ಮಕ್ಕಳ ಸರಣಿ ಹತ್ಯಾಕಾಂಡದ ನೈಜ ಘಟನೆಯಿಂದ ಪ್ರೇರಿತರಾದ ನಿರ್ದೇಶಕ ಮ್ಯಾಗ್ನಸ್ ವೋನ್ ಹಾರ್ನ್, 'ದ ಗರ್ಲ್ ವಿಥ್ ದ ನೀಡಲ್' ಚಿತ್ರದ ಮೂಲಕ ಒಂದು ಹುಡುಗಿಯ ಸುತ್ತಲಿನ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಾರೆ. ಆ ಹುಡುಗಿಯನ್ನು ಸೋಲಿಸಲು ಶ್ರಮಿಸುವ ಸಮಾಜದಲ್ಲಿ, ಬದುಕುಳಿಯುವ ಭಾವಚಿತ್ರವನ್ನು ಬಿಡಿಸಿಡುತ್ತಾರೆ.
ಅದು 1919. ಆಗತಾನೆ ಮೊದಲ ಮಹಾಯುದ್ಧ ಮುಗಿದಿದೆ. ಊರು ಸ್ಮಶಾನದಂತಿದೆ. ಯುದ್ಧಕ್ಕೆ ಹೋದ ಗಂಡಸರು ತಿರುಗಿಬಂದ ಬಗ್ಗೆ ಸುದ್ದಿ ಇಲ್ಲ. ಅಳಿದು ಉಳಿದವರಿಗೆ ಕೆಲಸವಿಲ್ಲ. ವಾಸಿಸಲು ಯೋಗ್ಯ ಮನೆಗಳಿಲ್ಲ. ಉಣ್ಣುವುದಕ್ಕಿಲ್ಲ, ಉಡುವುದಕ್ಕಿಲ್ಲ. ಆತಂಕ, ಅಸಹಾಯಕತೆ, ಅನಿಶ್ಚಿತತೆ ಆವರಿಸಿರುವ ಬದುಕು.
ಅದೇ ಸಂದರ್ಭದ ಆಸುಪಾಸು 1920ರಲ್ಲಿ, ಡೆನ್ಮಾರ್ಕಿನ ಕೋಪನ್‌ಹೆಗನ್ ನಗರದಲ್ಲಿ ವಾಸವಿದ್ದ ಮಕ್ಕಳ ಪಾಲಕಿ ಡ್ಯಾಗ್ಮರ್ ಎಂಬ ಮಹಿಳೆ, ಮಕ್ಕಳ ಹಂತಕಿಯಾಗಿ ಮಾರ್ಪಡುತ್ತಾಳೆ. ಆಕೆಯ ಕರಾಳ ಕೃತ್ಯ ಬಯಲಾಗಿ, ಭಯಮಿಶ್ರಿತ ವಾತಾವರಣ ಸೃಷ್ಟಿಸುತ್ತಾಳೆ. ಆ ನೈಜ ಘಟನೆಯನ್ನು ಆಧರಿಸಿ ‘ದ ಗರ್ಲ್ ವಿಥ್ ದ ನೀಡಲ್‘ ಚಿತ್ರವನ್ನಾಗಿಸಿದ್ದಾರೆ ನಿರ್ದೇಶಕ ಮ್ಯಾಗ್ನಸ್ ವೋನ್ ಹಾರ್ನ್.
ಯುವತಿ ಕ್ಯಾರೊಲಿನ್‌ಳ ಪತಿ ಯೋಧ, ಯುದ್ಧಕ್ಕೆ ಹೋದವನು ಮರಳಿ ಬಂದಿಲ್ಲ. ಬದುಕಿದ್ದಾನ-ಸತ್ತಿದ್ದಾನ ಎಂಬ ಸುದ್ದಿಯೂ ಇಲ್ಲ. ಹೊಟ್ಟೆಪಾಡಿಗಾಗಿ ಕಾರ್ಖಾನೆಯ ಕೆಲಸಕ್ಕೆ ಹೋಗದೆ ವಿಧಿಯಿಲ್ಲ. ಚಿಕ್ಕ ವಯಸ್ಸಿನ ಒಬ್ಬಂಟಿ ಹುಡುಗಿ, ಕಾರ್ಖಾನೆಯ ಮ್ಯಾನೇಜರ್‍ನ ಪ್ರೇಮಪಾಶದಲ್ಲಿ ಬೀಳುತ್ತಾಳೆ. ಒಟ್ಟಿಗೆ ಓಡಾಟ, ಕೂಡಾಟದಿಂದ ಗರ್ಭವತಿಯಾಗುತ್ತಾಳೆ. ಏನೂ ಇಲ್ಲದ ಬಡ ಹುಡುಗಿ- ಮದುವೆ, ಮಕ್ಕಳು, ಶ್ರೀಮಂತ ಕುಟುಂಬ, ಹೊಸ ಬದುಕಿನ ಕನಸು ಕಾಣುತ್ತಾಳೆ. ಕನಸಿನ ಲೋಕದಲ್ಲಿ ತೇಲುತ್ತಿರುವಾಗಲೇ, ಧುತ್ತನೆ ವಿಕಾರ ವ್ಯಕ್ತಿಯೊಬ್ಬ ಪ್ರತ್ಯಕ್ಷನಾಗುತ್ತಾನೆ. ಆತ ಆಕೆಯ ಪತಿ. ಆತನ ಸ್ಥಿತಿ, ಯುದ್ಧದ ಕ್ರೌರ್ಯವನ್ನು, ಭೀಕರತೆಯನ್ನು ನೋಡುಗರ ಎದೆಗೆ ದಾಟಿಸಿ ತಲ್ಲಣಗೊಳಿಸುತ್ತದೆ.
ಇದನ್ನು ಓದಿದ್ದೀರಾ?: ಫಿಲ್ಮ್ ಫೆಸ್ಟಿವಲ್ | ‘ಪೈರ್’ ಚೆನ್ನಾಗಿದೆ; ಉದ್ಘಾಟನಾ ಚಿತ್ರಕ್ಕಿರಬೇಕಾದ ನಿರೀಕ್ಷೆ ಹುಸಿಗೊಳಿಸಿದೆ
ಬೆಚ್ಚಿಬಿದ್ದ ಹುಡುಗಿ, ‘ನಾನು ಗರ್ಭಿಣಿ, ಆದರೆ ಮಗು ನಿನ್ನದಲ್ಲ’ ಎನ್ನುತ್ತಾಳೆ. ಜೀವಂತ ಶವದಂತಿರುವ ಪತಿ, ‘ಕೆಲಸವಿಲ್ಲ, ಮನೆಯಿಲ್ಲ, ಜೊತೆಗಿರುತ್ತೇನೆ, ಸಹಿಸಿಕೋ’ ಎಂದು ಬೇಡಿಕೊಳ್ಳುತ್ತಾನೆ. ಇಕ್ಕಟ್ಟಿಗೆ ಸಿಲುಕುವ ಕ್ಯಾರೊಲಿನ್, ಒರಟಾಗಿ ಹೊರಗಟ್ಟುತ್ತಾಳೆ. ಇತ್ತ ಮ್ಯಾನೇಜರ್‍ನೊಂದಿಗೆ ಮದುವೆಯಾಗಿ, ಆತನ ಮನೆಗೆ ತೆರಳುತ್ತಾಳೆ. ಮದುವೆಯ ಸಂಭ್ರಮ, ಶ್ರೀಮಂತಿಕೆ, ಮಹಲಿನಂತಹ ಮನೆ, ಆಳುಗಳು, ಭವ್ಯ ಬದುಕಿನ ಕನಸಿನಲ್ಲಿದ್ದ ಹುಡುಗಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಮ್ಯಾನೇಜರ್ ತಾಯಿಗೆ ಆ ಮದುವೆ ಇಷ್ಟವಿರುವುದಿಲ್ಲ. ಮಗನಿಗೆ, ಮನೆ ಮತ್ತು ಹುಡುಗಿ- ಎರಡಲ್ಲೊಂದು ಆಯ್ಕೆ ಮಾಡಿಕೋ ಎನ್ನುತ್ತಾಳೆ. ಆತ ಹುಡುಗಿಗೆ ‘ಕ್ಷಮಿಸು’ ಎನ್ನುವಲ್ಲಿಗೆ ಆಕೆಯ ಬದುಕು ಮತ್ತೆ ಬೀದಿಗೆ ಬೀಳುತ್ತದೆ.

ಹಸಿವು, ಅವಮಾನಗಳಿಂದ ಜರ್ಜರಿತಳಾದ ಆಕೆಯನ್ನು ಸಮಾಜ ನೆಲಮಟ್ಟ ಅದುಮುತ್ತಲೇ ಸಾಗುತ್ತದೆ. ಬದುಕಿಗೆ ಭಾರವಾದ ಮಗು ಹೊತ್ತ ಆಕೆ ಕೊನೆಗೊಂದು ನಿರ್ಧಾರಕ್ಕೆ ಬರುತ್ತಾಳೆ. ಸಾರ್ವಜನಿಕ ಸ್ನಾನಗೃಹದಲ್ಲಿ, ಟಬ್‌ನಲ್ಲಿ ಕಂಠಮಟ್ಟ ಮುಳುಗಿ ಉದ್ದನೆ ಸೂಜಿಯಿಂದ ಒರಟೊರಟಾಗಿ ಗರ್ಭಪಾತಕ್ಕೆ ಯತ್ನಿಸುತ್ತಾಳೆ. ರಕ್ತ-ನೀರು ಒಂದಾಗಿ, ನೋವು-ನರಳಾಟದಿಂದ ಚೀರುತ್ತಾಳೆ, ಪ್ರಜ್ಞೆ ತಪ್ಪುತ್ತಾಳೆ. ಆಕೆಯನ್ನು ಉಪಚರಿಸಿ, ಸಂತೈಸಿ, ಸಾಂತ್ವನ ಹೇಳುವ ಡ್ಯಾಗ್ಮರ್ ಎಂಬ ಮಕ್ಕಳ ಪಾಲಕಿ, ʼಕಷ್ಟವಾದರೆ ಕಾಣುʼ ಎಂದು ವಿಳಾಸ ತಿಳಿಸಿ ಹೋಗುತ್ತಾಳೆ.
ಎರಡೆರಡು ಹೊಟ್ಟೆ ತುಂಬಿಸಲು ಹೊಟ್ಟೆ ಹೊತ್ತುಕೊಂಡೇ ಕೆಲಸ ಮಾಡುವ ಕ್ಯಾರೊಲಿನ್‌ಗೆ, ಕೆಲಸದ ವೇಳೆಯಲ್ಲಿಯೇ ನೋವು ಕಾಣಿಸಿಕೊಳ್ಳುತ್ತದೆ. ಜನನಿಬಿಡ ಸ್ಥಳದಲ್ಲಿಯೇ ಮಗುವಿಗೆ ಜನ್ಮ ನೀಡುತ್ತಾಳೆ. ಚೆಂದದ ಹಸುಗೂಸಿಗೆ ಹಾಲುಡಿಸುತ್ತ ನೋವು ಮರೆಯುತ್ತಾಳೆ. ಮತ್ತೆ ಪ್ರತ್ಯಕ್ಷನಾಗುವ ಪತಿ, ‘ಮಗುವನ್ನು ನಾವು ಸಾಕೋಣ’ ಎನ್ನುತ್ತಾನೆ. ಆದರೆ, ಕ್ಯಾರೊಲಿನ್‌ಗೆ ತನ್ನ ಹಸಿವು ನೀಗಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮಗು ಭಾರವೆನಿಸುತ್ತದೆ. ಗಂಡನನ್ನು ತೊರೆದು ಮಕ್ಕಳ ಪಾಲಕಿ ಡ್ಯಾಗ್ಮರ್ ಮಡಿಲಿಗೆ ಮಗು ಹಾಕುತ್ತಾಳೆ. ಆಕೆ, ಆ ಮಗುವನ್ನು ಶ್ರೀಮಂತರಿಗೆ ದತ್ತು ಕೊಟ್ಟಿದ್ದಾಗಿ ಹೇಳಿ, ಆಕೆಯನ್ನು ತನ್ನ ಮನೆಗೆ ಹೊಂದಿಕೊಂಡಂತಿರುವ ಸಿಹಿ ಮಾರುವ ಅಂಗಡಿಯ ಮಾಳಿಗೆಯಲ್ಲಿ ಇರಲು ಆಶ್ರಯ ನೀಡುತ್ತಾಳೆ. ಹಸಿಬಾಣಂತಿಯ ಎದೆಯಾಲು ಕುಡಿಯಲು ಕಂದನಿಲ್ಲದಾಗ, ಬೆಳೆದುನಿಂತ ಡ್ಯಾಗ್ಮರ್‍ಳ ಮಗಳಿಗೇ ಹಾಲೂಡಿಸಿ, ತನುವನ್ನು ತಣಿಸಿಕೊಳ್ಳುತ್ತಾಳೆ. ತದನಂತರ ಅಂತಹ ಅನಾಥ ಮಕ್ಕಳಿಗೆ ಹಾಲೂಡಿಸುವ ದಾದಿಯಂತಾಗುತ್ತಾಳೆ.
ಏತನ್ಮಧ್ಯೆ, ಕ್ಯಾರೊಲಿನ್ ಮತ್ತು ಡ್ಯಾಗ್ಮರ್- ಒಬ್ಬರಿಗೊಬ್ಬರು ಆತುಕೊಳ್ಳುವ ಮೂಲಕ ಆಪ್ತರಾಗುತ್ತಾರೆ. ಡ್ಯಾಗ್ಮರ್ ಕೊಡುವ ಅಮಲೇರಿಸುವ ‘ಹನಿ’ಗಳ ದಾಸಳಾಗುತ್ತಾಳೆ. ಹೀಗೇ ಕಾಲ ಓಡುವಾಗ… ಕ್ಯಾರೊಲಿನ್‌ಗೆ ಡ್ಯಾಗ್ಮರ್‍ಳ ಕರಾಳಲೋಕದ ಅರಿವಾಗುತ್ತದೆ. ಅಪ್ರಾಪ್ತ ಹೆಣ್ಣುಮಕ್ಕಳು, ಗಂಡನಿಲ್ಲದೆ ಹುಟ್ಟಿದ ಮಕ್ಕಳನ್ನು ಡ್ಯಾಗ್ಮರ್‍ಗೆ ನೀಡುವುದು, ಆಕೆ ಆ ಕೂಸುಗಳನ್ನು ಶ್ರೀಮಂತರಿಗೆ, ಅನಾಥಾಶ್ರಮಗಳಿಗೆ ದತ್ತು ಕೊಡುವುದಾಗಿ ಹೇಳಿ ನಂಬಿಸುವುದು, ಆಕೆ ಆ ಕಂದಮ್ಮಗಳ ಹತ್ಯೆ ಮಾಡುತ್ತಿರುವುದು ತಿಳಿಯುತ್ತದೆ. ಅದನ್ನು ಖುದ್ದಾಗಿ ಕಂಡ ಕ್ಯಾರೊಲಿನ್, ಪ್ರತಿಭಟಿಸಿದಾಗ, ಮನೆಯಿಂದ ಹೊರಹಾಕುವ ಬೆದರಿಕೆಯೊಡ್ಡುತ್ತಾಳೆ.
ಇದನ್ನು ಓದಿದ್ದೀರಾ?: ಲೈಂಗಿಕ ಕಾರ್ಯಕರ್ತೆಯ ನೋವು-ನಲಿವುಗಳ ಕಥೆ ‘ಅನೋರಾ’ಗೆ ಐದು ಆಸ್ಕರ್ ಪ್ರಶಸ್ತಿಗಳ ಗರಿ
ಕೊನೆಗೊಂದು ದಿನ ಪೊಲೀಸರಿಗೆ ಅನುಮಾನ ಬಂದು, ಡ್ಯಾಗ್ಮರ್ ಮನೆಮೇಲೆ ದಾಳಿಯಾಗುತ್ತದೆ. ಡ್ಯಾಗ್ಮರ್‍ಗಳ ಕೃತ್ಯದಲ್ಲಿ ತಾನೂ ಪಾಲುದಾರಳಾದ ಭಯಕ್ಕೆ ಬಿದ್ದ ಕ್ಯಾರೊಲಿನ್, ಮನೆಯಿಂದ ಹಾರಿ ತಪ್ಪಿಸಿಕೊಳ್ಳುತ್ತಾಳೆ. ಕುರೂಪಿ ಪತಿಯನ್ನು ಹುಡುಕಿಕೊಂಡು ಹೋದಾಗ, ಆತ ಸರ್ಕಸ್‌ನಲ್ಲಿ ಪ್ರೇಕ್ಷಕರನ್ನು ರಂಜಿಸುವ ‘ವಸ್ತು’ವಾಗಿರುತ್ತಾನೆ. ಒಟ್ಟಾಗಿ ಬದುಕೋಣ ಎನ್ನುವ ಮಾನವಂತನಾಗಿರುತ್ತಾನೆ. ಮಗುವಿಗಾಗಿ ಹಂಬಲಿಸಿದಾಗ, ಡ್ಯಾಗ್ಮರ್‍ಳ ಮಗಳನ್ನೇ ದತ್ತು ಪಡೆಯುತ್ತಾಳೆ. ಬಂಡೆಗಲ್ಲುಗಳ ನಡುವೆ ನಳನಳಿಸುವ ಚಿಗುರನ್ನು ಚಿತ್ರಿಸಿಕೊಳ್ಳುತ್ತಾಳೆ.
ನಿರ್ದೇಶಕ ಮ್ಯಾಗ್ನಸ್ ವೋನ್ ಹಾರ್ನ್‌ಗೆ ಇದು ಮೂರನೇ ಚಿತ್ರ. ಆದರೆ ಆಯ್ಕೆ ಮಾಡಿಕೊಂಡಿರುವ ಕತೆ ಸವಾಲಿನದು. 1920ರ ಕಾಲಘಟ್ಟವನ್ನು ಕಟ್ಟಿಕೊಡಲು, ಚಿತ್ರವನ್ನು ಕಪ್ಪು-ಬಿಳುಪಿನಲ್ಲಿ ಚಿತ್ರಿಸಲಾಗಿದೆ. ಆ ಕಾಲದ ಕೋಪನ್‌ಹೆಗನ್ ನಗರವನ್ನು ಕಣ್ಮುಂದೆ ತರಲಾಗಿದೆ. ತರುವ ನಿಟ್ಟಿನಲ್ಲಿ ಸಣ್ಣ ಸಣ್ಣ ವಿವರಗಳನ್ನೂ ಸೂಕ್ಷ್ಮವಾಗಿ ಗಮನಿಸಲಾಗಿದೆ. ಸಿನಿಮಾಟೋಗ್ರಫಿ, ಸಂಕಲನ, ಹಿನ್ನೆಲೆ ಸಂಗೀತ- ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿವೆ. ಸಂಭಾಷಣೆಯಂತೂ ಸೂಪರ್ಬ್.
ಇನ್ನು ಕ್ಯಾರೊಲಿನ್ ಪಾತ್ರ ನಿರ್ವಹಿಸಿರುವ ವಿಕ್ಟೋರಿಯಾ ಕಾರ್ಮೆನ್ ಸೋನೆ ಹಾಗೂ ಡ್ಯಾಗ್ಮರ್ ಪಾತ್ರ ಮಾಡಿರುವ ಟ್ರೈನ್ ಡರ್‍ಹೋಮ್, ನಟಿಸಿಲ್ಲ, ಅದದೇ ಪಾತ್ರಗಳಾಗಿ ಬದುಕಿದ್ದಾರೆ. ಅದರಲ್ಲೂ ಕಾರ್ಮೆನ್ ಸೋನೆಯಂತೂ, ನೋವು ಮತ್ತು ನಿಟ್ಟುಸಿರುಗಳ ಏರಿಳಿತವನ್ನು ನೋಡುಗರ ಎದೆಗಿಳಿಸುವ ಪರಿ, ಅದ್ಭುತ.

ಡ್ಯಾನಿಷ್ ಭಾಷೆಯ ‘ದ ಗರ್ಲ್ ವಿಥ್ ದ ನೀಡಲ್’ ಹಲವು ಕಾರಣಗಳಿಗಾಗಿ ನೋಡಲೇಬೇಕಾದ ಚಿತ್ರ. ಮೇಲ್ನೋಟಕ್ಕೇ ಇದೊಂದು ಕ್ರೈಮ್ ಕಥಾನಕವೆನಿಸಿದರೂ, ನಾನ್ ಲೀನಿಯರ್ ತಂತ್ರದ ಮೂಲಕ ಬದುಕಿನ ಹಲವು ಪದರಗಳನ್ನು ಬಿಡಿಸಿಡುತ್ತದೆ. ಯುದ್ಧದ ಭೀಕರತೆಯನ್ನು, ಹಸಿವು-ಬಡತನ-ನಿರುದ್ಯೋಗದ ಬರ್ಬರ ಬದುಕನ್ನು, ಶೋಷಣೆಗೊಳಗಾಗುವ ಹೆಣ್ಣುಮಕ್ಕಳನ್ನು, ಅವಕಾಶಗಳೆಂಬ ಅನಾಹುತಗಳನ್ನು, ಭವಿಷ್ಯವಿಲ್ಲವೆಂದು ಕೊಲ್ಲುವ ಮನಸ್ಥಿತಿಯನ್ನು… ಒಟ್ಟೊಟ್ಟಿಗೇ ಕರುಳಿಗಿಳಿಸುತ್ತದೆ. ಕಾಡುತ್ತದೆ.
ಮಕ್ಕಳ ಸರಣಿ ಹತ್ಯಾಕಾಂಡದ ನೈಜ ಘಟನೆಯಿಂದ ಪ್ರೇರಿತರಾದ ನಿರ್ದೇಶಕ ಮ್ಯಾಗ್ನಸ್ ವೋನ್ ಹಾರ್ನ್, ಒಂದು ಹುಡುಗಿಯ ಕತೆ ಹೇಳುವ ಮೂಲಕ ತಣ್ಣನೆಯ ಕ್ರೌರ್ಯವನ್ನು ಬಿಚ್ಚಿಡುತ್ತಾರೆ. ಆ ಹುಡುಗಿಯನ್ನು ಪ್ರತಿ ಹಂತದಲ್ಲೂ ಸೋಲಿಸಲು ಶ್ರಮಿಸುವ ಸಮಾಜದಲ್ಲಿ, ಬದುಕುಳಿಯುವ ಭಾವಚಿತ್ರವನ್ನು ಬಿಡಿಸಿಡುತ್ತಾರೆ. ಇತಿಹಾಸದಿಂದ ಪಾಠ ಕಲಿಯದ ಮನುಷ್ಯನಿಗೆ, ಕಲಿಯುವುದು ಬಹಳಷ್ಟಿದೆ ಎಂದು ನೆನಪಿಸುತ್ತಾರೆ.

ಲೇಖಕ, ಪತ್ರಕರ್ತ