ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಕಾನ್ಸ್‌ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲು ಗೃಹ ಸಚಿವಾಲಯ ಅರ್ಜಿ ಆಹ್ವಾನಿಸಿದೆ. 1,161 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಹ ಆಸಕ್ತರು ಏಪ್ರಿಲ್ 3ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಸಿಐಎಸ್ಎಫ್ – ಭಾರತದ ವಿವಿಧ ಭಾಗಗಳಲ್ಲಿರುವ ಕೈಗಾರಿಕೆಗಳು, ವಿಮಾನ ನಿಲ್ದಾಣಗಳು ಹಾಗೂ ಇತರ ಸರ್ಕಾರಿ ಉದ್ದಿಮೆಗಳಿಗೆ ಭದ್ರತಾ ಸೇವೆ ಒದಗಿಸುತ್ತದೆ. ಅಂತಹ ಪ್ರದೇಶಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುತ್ತದೆ.
ಇದೀಗ, 1,161 ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಮಾರ್ಚ್ 5ರಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಏಪ್ರಿಲ್ 3ರ ಒಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರಬೇಕು. 18ರಿಂದ 23 ವರ್ಷ ವಯೋಮಾನದವರಾಗಿರಬೇಕು ಎಂದು ಸಚಿವಾಲಯ ಹೇಳಿದೆ.
ಅರ್ಜಿ ಶುಲ್ಕವು ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳಿಗೆ 100 ರೂ.ಗಳನ್ನು ನಿಗದಿ ಮಾಡಲಾಗಿದೆ. ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
ಆಸಕ್ತ, ಅರ್ಹ ಅಭ್ಯರ್ಥಿಗಳು ಸಿಐಎಸ್‌ಎಫ್‌ನ ಅಧಿಕೃತ ವೆಬ್‌ಸೈಟ್ cisfrectt.cisf.gov.inನಲ್ಲಿ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಪ್ರಕ್ರಿಯೆಯು 5 ಹಂತದಲ್ಲಿ ನಡೆಯಲಿದ್ದು, ಎಲ್ಲ ಹಂತಗಳಲ್ಲಿಯೂ ಉತ್ತೀರ್ಣರಾಗುವವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಐದು ಹಂತದ ನೇಮಕಾತಿ ಪ್ರಕ್ರಿಯೆ;
ದೈಹಿಕ ದಕ್ಷತೆ ಪರೀಕ್ಷೆ (PET),
ದೈಹಿಕ ಗುಣಮಟ್ಟ ಪರೀಕ್ಷೆ (PST),
ವ್ಯಾಪಾರ ಪರೀಕ್ಷೆ,
ಲಿಖಿತ ಪರೀಕ್ಷೆ,
ದಾಖಲೆ ಪರಿಶೀಲನೆ
ಪಿಇಟಿಯಲ್ಲಿ ಪುರುಷ ಅಭ್ಯರ್ಥಿಗಳು 6 ನಿಮಿಷ 30 ಸೆಕೆಂಡುಗಳಲ್ಲಿ 1.6 ಕಿ.ಮೀ ಓಟ ಮುಗಿಸಬೇಕು. ಮಹಿಳಾ ಅಭ್ಯರ್ಥಿಗಳು 4 ನಿಮಿಷಗಳಲ್ಲಿ 800 ಮೀಟರ್ ಓಟ ಪೂರೈಸಬೇಕು. ಪಿಎಸ್‌ಟಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಎತ್ತರ, ಎದೆ ಮತ್ತು ತೂಕವನ್ನು ಪರೀಕ್ಷಿಸಲಾಗುತ್ತದೆ. ಈ ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ವ್ಯಾಪಾರ ಪರೀಕ್ಷೆಗೆ ಅರ್ಹರಾಗುತ್ತಾರೆ. ಅದನ್ನೂ ಪೂರೈಸಿದವರಿಗೆ ಲಿಖಿತ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಇರಲಿದೆ.
ಅರ್ಜಿ ಸಲ್ಲಿಸುವುದು ಹೇಗೆ;
– ಸಿಐಎಸ್‌ಎಫ್‌ನ ಅಧಿಕೃತ ವೆಬ್‌ಸೈಟ್ cisfrectt.cisf.gov.inಗೆ ಭೇಟಿ ನೀಡಬೇಕು.
– ಮುಖಪುಟದಲ್ಲಿ ಕಾಣುವ ಸಿಐಎಸ್‌ಎಫ್ ಕಾನ್ಸ್‌ಟೇಬಲ್ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
– ನೋಂದಣಿ ವಿವರಗಳನ್ನು ನಮೂದಿಸಿ ಮತ್ತು ‘ಸಲ್ಲಿಸು’ (ಸಬ್‌ಮಿಟ್) ಮೇಲೆ ಕ್ಲಿಕ್ ಮಾಡಬೇಕು.
– ಖಾತೆಗೆ ಲಾಗಿನ್ ಮಾಡಬೇಕು.
– ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.
– ಅರ್ಜಿ ಶುಲ್ಕವನ್ನು ಪಾವತಿಸಬೇಕು.
– ‘ಸಬ್‌ಮಿಟ್’ ಮೇಲೆ ಕ್ಲಿಕ್ ಮಾಡಿದ ಬಳಿಕ, ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.