ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಆದರೆ, ಯೋಜನೆಗೆ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಕೊರತೆಯ ನೆಪ ಹೇಳಿ, ಅಗತ್ಯ ಅಕ್ಕಿ ಪೂರೈಕೆ ಮಾಡಲು ಸಾಧ್ಯವಿಲ್ಲವೆಂದು ಹೇಳಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ಮುಂದಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಪಡಿತರದಾರರಿಗೆ ತಲಾ 10 ಕೆ.ಜೆ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಅದಕ್ಕಾಗಿ, ಸರ್ಕಾರಕ್ಕೆ ಪ್ರತಿ ತಿಂಗಳು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಕೇಂದ್ರದ ಅಸಹಕಾರದ ಹಿನ್ನೆಲೆ, ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಗೆ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಕರೆ ಮಾಡಿ, ಅಕ್ಕಿ ಖರೀದಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಚಂದ್ರಶೇಖರ್ ರಾವ್ ಅವರೇ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ, “ಕರ್ನಾಟಕದ ನೂತನ ಮುಖ್ಯಮಂತ್ರಿಗಳ ಫೋನ್ ಬಂದಿತ್ತು. ‘ಅನ್ನಭಾಗ್ಯ ಯೋಜನೆ ಖಾತ್ರಿ ಪಡಿಸಲು ಅಕ್ಕಿ ಬೇಕಾಗಿದೆ. ದರ ನಿಗದಿ ಮಾಡಿದರೆ ಖರೀದಿ ಮಾಡುತ್ತೇವೆ’ ಎಂದು ಕೇಳಿದ್ದಾರೆ. ದರ ನಿಗದಿ ಬಗ್ಗೆ ಮಾತುಕತೆ ನಡೆಯುತ್ತಿದೆ. ಅಕ್ಕಿ ದಾಸ್ತಾನು ಮಾರಾಟ-ಖರೀದಿಗೆ ವಿಧಾನಗಳನ್ನು ರೂಪಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ತೆಲಂಗಾಣ ತನ್ನ ಪಡಿತರ ಅಗತ್ಯಗಳನ್ನು ಪೂರೈಸಲು ಹೇರಳವಾಗಿ ಅಕ್ಕಿ ದಾಸ್ತಾನುಗಳನ್ನು ಹೊಂದಿದೆ. ಕೇಂದ್ರದ ನಿರ್ಧಾರದಿಂದ ತೆಲಂಗಾಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ” ಎಂದು ತೆಲಂಗಾಣ ನಾಗರಿಕ ಸರಬರಾಜು ಅಧಿಕಾರಿಗಳು ತಿಳಿಸಿದ್ದಾರೆ.
“ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ರಾಜ್ಯಗಳಿಗೆ ಗೋಧಿ ಮತ್ತು ಅಕ್ಕಿ ಮಾರಾಟವನ್ನು ಕೇಂದ್ರ ಸರ್ಕಾರ ನಿಲ್ಲಿಸಿದೆ. ‘ಅನ್ನಭಾಗ್ಯ’ ಜಾರಿ ಮಾಡದಂತೆ ತಡೆಯುವ ಷಡ್ಯಂತ್ರ ಇದಾಗಿದೆ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ದಯವಿಟ್ಟು ಈ ವಿಷಯ ಬೊಮ್ಮಾಯಿ ಅವರಿಗೆ ತಿಳಿಸಿ ಬಿಡಿ.