ಎಸ್‌ಡಿಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಂಧನ ಖಂಡಿಸಿ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ಕೊಡಗು ಜಿಲ್ಲಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಅಮೀನ್ ಮೊಹ್ಸಿನ್ ಹೇಳಿದರು.
ಪಕ್ಷದ ರಾಷ್ಟೀಯ ಅಧ್ಯಕ್ಷ ಎಂ ಕೆ ಫೈಜಿ ಅವರ ಬಂಧನವನ್ನು ಖಂಡಿಸಿ ಮಡಿಕೇರಿ ನಗರದ ಐ.ಜಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಸರ್ಕಾರದ ಏಜೆನ್ಸಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಅಮೀನ್ ಮುಹ್ಸಿನ್, “ರಾಷ್ಟೀಯ ಅಧ್ಯಕ್ಷರ ಬಂಧನವು ಅಕ್ಷಮ್ಯ ಅಪರಾಧವಾಗಿದ್ದು ಕೂಡಲೇ ಬಿಡುಗಡೆ ಗೊಳಿಸಬೇಕು. ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಹೋರಾಟವು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ನಿದ್ದೆಗೆಡಿಸಿದ್ದು, ಹೋರಾಟವನ್ನು ಹತ್ತಿಕ್ಕುವ ಮತ್ತು ಹೋರಾಟದಿಂದ ಹಿಂದೆ ಸರಿಸುವ ಭಾಗವಾಗಿ ನಮ್ಮ ರಾಷ್ಟೀಯ ಅಧ್ಯಕ್ಷರನ್ನು ಬಂಧಿಸಲಾಗಿದೆ. ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರಿರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಮತ್ತು ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಲಾಗುವುದು” ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ ಮಾತನಾಡಿ, “ಎಸ್‌ಡಿಪಿಐ ಒಂದು ಕಾಡೆರ್ ಬೆಸ್ಡ್ ಪಕ್ಷ. ಆ ಪಕ್ಷದ ಒಬ್ಬ ಅಧ್ಯಕ್ಷರನ್ನು ಬಂಧನದಲ್ಲಿಡುವ ಮೂಲಕ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ” ಎಂದರು.
ಇದನ್ನೂ ಓದಿ: ಮಡಿಕೇರಿ | ಕೊಡಗು ವಿವಿ ಮುಚ್ಚಿದರೆ ಜಿಲ್ಲೆಗೆ ಅಪಮಾನ ; ಕೆಎಂಎ ಅಧ್ಯಕ್ಷ ಸೂಫಿ ಹಾಜಿ
ಪ್ರತಿಭಟನೆಯಲ್ಲಿ ಪಕ್ಷದ ಕುಶಾಲನಗರ ಘಟಕಧ್ಯಕ್ಷ ಝಕ್ರಿಯ, ಮಡಿಕೇರಿ ವಿಧಾನಸಭಾ ಕ್ಷೇತ್ರಾಧ್ಯಕ್ಷ ಭಾಷಾ, ವಿರಾಜಪೇಟೆ ಕ್ಷೇತ್ರಾ ಉಪಾಧ್ಯಕ್ಷ ಯೂಸುಫ್, ಮಡಿಕೇರಿ ನಗರಾಧ್ಯಕ್ಷ ರಿಜ್ವಾನ್, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಅಲಿ, ನಫೀಸ ಅಕ್ಬರ್, ವಿಮೆನ್ ಇಂಡಿಯಾ ಮೂಮೆಂಟ್ ಅಧ್ಯಕ್ಷೆ ಸಲಿಕತ್ ಹಾಗೂ ರಿಶಾನ ಸೇರಿದಂತೆ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.
