ಹುಬ್ಬಳ್ಳಿಯ ಅನುದಾನಿತ ಸೆಂಟ್ ಪೀಟರ್ಸ್ ಪ್ರೌಢಶಾಲೆಯ ಶಿಕ್ಷಕರ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಸಾಲಿನ ಹತ್ತನೇ ತರಗತಿ ಪರೀಕ್ಷೆ ಬರೆದ ಶಾಲೆಯ ಒಟ್ಟು ನಾಲ್ಕು ವಿದ್ಯಾರ್ಥಿಗಳಲ್ಲಿ ಮೂವರು ಅನುತ್ತೀರ್ಣರಾಗಿರುವ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದಲಿತ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ಕೋಟಾದ ಅನುದಾನಿತ ತೆಲುಗು ಮಾಧ್ಯಮದ ಸೆಂಟ್ ಪೀಟರ್ಸ್ ಪ್ರೌಢಶಾಲೆಯು 2022-23 ಸಾಲಿನ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶದಲ್ಲಿ ಅತ್ಯಂತ ಕಳಪೆ ಮಟ್ಟದ ಸಾಧನೆಯನ್ನು ದಾಖಲಿಸಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯ ಹತ್ತನೇ ತರಗತಿಗೆ ಕೇವಲ ನಾಲ್ಕು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೂ ಅದರಲ್ಲಿ ಮೂರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಇಲ್ಲಿನ ಶಿಕ್ಷಣದ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಒಬ್ಬ ಮುಖ್ಯಶಿಕ್ಷಕ ಸೇರಿದಂತೆ ಒಟ್ಟು ಮೂವರು ಶಿಕ್ಷಕರಿಗಾಗಿ ಸರ್ಕಾರ ತಿಂಗಳಿಗೆ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಸಂಬಳಕ್ಕಾಗಿ ವ್ಯಯಿಸುತ್ತಿದೆ. ಈ ಶಾಲೆಯು ಸತತವಾಗಿ ಕಳಪೆ ಸಾಧನೆ ಪ್ರದರ್ಶಿಸುತ್ತಿದ್ದರೂ ಸಂಬಂಧಪಟ್ಟ ಬಿಇಒ ಮತ್ತು ಡಿಡಿಪಿಐ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಕರ್ತವ್ಯಲೋಪದ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ಪ್ರಸಕ್ತ ಸಾಲಿನ ಹತ್ತನೇ ತರಗತಿಗೆ ಕೇವಲ ಇಬ್ಬರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಸೇರಿಸಿದರೂ ಕೇವಲ 8-10 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಪ್ರವೇಶ ಪಡೆದಿರುವುದು ಕಳವಳಕಾರಿ ಸಂಗತಿ.
ಆಡಳಿತದ ಜವಾಬ್ದಾರಿ ಮರೆತು, ವಿದ್ಯಾರ್ಥಿಗಳ ಸಾಧನೆ ಮತ್ತು ಶಾಲೆಯ ನಿರ್ವಹಣೆಯ ಕುರಿತು ನಿರ್ಲಕ್ಷ್ಯ ಧೋರಣೆ ಹೊಂದಿರುವ ಧಾರವಾಡ ಬಾಸೆಲ್ ಮಿಷನ್ ಸಂಸ್ಥೆಯ ಬಿಷಪ್ ಮಾರ್ಟಿನ್ ಸಿ ಬುರ್ಗಾಯಿ, ಬಿಷಪ್ ನಿರಂಜನ, ಸೆಂಟ್ ಪೀಟರ್ಸ್ ಚರ್ಚಿನ ಫಾದರ್, ಕಾರ್ಯದರ್ಶಿ ಮತ್ತು 61 ವಾರ್ಡಿನ ಹಾಲಿ ಪಾಲಿಕೆ ಸದಸ್ಯ ಮತ್ತು ಪಾಲಿಕೆಯ ಹಾಲಿ ವಿರೋಧ ಪಕ್ಷದ ನಾಯಕರೂ ಆಗಿರುವ ದೊರೆರಾಜ ಮನ್ನೆಕುಂಟ್ಲ ಮುಂತಾದವರು ಇಲ್ಲಿನ ಅಸಮರ್ಥ ಶಿಕ್ಷಕರಿಗೆ ಒತ್ತಾಸೆಯಾಗಿ ನಿಂತು ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಹಣಕ್ಕಾಗಿ ಬ್ಲಾಕ್‌ಮೇಲ್; ಯುವತಿಯ ತಿರುಚಿದ ಅಶ್ಲೀಲ ಫೋಟೊ ತಂದೆಗೆ ಕಳುಹಿಸಿದ ಕಿರಾತಕ
ಸಮರ್ಪಕ ನಿರ್ವಹಣೆಯ ಕೊರತೆಯಿಂದ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಬ್ರಿಟಿಷ್ ಕಾಲದ ಶಿಥಿಲಾವಸ್ಥೆಯ ಶಾಲಾ ಕಟ್ಟಡವು ಸಹ ಮುಂಬರುವ ದಿನಗಳಲ್ಲಿ ಅವಘಡಗಳಿಗೆ ಒಳಗಾಗುವ ಸಂಭವವಿರುವುದನ್ನು ಅಲ್ಲಗಳೆಯುವಂತಿಲ್ಲ.
ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಶಾಲೆಯ ಆಡಳಿತ ಮಂಡಳಿಯಾದ ಬಾಸೆಲ್ ಮಿಷನ್ ಟ್ರಸ್ಟ್ ಧಾರವಾಡ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಅಖಿಲ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ರಾಜಾಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಕಾಂತ ಯಾದವ, ಹಿರಿಯ ದಲಿತ ಹೋರಾಟಗಾರ ಲೋಕಮಾನ್ಯ ರಾಮದತ್ತ, ಆನಂದ ಮಾದರ ಮುಂತಾದವರು ಉಪಸ್ಥಿತರಿದ್ದರು.