಪತಿ ಅಶೋಕ ಡಾಲೆ ನಿತ್ಯವೂ ಕುಡಿದು ಬಂದು ಆಕೆಯೊಟ್ಟಿಗೆ ಜಗಳಮಾಡುತ್ತಿದ್ದನೆಂದು ತಿಳಿದುಬಂದಿದೆ. ಕಿರುಕುಳ ತಾಳಲಾರದೆ ಮನನೊಂದ ಆಕೆ ಮೂವರು ಮಕ್ಕಳೊಂದಿಗೆ ಹೋಗಿ ಸಮೀಪದ ಕೃಷ್ಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಪಿಎಸ್‌ಐ ಪ್ರತಿಕ್ರಿಯಿಸಿದರು.
“ಘಟನೆಯನ್ನು ಗಮನಿಸಿದ ಸ್ಥಳೀಯರು ಒಂದು ಮಗುವನ್ನು ರಕ್ಷಿಸಿ ರಾಯಭಾಗ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅನುಷಾ ಮೃತಪಟ್ಟಳು. ಎಲ್ಲರ ದೇಹಗಳನ್ನು ನೀರಿನಿಂದ ಹೊರ ತೆಗೆಯಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದೇವೆ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ” ಎಂದು ಈ ದಿನ.ಕಾಮ್‌ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪ್ರಿಯತಮೆಗೆ ಚೂರಿಯಿಂದ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ
