ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಹನಗೂಡು ಹೋಬಳಿಯ ರಾಮೇನಹಳ್ಳಿ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ದಲಿತ ಕುಟುಂಬದ ಜೊತೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರು ಸಹ ಆರೋಪಿಗಳನ್ನು ವಶಕ್ಕೆ ಪಡೆಯದೆ, ಕಾನೂನು ರೀತ್ಯಾ ಕ್ರಮ ಕೈಗೊಳ್ಳದಿರುವ ಸಲುವಾಗಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್ ವಾದಿ ), ಡಿಹೆಚ್ಎಸ್, ದಸಂಸ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ನಿಲುವಾಗಿಲು ಗ್ರಾಮದಿಂದ ಹುಣಸೂರಿನ ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿದರು.
ದಿನಾಂಕ 28-02-2025 ರಂದು ಸಂಜೆ 7 ರ ಆಸುಪಾಸಿನಲ್ಲಿ ರಾಮೇನಹಳ್ಳಿ ಹಳ್ಳಿ ಗ್ರಾಮದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಉಲ್ಲಾಸ್,ಚಿರಾಗ್, ಸೂರಿ, ಶಶಾಂಕ್ ಸೇರಿದಂತೆ ಏಳು ಜನರು ಹಲ್ಲೆ ನಡೆಸಿದ್ದರು. ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ, ಇದುವರೆಗೆ ಕಾನೂನಾತ್ಮಕವಾಗಿ ಬಂಧಿಸಿಲ್ಲ, ನೊಂದ ಕುಟುಂಬಕ್ಕೆ ಪರಿಹಾರ, ಸೂಕ್ತ ರಕ್ಷಣೆ ಒದಗಿಸಿಲ್ಲ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಿಲುವಾಗಿಲು ಗ್ರಾಮದಿಂದ ಹುಣಸೂರಿನ ಸಂವಿಧಾನ ವೃತ್ತದ ಮೂಲಕ ಪಾದಯಾತ್ರೆ ನಡೆಸಿದರು.
ದಸಂಸ ಹಿರಿಯ ಮುಖಂಡರಾದ ಹರಿಹರ ಆನಂದಸ್ವಾಮಿ ಮಾತನಾಡಿ ” ವಾರಗಳೆ ಕಳೆದರು ಆರೋಪಿಗಳ ಮೇಲೆ ಕ್ರಮ ಜರುಗಿಸಿಲ್ಲ, ಹಾಗೇ ವಶಕ್ಕೆ ಪಡೆದಿಲ್ಲ.ದಿನೇ ದಿನೇ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು ನ್ಯಾಯ ದೊರಕುತಿಲ್ಲ. ಸಂವಿಧಾನದ ಆಶಯಗಳು ಈಡೇರಬೇಕು, ಸಂವಿಧಾನದ ಹೆಸರು ಹೇಳಿ ಮಾಡಬಾರದನ್ನು ಮಾಡುತ್ತಿದ್ದಾರೆ. ಜನರಿಗೆ ತಮ್ಮ ಹಕ್ಕುಗಳ ಮೇಲೆ ಯಾವುದೇ ನಂಬಿಕೆ, ವಿಶ್ವಾಸ ಉಳಿದಿಲ್ಲ ” ಎಂದು ವಿಷಾದ ವ್ಯಕ್ತಪಡಿಸಿದರು.

ಹಕ್ಕೋತ್ತಾಯಗಳು:
- ಜಾತ್ರೆ ನಡೆಯುವ ಸ್ಥಳದಲ್ಲಿ ಈಗಾಗಲೇ ಹಲವು ಬಾರಿ ಇಂತಹ ಗಲಾಟೆ ನಡೆದಿದ್ದು. ಪೋಲೀಸರ ಗಮನಕ್ಕಿದೆ. ಆದರೆ ಸೂಕ್ತ ಬಂದೋಬಸ್ತ್ ನಿಯೋಜಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
- ಗಲಾಟೆ ನಡೆದ ಸ್ಥಳದಲ್ಲಿ ಪೊಲೀಸ್ ನವರು ಗಾಯಾಳುಗಳಿಗೆ ರಕ್ಷಣೆ ನೀಡದೆ, ಆರೋಪಿಗಳೊಂದಿಗೆ ಷಾಮೀಲಾಗಿ ಸುಮಾರು 2 ರಿಂದ 3 ಗಂಟೆಗಳ ನಂತರ ಹೇಳಿಕೆ ಪಡೆದು. ಎದುರು ದೂರು ಕೊಡಿಸುವಲ್ಲಿ ಇಲಾಖೆಯ ಆರಕ್ಷಕ ನಿರೀಕ್ಷಕಿ ರಾಧ ಹಾಗೂ ಉಪನಿರೀಕ್ಷಕ ರವಿ ಹೆಚ್ ಸಿ ಇವರುಗಳು ಪ್ರಕರಣ ತಿರುಚಲು ಸಂಚು ರೂಪಿಸಿರುತ್ತಾರೆ. ಇವರುಗಳ ಸಂಭಾಷಣೆಯ ಸಿಡಿಆರ್ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು.
- ಆರೋಪಿಗಳು ತಲೆ ಮರೆಸಿಕೊಳ್ಳಲು ಸಹಕಾರ ನೀಡಿರುವ ಪೋಲೀಸರ ಮೇಲೆ ಶಿಸ್ತು ಕ್ರಮ ಜರುಗಿಸಿ, ನೊಂದ ಗಾಯಾಳುಗಳಿಗೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ನೀಡಬೇಕು. ದೌರ್ಜನ್ಯಕ್ಕೊಳಗಾದ ಗಾಯಾಳುಗಳ ಮೇಲೆ ಸುಳ್ಳು ದೂರು ನೀಡಿರುವುದನ್ನು ವಜಾಗೊಳಿಸಬೇಕು.
- ಗಲಾಟೆಯ ಸಂಬಂಧ ದಿನಾಂಕ : 01-03-2025 ರಂದು ತಹಸೀಲ್ದಾರ್ ರವರು ಮಧ್ಯೆ ಪ್ರವೇಶ ಮಾಡಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಗಮನ ಹರಿಸಬೇಕೆಂದು ಸಿಪಿಐಎಂ ಪಕ್ಷದ ವತಿಯಿಂದ ಮನವಿ ಮಾಡಿದ್ದೆವು. ಘಟನೆಯ ಬಗ್ಗೆ ಕಿಂಚಿತ್ತು ಗಮನ ಹರಿಸದೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸದೆ ನಿರ್ಲಕ್ಷ್ಯತೆ ವಹಿಸಿರುತ್ತಾರೆ.
ಆದ್ದರಿಂದ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಹಿರಿಯ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಾ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಸೂಕ್ತ ರಕ್ಷಣೆ ನೀಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಗ್ಯಾರೆಂಟಿ ಯೋಜನೆಗಳಿಗೆ ದಲಿತರ ದುಡ್ಡೇ ಬೇಕಾ; ದಸಂಸ
ಪ್ರತಿಭಟನೆಯಲ್ಲಿ ಡಿ ಹೆಚ್ ಎಸ್ ರಾಜ್ಯ ಕಾರ್ಯದರ್ಶಿ ಎನ್ ರಾಜಣ್ಣ, ಸಿಪಿಐಎಂ ಜಿಲ್ಲಾ ಸದಸ್ಯ ಕಾಮ್ರೇಡ್
ಕೆ ಬಸವರಾಜು, ವಕೀಲರಾದ ಪುಟ್ಟರಾಜು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಮಕೃಷ್ಣ,
ಸಿದ್ದೇಶ್, ರಾಜು ಚಿಕ್ಕ ಹುಣಸೂರು, ಜೆ ಮಹದೇವು, ದಲಿತ ಮುಖಂಡ ಕಾಂಕ್ರಿಟ್ ರಾಜು, ಸಿಪಿಐಎಂ ಪಕ್ಷದ
ಕಲ್ಕುಣಿಕೆ ಬಸವರಾಜು, ವೆಂಕಟೇಶ್, ಬೆಳತೂರು ವೆಂಕಟೇಶ್, ಶಿವರಾಮು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.