ಪ್ರಧಾನಿ ಮೋದಿ ಅವರ ತವರು ರಾಜ್ಯ, ಮಾದರಿ ರಾಜ್ಯದ ಮಾಡೆಲ್ ಗುಜರಾತ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ 286 ಸಿಂಹಗಳು ಮತ್ತು 456 ಚಿರತೆಗಳು ಸಾವನ್ನಪ್ಪಿವೆ ಎಂದು ಗುಜರಾತ್ ಸರ್ಕಾರ ಹೇಳಿದೆ.
ಗುಜರಾತ್‌ನಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ವನ್ಯಜೀವಿಗಳ ಸಾವಿನ ಬಗ್ಗೆ ಅರಣ್ಯ ಸಚಿವ ಮುಲುಭಾಯಿ ಬೇರಾ ಮಾಹಿತಿ ನೀಡಿದ್ದಾರೆ. “ಗುಜರಾತ್‌ನಲ್ಲಿ ಎರಡು ವರ್ಷಗಳಲ್ಲಿ 143 ಮರಿಗಳು ಸೇರಿದಂತೆ 286 ಸಿಂಹಗಳು ಸಾವನ್ನಪ್ಪಿವೆ. 140 ಮರಿಗಳು ಸೇರಿದಂತೆ 456 ಚಿರತೆಗಳು ಮೃತಪಟ್ಟಿವೆ” ಎಂದು ಹೇಳಿದ್ದಾರೆ.
“2023ರಲ್ಲಿ 121 ಸಿಂಹಗಳು ಮತ್ತು 225 ಚಿರತೆಗಳು ಸಾವನ್ನಪ್ಪಿವೆ. 2024ರಲ್ಲಿ 165 ಸಿಂಹಗಳು ಮತ್ತು 231 ಚಿರತೆಗಳು ಸಾವನ್ನಪ್ಪಿವೆ” ಎಂದು ತಿಳಿಸಿದ್ದಾರೆ.
ಮೃತಪಟ್ಟ 286 ಸಿಂಹಗಳಲ್ಲಿ 228 ಸಿಂಹಗಳು ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದು, 58 ಸಿಂಹಗಳು ವಾಹನಗಳಿಗೆ ಢಿಕ್ಕಿ ಹೊಡೆದು ಅಥವಾ ತೆರೆದ ಬಾವಿಗೆ ಬಿದ್ದು ಮೃತಪಟ್ಟಿವೆ. ಅಂತೆಯೇ, 303 ಚಿರತೆಗಳು ನೈಸರ್ಗಿಕ ಕಾರಣಗಳಿಂದ ಮತ್ತು 153 ಸಾವುಗಳು ಅಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪಿವೆ” ಎಂದು ಸಚಿವರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಹಗರಣಗಳ ಕುಣಿಕೆ, ‘ಮೋಶಾ’ಗಳ ಪಾಶ: ಕುಮಾರಸ್ವಾಮಿಯವರ ಕತೆ ಏನು?
ಸಿಂಹ ಮತ್ತು ಚಿರತೆಗಳ ಅಸ್ವಾಭಾವಿಕ ಸಾವುಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಪಶುವೈದ್ಯರ ನೇಮಕಾತಿ ಮತ್ತು ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಸೇವೆಗಳನ್ನು ಆರಂಭಿಸಲಿದೆ. ಅಭಯಾರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವೇಗಮಿತಿ, ಸೂಚನಾ ಫಲಕ ಹಾಗೂ ಗಸ್ತು ತಿರುಗುವಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಏಷ್ಯಾ ಪ್ರಬೇಧದ ಸಿಂಹಗಳು ಇಡೀ ಜಗತ್ತಿನಲ್ಲಿ ಗುಜರಾತ್‌ನಲ್ಲಿ ಮಾತ್ರವೇ ಕಂಡುಬರುತ್ತವೆ. ಅದರಲ್ಲೂ, ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಮಾತ್ರವೇ ಇವೆ. ಈ ಪ್ರಬೇಧದ 674 ಸಿಂಹಗಳು ಗುಜರಾತ್‌ನಲ್ಲಿವೆ ಎಂದು 2020ರ ಜೂನ್‌ನಲ್ಲಿ ನಡೆದ ಪ್ರಾಣಿಗಣತಿ ಹೇಳಿತ್ತು.