ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರುವುದು ನಷ್ಟದಲ್ಲಿ ನಡೆಯುತ್ತಿರುವ ಕೈಗಾರಿಕೆಗಳಿಗೆ ಮತ್ತಷ್ಟು ಹೊರೆ ಆಗಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮತ್ತು ಹಾಲಿ ಸದಸ್ಯೆ ಉಮಾ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಪರಸ್ಪರ ಕೈಗಾರಿಕೆಗಳು ಅನಾರೋಗ್ಯಕರ ವ್ಯವಹಾರಿಕ ಪೈಪೋಟಿಯಿಂದಾಗಿ ನಷ್ಟ ಅನುಭವಿಸುತ್ತಿವೆ. ಇದೀಗ ವಿದ್ಯುತ್ ದರ ಏರಿಕೆಯಿಂದಾಗಿ ಕೈಗಾರಿಕೆಗಳ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ. ಕೆಲಸಗಾರರ ಕೊರತೆಯಿಂದ ಯಂತ್ರಗಳ ಸಹಾಯದಿಂದ ಹಲವು ಕೈಗಾರಿಕೆಗಳು ನಡೆಯುತ್ತಿವೆ. ಹಾಗಾಗಿ ಕೈಗಾರಿಕೆಗಳು ನಷ್ಟಕ್ಕೆ ಒಳಗಾಗುತ್ತವೆ ಎಂದಿದ್ದಾರೆ.
ಈ ಸಮಯದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ಬಗ್ಗೆ ಮಾತನಾಡಿರುವುದು ಸ್ವಾಗತಾರ್ಹ. ಸರ್ಕಾರ ವಿದ್ಯುತ್ ದರ ಏರಿಕೆ ಕೈ ಬಿಟ್ಟು, ಸಣ್ಣ ಕೈಗಾರಿಕೆಗಳ ಸಹಾಯಕ್ಕೆ ಬರಲಿ ಎಂದು ಒತ್ತಾಯಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಉಂಟಾಗಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಖಾಸಗಿ ಬಸ್ ಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ರಾಜ್ಯಾದ್ಯಂತ ಇವೆ. ಅಲ್ಲದೆ ಆಟೋ ಚಾಲಕರಿಗೂ ಪ್ರಯಾಣಿಕರು ಸಿಗದೆ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಸರ್ಕಾರ ಈ ಬಗ್ಗೆಯೂ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಗೃಹಜ್ಯೋತಿ’ | ನೋಂದಣಿಗೆ ʼಆಧಾರ್ʼ ಸಾಕು ಎಂದು ಗೊಂದಲಗಳಿಗೆ ತೆರೆ ಎಳೆದ ಇಂಧನ ಇಲಾಖೆ
ಖಾಸಗಿ ಬಸ್ ಅವಲಬಿತರು ಮತ್ತು ಆಟೋ ಚಾಲಕರ ಮಕ್ಕಳಿಗೆ ಖಾಸಗಿ ಶಾಲೆ ಕಾಲೇಜುಗಳಲ್ಲಿ ಶುಲ್ಕವನ್ನು ಸರ್ಕಾರ ಬರಿಸಲು ಕ್ರಮ ಕೈಗೊಳ್ಳಬೇಕು. ಆಟೋ ಪರ್ಮಿಟ್ ಮತ್ತು ಎಫ್ ಸಿ ಶುಲ್ಕಗಳನ್ನು ಮನ್ನಾ ಮಾಡಬೇಕು. ಈ ಮೂಲಕ ಆಟೋ ಚಾಲಕರಿಗೆ ನೆರವು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.