ಕೆಬಿಜೆಎನ್‌ಎಲ್ ಬೋರ್ಡ್ ಸಭೆಯ ನಡಾವಳಿ ಮತ್ತು ಕಾಮಗಾರಿ ಟೆಂಡರ್ ಆದೇಶ ತರದಿದ್ದರೆ ಡಾ ಅಜಯಸಿಂಗ್ ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಮಲ್ಲಾಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿ ತೀರ್ಮಾನಿಸಿದೆ ಎಂದು ಸಮಿತಿ ಸದಸ್ಯ ಡಾ. ಮಹೇಶಕುಮಾರ್ ರಾಠೋಡ್ ತಿಳಿಸಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಕಳೆದ ನಾಲ್ಕು ದಶಕದ ಹೋರಾಟದ ಪ್ರತಿಫಲವಾಗಿ ಆರಂಭಗೊಂಡಿರುವ ಮಲ್ಲಾಬಾದ ಏತ ನೀರಾವರಿ ಯೋಜನೆಯ ಕಾಮಗಾರಿ ಸರ್ಕಾರದ ಅಧಿಕಾರಿಗಳ ಹಾಗೂ ಶಾಸಕರ ಬೇಜವಾಬ್ದಾರಿತನದಿಂದಾಗಿ ಸ್ಥಗಿತಗೊಂಡಿತ್ತು. ಸ್ಥಗಿತಗೊಂಡಿರುವ ಮಲ್ಲಾಬಾದ್ ಏತ ನೀರಾವರಿ ಕಾಮಗಾರಿಗಳ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕೆಂದು ನಡೆಸಿದ ನಿರಂತರ ಹೋರಾಟ ಮಾಡಲಾಗಿದೆ. ಇದರ ಪ್ರತಿಫಲವಾಗಿ 202324ನೇ ಸಾಲಿನ ದರಗಳಂತೆ ಮಲ್ಲಾಬಾದ ಏತ ನೀರಾವರಿಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹327 ಕೋಟಿ ರೂಪಾಯಿಗಳ ಅನುಮೋದನೆ ದೊರೆತಿದೆ. ಆದರೂ ಪ್ರಸ್ತುತ ಸರ್ಕಾರ ಕಾಮಗಾರಿ ಪ್ರಾರಂಭಿಸದೆ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಈಗ ಅದೇ ಕೆಲಸಕ್ಕೆ ₹359.67 ಕೋಟಿ ರೂಪಾಯಿಗಳು ಬೇಕಾಗಿದೆ. ಅಧಿಕಾರಿಗಳ ಮತ್ತು ಶಾಸಕರ ನಿರ್ಲಕ್ಷ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹32.67 ಕೋಟಿ ಹೊರೆಯಾಗಿದೆ” ಎಂದರು.
“ಮಾರ್ಚ್ 8ರಂದು ಜೇವರ್ಗಿಗೆ ಆಗಮಿಸುತ್ತಿರುವ ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವ ಡಿ ಕೆ ಶಿವಕುಮಾರ ಅವರು ಕೆಬಿಜೆಎನ್‌ಎಲ್ ಬೋರ್ಡ್ ಸಭೆಯ ನಡಾವಳಿಗಳನ್ನು ಮತ್ತು ಮಲ್ಲಾಬಾದ ಏತ ನೀರಾವರಿ ಯೋಜನೆ ವ್ಯಾಪ್ತಿಯ ಬಾಕಿ ಕಾಮಗಾರಿಗಳ ಟೆಂಡರ್ ಆದೇಶ ಪ್ರತಿಗಳನ್ನು ಮಲ್ಲಾಬಾದ ಏತ ನೀರಾವರಿ ಹೋರಾಟ ಸಮಿತಿಯ ನಿಯೋಗದೊಂದಿಗೆ ಸಭೆ ನಡೆಸಿ ರೈತ ಹೋರಾಟಗಾರರಿಗೆ ಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲಾದ್ಯತ ಭತ್ತ, ರಾಗಿ ಖರೀದಿ ಕೇಂದ್ರ ಸ್ಥಾಪನೆ, ರೈತ ಸಂಘದ ಹೋರಾಟದ ಫಲ : ಹೊಸೂರು ಕುಮಾರ್
“ಜೇವರ್ಗಿ ತಹಶೀಲ್ದಾರರು ಮದ್ಯಪ್ರವೇಶ ಮಾಡಿ ನಿರಾವರಿ ಸಚಿವರ ಜತೆಗೆ ರೈತರ ನಿಯೋಗದ ಮಾತುಕತೆಗೆ ಅವಕಾಶ ಮಾಡಿಕೊಡಬೇಕು. ಒಂದು ವೇಳೆ ಸದರಿ ಆದೇಶ ಪ್ರತಿಗಳನ್ನು ತರದೇ ಮಲ್ಲಾಬಾದ ಏತ ನೀರಾವರಿ ಹೋರಾಟ ಸಮಿತಿಯ ಮೂಲಕ ನಡೆಸಲಾಗುತ್ತಿರುವ ರೈತ ಹೋರಾಟವನ್ನು ಕಡೆಗಣಿಸಿ ಜೇವರ್ಗಿ ಮತ ಕ್ಷೇತ್ರದ ರೈತರಿಗೆ ಮತ್ತು ರೈತ ಹೋರಾಟಕ್ಕೆ ನಿರ್ಲಕ್ಷ್ಯ ಮಾಡಿದರೆ, ಇದೇ ತಿಂಗಳು ಮಾರ್ಚ್ 08ರಂದು ಜೇವರ್ಗಿಗೆ ಆಗಮಿಸುತ್ತಿರುವ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರೂ ಆದ ಡಿ ಕೆ ಶಿವಕುಮಾರ್ ಮತ್ತು ನಮ್ಮ ಕ್ಷೇತ್ರದ ರೈತರ ಅಭಿವೃದ್ಧಿ ಕಡೆಗಣಿಸುತ್ತಿರುವ ಶಾಸಕ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಡಾ. ಅಜಯಸಿಂಗ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಬಾಬು ಬಿ ಪಾಟೀಲ್, ಇಬ್ರಾಹಿಂ ಪಟೇಲ್ ಯಾಳವಾರ, ಮಾಂತಗೌಡ ನಂದಿಹಳ್ಳಿ, ಮಹಮ್ಮದ್ ಚೌದ್ರಿ ಕೊಡಚಿ, ಬಿ ಎಸ್ ಮಾಲಿಪಾಟಿಲ್, ರಾಜಾ ಪಟೇಲ್ ಯಾಳವಾರ, ಗುರನಾಥ ಸಾಹು ರಾಜವಾಳ, ವಜೀರ ಪಟೇಲ ಸಿಗರತಳ್ಳಿ ಇದ್ದರು.