ಮಾಯಾವತಿ ವಿಚಿತ್ರ ನಿರ್ಧಾರಗಳು: ಆಕಾಶ್ ಪದಚ್ಯುತಿ, ಅಧೋಗತಿಯತ್ತ ಬಿಎಸ್‌ಪಿ

Date:

Advertisements

ಭಾರತದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಉತ್ತರ ಪ್ರದೇಶವನ್ನು ಆಳಿದ್ದ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಈಗ ಹೀನಾಯ ಸ್ಥಿತಿಯಲ್ಲಿದೆ. ಕಾನ್ಶಿರಾಮ್ ಅವರ ಉತ್ತರಾಧಿಕಾರಿಯಾಗಿ ಪಕ್ಷವನ್ನು ಮುನ್ನಡೆಸಿದ ಮಾಯಾವತಿ ಅವರ ವಿಚಿತ್ರ ನಿರ್ಧಾರಗಳಿಂದ, ಗೊಂದಲಕಾರಿ ವಿವಾದ ಸೃಷ್ಟಿಯಾಗಿದೆ. ಪಕ್ಷದ ಪರಿಸ್ಥಿತಿ ಮತ್ತಷ್ಟು ಅಧೋಗತಿಗೆ ತಲುಪಿದೆ, ತನ್ನ ನೆಲೆಯನ್ನೇ ಕಳೆದುಕೊಂಡಿದೆ.

ಅಂಬೇಡ್ಕರ್‌ವಾದಿ ಸಿದ್ಧಾಂತದೊಂದಿಗೆ ಸಾಮಾಜಿಕ ಬದಲಾವಣೆಯ ಮಹತ್ವದ ಜವಾಬ್ದಾರಿ ಹೊತ್ತಿದ್ದ ಪಕ್ಷವು ಇಂದು ಮಾಯಾವತಿ ಅವರ ಕುಟುಂಬ ರಾಜಕೀಯಕ್ಕೆ ಸಿಲುಕಿ ಒದ್ದಾಡುತ್ತಿದೆ. ಅವರ ಕುಟುಂಬ ರಾಜಕಾರಣದ ತಿಕ್ಕಾಟಗಳು ಈಗ ಬಹಿರಂಗಗೊಂಡಿದ್ದು, ಪಕ್ಷವು ಮುಜುಗರ ಅನುಭವಿಸುವಂತಾಗಿದೆ.

ಮಾರ್ಚ್ 3 ರಂದು, ಮಾಯಾವತಿ ತಮ್ಮ ಸೋದರಳಿಯ, ಪಕ್ಷದ ಉತ್ತರಾಧಿಕಾರಿ ಎಂದೇ ಭಾವಿಸಲಾಗಿದ್ದ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯಿಂದ ಹೊರಹಾಕಿದರು. ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆ ಸೇರಿದಂತೆ ಎಲ್ಲ ಜವಾಬ್ದಾರಿಗಳಿಂದ ಅವರನ್ನು ವಜಾಗೊಳಿಸಿದರು. ಆದಾಗ್ಯೂ, ಆಕಾಶ್ ಅವರು ಪಕ್ಷದಲ್ಲಿ ಅಶಿಸ್ತಿನಿಂದ ನಡೆದುಕೊಂಡರೇ ಅಥವಾ ಯಾವುದಾದರೂ ತಪ್ಪು ಮಾಡಿದ್ದಾರೆಯೇ ಎಂಬುದರ ಬಗ್ಗೆ ಮಾಯಾವತಿ ವಿವರಿಸಲಿಲ್ಲ. ಬದಲಾಗಿ, ಆಕಾಶ್ ಅವರ ಸಂಬಂಧಿಕರ ಮೇಲೆ ಆರೋಪ ಹೊರಿಸಿ, ಅವರನ್ನು ಹೊರಹಾಕಲಾಗಿದೆ.

Advertisements

ಮಾಯಾವತಿ ಯಾಕೆ ಹೀಗೆ ವರ್ತಿಸುತ್ತಿದ್ದಾರೆ?

ಮಾಯಾವತಿ ಮತ್ತು ಅವರ ಕುಟುಂಬವು ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಆರೋಪಗಳಿಂದಾಗಿ ಮಾಯಾವತಿ ಅವರಿಗೆ ಸರ್ಕಾರಿ ಸಂಸ್ಥೆಗಳು ಕುಣಿಕೆಯನ್ನು ಬಿಗಿಗೊಳಿಸುತ್ತಿವೆ. ಆ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಡಳಿತ ಪಕ್ಷದ (ಬಿಜೆಪಿ) ಹಿತಾಸಕ್ತಿಯನ್ನು ಪೂರೈಸಲು ಈ ರೀತಿ ವರ್ತಿಸುತ್ತಿರಬಹುದು. ಅವರ ನಡೆಗಳು ಅವರಲ್ಲಿರುವ ಅಭದ್ರತೆಯನ್ನು ಪ್ರತಿಬಿಂಬಿಸುತ್ತಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಮಾತ್ರವಲ್ಲದೆ, ಬಿಎಸ್‌ಪಿಯನ್ನು ಸರ್ವಾಧಿಕಾರಿ ರೀತಿಯಲ್ಲಿ ನಡೆಸುತ್ತಿರುವ ಮಾಯಾವತಿ ವಿರುದ್ಧ ಪಕ್ಷದೊಳಗೆ ಅಸಮಾಧಾನಗಳು ಭುಗಿಲೆದ್ದಿದ್ದವು. ಜೊತೆಗೆ, ವಿದೇಶಿ ಶಿಕ್ಷಣ, ಯುವ ಶಕ್ತಿ ಮತ್ತು ವಾಕ್ಚಾತುರ್ಯವನ್ನು ಹೊಂದಿದ್ದ ಆಕಾಶ್‌ ಅವರನ್ನು ಪಕ್ಷದ ಹಲವರು ತಮ್ಮ ನಾಯಕನಾಗಿ ನೋಡಲಾರಂಭಿಸಿದ್ದರು. ಇದು ತಮಗೆ ಆಕಾಶ್ ಪೈಪೋಟಿ ನಾಯಕನಾಗಿ ಬೆಳೆಯುತ್ತಿದ್ದಾರೆ ಎಂಬ ಭಾವನೆಯನ್ನು ಮಾಯಾವತಿ ಅವರಲ್ಲಿ ಹುಟ್ಟುಹಾಕಿರಬಹುದು. ಹೀಗಾಗಿ, ಮಾಯಾವತಿ ಅವರು ಇಂತಹ ಸರ್ವಾಧಿಕಾರಿ ನಿರ್ಧಾರಗಳನ್ನು ತೆಗೆದುಕೊಂಡು, ಆಕಾಶ್ ಅವರನ್ನು ಪಕ್ಷದಿಂದ ಹೊರದೂಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬಿಎಸ್‌ಪಿಯಲ್ಲಿ ಆಗಿದ್ದೇನು?

2023ರಲ್ಲಿ ರಾಜ್ಯಸಭೆಯ ಮಾಜಿ ಸಂಸದ, ಆಕಾಶ್‌ ಅವರ ಸೋದರ ಮಾವ ಅಶೋಕ್ ಸಿದ್ಧಾರ್ಥ್‌ ಅವರ ಮಗಳು ಪ್ರಜ್ಞಾ ಅವರನ್ನು ಆಕಾಶ್ ವಿವಾಹವಾದರು. ಈ ಸಂಬಂಧದೊಂದಿಗೆ ಪಕ್ಷದಲ್ಲಿ ಅಶೋಕ್ ಅವರಿಗೆ ಮಹತ್ವದ ಸ್ಥಾನ ಮತ್ತಷ್ಟು ಭದ್ರವಾಯಿತೆಂದು ಭಾವಿಸಲಾಗಿತ್ತು. ಆದರೂ, 2025ರ ಫೆಬ್ರವರಿ 12ರಂದು, ಅಶೋಕ್ ಸಿದ್ಧಾರ್ಥ್ ಅವರನ್ನು ಪಕ್ಷದಿಂದ ಹೊರಹಾಕುವುದಾಗಿ ಮಾಯಾವತಿ ಘೋಷಿಸಿದರು. ಈ ಉಚ್ಚಾಟನೆ ಬಿಎಸ್‌ಪಿ ಕಾರ್ಯಕರ್ತರಲ್ಲಿ ಆಘಾತವನ್ನು ಉಂಟುಮಾಡಿತು.

ಅವರ ಉಚ್ಚಾಟನೆ ಬಳಿಕ, ಮಾರ್ಚ್ 2ರಂದು ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ಮಾಯಾವತಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಪಕ್ಷವನ್ನು ಎರಡು ಬಣಗಳಾಗಿ ವಿಭಜಿಸುವ ಮೂಲಕ ಅದನ್ನು ದುರ್ಬಲಗೊಳಿಸುವ ಪ್ರಯತ್ನದಲ್ಲಿ ಅಶೋಕ್ ತೊಡಗಿದ್ದರು. ಹೀಗಾಗಿ, ಪಕ್ಷ ಮತ್ತು ಚಳವಳಿಯ ಹಿತಾಸಕ್ತಿಗಾಗಿ ಈ ಕ್ರಮವನ್ನು ತೆಗೆದುಕೊಂಡಿದ್ದಾಗಿ ಹೇಳಿಕೊಂಡರು. ಅವರ ಆರೋಪಗಳು ನಿಜವೂ ಇರಬಹುದು. ಆದರೆ, ಪಕ್ಷದ ನಾಯಕಿಯಾಗಿ ಮಾಯಾವತಿ ಅವರು ತಮ್ಮ ಸರ್ವಾಧಿಕಾರಿ ಧೋರಣೆಯ ಮೂಲಕ ಹಲವಾರು ನಾಯಕರನ್ನು ದೂರ ಇಟ್ಟಿದ್ದಾರೆ ಎಂಬುದೂ ವಾಸ್ತವ.

ಈ ವರದಿ ಓದಿದ್ದೀರಾ?: ಹಗರಣಗಳ ಕುಣಿಕೆ, ‘ಮೋಶಾ’ಗಳ ಪಾಶ: ಕುಮಾರಸ್ವಾಮಿಯವರ ಕತೆ ಏನು?

ಮಾರ್ಚ್ 2ರ ಅದೇ ಸಭೆಯಲ್ಲಿ, ಮಾಯಾವತಿ ತಮ್ಮ ಸೋದರಳಿಯ ಆಕಾಶ್‌ ತನ್ನ ಪತ್ನಿ ಮತ್ತು ಮಾವನಿಂದ ಪ್ರಭಾವಿತರಾಗಿದ್ದಾರೆ ಎಂದು ಆರೋಪಿಸಿದರು. ಆಕಾಶ್ ಇನ್ನು ಮುಂದೆ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯಲ್ಲಿ ಇರುವುದಿಲ್ಲ. ಅವರಿಗೆ ಪಕ್ಷದಲ್ಲಿ ಯಾವುದೇ ರಾಜಕೀಯ ಅಧಿಕಾರ ಇರುವುದಿಲ್ಲ ಎಂದು ಘೋಷಿಸಿದರು. ಆದಾಗ್ಯೂ, ಅವರು ತಮ್ಮ ಕೊನೆಯುಸಿರು ಇರುವವರೆಗೂ ಪಕ್ಷಕ್ಕಾಗಿ ದುಡಿಯುತ್ತಾರೆ ಎಂದು ಹೇಳಿದರು. ಈ ಮೂಲಕ, ಕಾನ್ಶಿರಾಮ್ ಅವರಂತೆಯೇ, ತಮಗೂ ತಮ್ಮ ಕುಟುಂಬದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯೇ ತಮಗೆ ಮುಖ್ಯ ಎಂಬುದನ್ನು ಒತ್ತಿ ಹೇಳಲು ಮಾಯಾವತಿ ಪ್ರಯತ್ನಿಸಿದರು. ಆದರೆ, ಅವರ ನಡೆಯು ರಾಜಕೀಯ ತಂತ್ರವೆಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಗಮನಾರ್ಹವೆಂದರೆ, ಆಕಾಶ್‌ ರಾಜಕೀಯದಲ್ಲಿ ಸಕ್ರಿಯವಾಗುವುದಕ್ಕೂ ಹಿಂದಿನಿಂದಲೂ ಮಾಯಾವತಿ, ತಮ್ಮ ಸಹೋದರ ಆನಂದ್ ಕುಮಾರ್ ಅವರನ್ನು ಪಕ್ಷದ ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿದ್ದರು. ಆದರೆ, ಅವರು ಯಾವುದೇ ಪ್ರಮುಖ ಹುದ್ದೆಗಳಲ್ಲಿ ಇರಲಿಲ್ಲ. ಆನಂದ್ ಅವರು ಪಕ್ಷದಲ್ಲಿ ಹೆಚ್ಚಾಗಿ ದೆಹಲಿಯಿಂದ ಕೆಲಸ ಮಾಡುತ್ತಿದ್ದರು. ಪಕ್ಷದ ಅಧಿಕೃತ ದಾಖಲೆಗಳು ಮತ್ತು ಮಾಯಾವತಿ ಅವರ ಸಾರ್ವಜನಿಕ ಸಭೆಗಳನ್ನು ನಿರ್ವಹಿಸುತ್ತಿದ್ದರು. 2019ರಲ್ಲಿ ಆಕಾಶ್ ಪಕ್ಷದಲ್ಲಿ ಸಕ್ರಿಯವಾಗುತ್ತಿದ್ದಂತೆ, ಕುಟುಂಬ ರಾಜಕಾರಣ ಮತ್ತಷ್ಟು ಆಳವಾಗಿ ಬೇರೂರಲಾರಂಭಿಸಿತು. ಆನಂದ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಯಾವತಿ ನೇಮಿಸಿದರು. ಬಳಿಕ, 2023ರಲ್ಲಿ ರಾಷ್ಟ್ರೀಯ ಸಂಯೋಜಕ ಹುದ್ದೆಗೂ ಅವರನ್ನೇ ನೇಮಿಸಲಾಯಿತು.

ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿದ ಸಮಯದಲ್ಲಿ, ಮಾಯಾವತಿ ಅವರು ”ಆನಂದ್‌ ಎಂದಿಗೂ ನನ್ನನ್ನು ನಿರಾಶೆಗೊಳಿಸಿಲ್ಲ. ಪಕ್ಷದ ಹೋರಾಟಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯುಂಟುಮಾಡಿಲ್ಲ. ಭವಿಷ್ಯದಲ್ಲಿ ಅಶೋಕ್ ರೀತಿಯ ಮಾದರಿಯನ್ನು ತಪ್ಪಿಸಲು, ತನ್ನ ಮಕ್ಕಳನ್ನು ರಾಜಕೀಯೇತರ ಕುಟುಂಬಗಳಿಗೆ ಮದುವೆ ಮಾಡುವುದಾಗಿ ಆನಂದ್ ನಿರ್ಧರಿಸಿದ್ದಾರೆ” ಎಂದು ಹೇಳಿದ್ದರು.

2023ರ ಡಿಸೆಂಬರ್‍‌ನಲ್ಲಿ, ಆಕಾಶ್‌ ಅವರನ್ನು ಮಾಯಾವತಿ ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ಆದಾದ ಕೆಲವೇ ತಿಂಗಳುಗಳ ನಂತರ, 2024ರ ಲೋಕಸಭಾ ಚುನಾವಣೆಯ ವೇಳೆ, ಪ್ರಧಾನಿ ಮೋದಿ ಅವರನ್ನು ವಿಮರ್ಶಿಸುತ್ತಲೇ ಆಕಾಶ್ ಜನಪ್ರಿಯತೆ ಗಳಿಸಲಾರಂಭಿಸಿದರು. ಅದನ್ನು ಸಹಿಸದ ಮಾಯಾವತಿ, ಅವರ ರೆಕ್ಕೆಗಳನ್ನು ಕತ್ತರಿಸಲು ಚುನಾವಣಾ ಸಮಯದಲ್ಲಿಯೇ ಆಕಾಶ್‌ ಅವರಿಂದ ಪಕ್ಷದ ಉತ್ತರಾಧಿಕಾರಿ ಪಟ್ಟವನ್ನು ಕಸಿದುಕೊಂಡರು. ಆಕಾಶ್ ‘ಪ್ರಬುದ್ಧತೆ’ಯಿಂದ ವರ್ತಿಸುತ್ತಿಲ್ಲ ಎಂದು ಮಾಯಾವತಿ ದೂರಿದರು.

ಸಾರ್ವಜನಿಕವಾಗಿ ಆಕಾಶ್‌ ಅಪ್ರಬುದ್ಧ ಎಂದು ಹಣೆಪಟ್ಟಿ ಕಟ್ಟುವ ಮೂಲಕ, ಅವರ ರಾಜಕೀಯ ಪಯಣಕ್ಕೆ ಮಾಯಾವತಿ ಅಡ್ಡಿ ಮಾಡಿದರು. ಅಲ್ಲದೆ, ಸಾರ್ವಜನಿಕರ ದೃಷ್ಟಿಯಲ್ಲಿ ಆಕಾಶ್ ಅವರನ್ನು ನಗಣ್ಯ ಎಂಬಂತೆ ಬಿಂಬಿಸಿದರು. ಆದರೆ, ಅವರ ಅಪ್ರಬುದ್ಧ ನಡೆ ಯಾವುದು ಎಂಬುದನ್ನು ಮಾಯಾವತಿ ಈವರೆಗೆ ಹೇಳಿಲ್ಲ.

ಹೀಗಾಗಿಯೇ, ಮೋದಿ ಅವರನ್ನು ಕಟುವಾಗಿ ಟೀಕಿಸುತ್ತಿದ್ದ ಕಾರಣ ಮತ್ತು ಬಿಜೆಪಿಯ ಹಿತಾಸಕ್ತಿಯ ದೃಷ್ಟಿಯಿಂದ ಆಕಾಶ್ ಅವರನ್ನು ಉತ್ತರಾಧಿಕಾರಿ ಪಟ್ಟದಿಂದ ಕೆಳಗಿಳಿಸಲಾಯಿತು ಎಂಬ ಅಭಿಪ್ರಾಯಗಳು ರೂಪುಗೊಂಡವು. ಇದರಿಂದ ತಪ್ಪಿಸಿಕೊಳ್ಳಲು ಅಕಾಶ್ ಅವರನ್ನು ಮತ್ತೆ ತಮ್ಮ ‘ಏಕೈಕ ಉತ್ತರಾಧಿಕಾರಿ’ ಎಂದು ಘೋಷಿಸಿದರು. ಈ ನಿರ್ಧಾರಕ್ಕೂ ಸ್ಪಷ್ಟ ಕಾರಣಗಳನ್ನು ಅವರು ನೀಡಲಿಲ್ಲ. ಆಕಾಶ್ ಒಬ್ಬ ಪ್ರಬುದ್ಧ ನಾಯಕನಾಗಿ ಹೊರಹೊಮ್ಮುತ್ತಾನೆ ಎಂದಷ್ಟೇ ಮಾಯಾವತಿ ಹೇಳಿದರು.

ಪಕ್ಷದಿಂದ ಆಕಾಶ್‌ ಉಚ್ಚಾಟನೆ

2024ರ ಚುನಾವಣೆ ಮುಗಿದಾಗ ಆಕಾಶ್ ತಮ್ಮ ಏಕೈಕ ಉತ್ತರಾಧಿಕಾರಿಯೆಂದು ಘೋಷಿಸಿದ್ದ ಮಾಯಾವತಿ, ಇದೀಗ ಮಾರ್ಚ್ 3ರಂದು ಆಕಾಶ್ ಅವರನ್ನು ಪಕ್ಷದಿಂದ ಏಕಾಏಕಿ ಹೊರದಬ್ಬಿದ್ದಾರೆ. ಮತ್ತದೇ ಅಪ್ರಬುದ್ಧತೆಯ ಆರೋಪ ಮಾಡಿದ್ದಾರೆ. ”ಪಕ್ಷದ ಎಲ್ಲ ಹುದ್ದೆಗಳಿಂದ ತೆಗೆದುಹಾಕಿರುವುದಕ್ಕೆ ಆಕಾಶ್ ಪಶ್ಚಾತ್ತಾಪ ಪಡಬೇಕು ಮತ್ತು ಹೆಚ್ಚು ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು” ಎಂದು ಮಾಯಾವತಿ ಹೇಳಿದ್ದಾರೆ.

ತಮ್ಮನ್ನು ಎಲ್ಲ ಹುದ್ದೆಗಳಿಂದ ವಜಾಗೊಳಿಸಿದಾಗ ‘ಎಕ್ಸ್‌’ನಲ್ಲಿ ದೀರ್ಘ ಪೋಸ್ಟ್‌ಅನ್ನು ಹಂಚಿಕೊಂಡಿರುವ ಆಕಾಶ್, ”ಗೌರವಾನ್ವಿತ ಬೆಹೆನ್‌ಜಿ ಮಾಯಾವತಿ ಜಿ ಅವರು ಪಕ್ಷದ ಎಲ್ಲ ಹುದ್ದೆಗಳಿಂದ ನನ್ನನ್ನು ವಜಾಗೊಳಿಸಿದ್ದಾರೆ. ಅವರ ನಿರ್ಧಾರವನ್ನು ಗೌರವಿಸುತ್ತೇನೆ. ಅವರ ನಿರ್ಧಾರವು ನನಗೆ ವೈಯಕ್ತಿಕವಾಗಿ ಭಾವನಾತ್ಮಕವಾಗಿ ಬೇಸರ ತಂದಿದೆ. ಆದರೆ, ಇದೇ ಸಮಯದಲ್ಲಿ ನಮ್ಮೆದುರು ದೊಡ್ಡ ಸವಾಲುಗಳಿವೆ. ಮಾಯಾವತಿ ಅವರ ನಾಯಕತ್ವದಲ್ಲಿ ತ್ಯಾಗ, ನಿಷ್ಠೆ ಮತ್ತು ಸಮರ್ಪಣೆಯಂತಹ ಪಾಠಗಳನ್ನು ಕಲಿತಿದ್ದೇನೆ. ಅದರಂತೆ ಬಿಎಸ್‌ಪಿ ಮತ್ತು ಚಳವಳಿಯ ಕಾರ್ಯಕರ್ತನಾಗಿ ನಾನು ಪಕ್ಷಕ್ಕಾಗಿ ಶ್ರದ್ಧೆಯಿಂದ ಕೆಲಸವನ್ನು ಮುಂದುವರಿಸುತ್ತೇನೆ. ನನ್ನ ಕೊನೆಯ ಉಸಿರಿನವರೆಗೂ ಸಮಾಜದ ಒಳಿತಿಗಾಗಿ ಹೋರಾಡುತ್ತೇನೆ” ಎಂದು ಬರೆದಿದ್ದಾರೆ.

”ಬಹುಜನ ಚಳವಳಿ ನನಗೆ ವೃತ್ತಿಯಲ್ಲ. ಕೋಟ್ಯಂತರ ದಲಿತರು, ಶೋಷಿತರು, ವಂಚಿತರು ಹಾಗೂ ಬಡ ಜನರ ಸ್ವಾಭಿಮಾನ ಮತ್ತು ಸ್ವಾಭಿಮಾನಕ್ಕಾಗಿನ ಹೋರಾಟವಾಗಿದೆ. ಪಕ್ಷದ ಹುದ್ದೆಗಳು ಚಳವಳಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ. ಲಕ್ಷಾಂತರ ಆಕಾಶರು ಚಳವಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧರಿದ್ದಾರೆ” ಎಂದು ಆಕಾಶ್ ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ರಾಜಕೀಯ ದೇಣಿಗೆಗಳಿಗೆ ವಿನಾಯಿತಿ; ಸರ್ಕಾರದ ಖಜಾನೆಗೆ 11,813 ಕೋಟಿ ರೂ. ತೆರಿಗೆ ನಷ್ಟ!

ಆದರೆ, ಈ ಪೋಸ್ಟ್‌ ಕುರಿತೂ ಮಾಯಾವತಿ ಸಿಟ್ಟಾದರು. ”ಇದು ಪಶ್ಚಾತ್ತಾಪ ಅಥವಾ ರಾಜಕೀಯ ಪ್ರಬುದ್ಧತೆಯ ಸಂಕೇತವಲ್ಲ. ಸ್ವಾರ್ಥಿ, ಸೊಕ್ಕಿನ ಆಕ್ರಮಣಕಾರಿ ಪ್ರತಿಕ್ರಿಯೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾರ್ಚ್‌ 3ರಂದು ಆಕಾಶ್ ಅವರನ್ನು ಪಕ್ಷದಿಂದಲೇ ಹೊರಹಾಕಿದರು.

ಆಕಾಶ್ ಅವರ ಪ್ರತಿಕ್ರಿಯೆಯಲ್ಲಿ ಏನು ಆಕ್ರಮಣಕಾರಿಯಾಗಿತ್ತು ಎಂದು ಮಾಯಾವತಿ ಮಾತ್ರ ಗ್ರಹಿಸಲು ಸಾಧ್ಯ ಎಂದೆನ್ನಿಸುತ್ತದೆ. ಆದರೆ ಸ್ಪಷ್ಟವಾದ ಸಂಗತಿಯೆಂದರೆ, ಅವರ ಹಲವು ರಾಜಕೀಯ ನಿರ್ಧಾರಗಳು ಆಕಾಶ್ ಅವರ ಖ್ಯಾತಿಗೆ ಹಾನಿ ಮಾಡಿವೆ. ತಮ್ಮ ಮಾರ್ಗದರ್ಶಕ ಕಾನ್ಶಿರಾಮ್ ಅವರು ಹಾಕಿಕೊಟ್ಟ ಪಕ್ಷದ ಬುನಾದಿಯು ಮಾಯಾವತಿ ಅವರ ಸರ್ವಾಧಿಕಾರಿ ನಿರ್ಧಾರಗಳಿಂದ ಕಳಚಿ ಬೀಳುತ್ತಿದೆ. ಪಕ್ಷದ ಆನೆಯು ಬಿಡಾರ ಸೇರುವಂತೆ ಮಾಡಿದೆ.

ಬಿಎಸ್‌ಪಿ ಕುಸಿತ – ಪರ್ಯಾಯ ಶಕ್ತಿಗಳ ಬೆಳವಣಿಗೆ

2012ರಲ್ಲಿ ಅಧಿಕಾರ ಕಳೆದುಕೊಂಡ ನಂತರ ಮಾಯಾವತಿ ಅವರು ದಲಿತ ಸಮುದಾಯದ ಶಕ್ತಿ, ಧ್ವನಿಯಾಗಿ ಇರುವುದನ್ನೇ ಮರೆತಿದ್ದಾರೆ. ಸಾರ್ವಜನಿಕ ರಂಗದಿಂದ ಕಣ್ಮರೆಯಾಗಿರುವ ಮಾಯಾವತಿ, ಇಂದು ಯಾವುದೇ ದೃಷ್ಟಿಕೋನ ಅಥವಾ ತಂತ್ರವಿಲ್ಲದ ರಾಜವಂಶದಂತೆ ವರ್ತಿಸುತ್ತಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಬಹುಜನ ರಾಜಕೀಯವನ್ನು ಬಿಟ್ಟುಕೊಟ್ಟಿದ್ದಾರೆ.

ಮಾಯಾವತಿಯವರ ತಪ್ಪು ನಿರ್ಧಾರಗಳು, ಮೂಲ ಬಹುಜನ ರಾಜಕೀಯದಿಂದ ಪ್ರಬಲ ಜಾತಿಗಳನ್ನು ಓಲೈಸುವತ್ತ ಅವರ ರಾಜಕೀಯ ಬದಲಾವಣೆ, ಅಧಿಕಾರದಲ್ಲಿರುವ ಪಕ್ಷದೊಂದಿಗೆ ಸಂಶಯಾಸ್ಪದ ಒಡನಾಟ, ನಿರ್ಣಾಯಕ ದಲಿತ ವಿಷಯಗಳ ಬಗೆಗಿನ ಮೌನ ಬಿಎಸ್‌ಪಿಯಲ್ಲಿ ಗಂಭೀರ ಬಿಕ್ಕಟ್ಟನ್ನು ಸೃಷ್ಟಿಸಿದೆ.

ಅವರು ದಲಿತ ಸಮುದಾಯದಿಂದ ದೂರ ಉಳಿದಂತೆ, ಚಂದ್ರಶೇಖರ್ ಆಜಾದ್ ಅವರ ಭೀಮ್ ಆರ್ಮಿ ಮತ್ತು ಅಂಬೇಡ್ಕರ್ ಜನ ಮೋರ್ಚಾದಂತಹ ಸಣ್ಣ ದಲಿತ ಸಂಘಟನೆಗಳು ದಲಿತರ ಧ್ವನಿಯಾಗಿ ಹೊರಹೊಮ್ಮಿವೆ. ಅಂತೆಯೇ, ಈಗ ಆಕಾಶ್‌ ಅವರಿಗೆ ತನ್ನದೇ ಆದ ರಾಜಕೀಯ ಪ್ರಯಾಣವನ್ನು ರೂಪಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X