ಹಲವು ಬೇಡಿಕೆ ಈಡೇರಿಕೆಗಾಗಿ, ಹಕ್ಕುಗಳಿಗಾಗಿ ‘ನಾವು ಹೋರಾಡೋಣ, ಗೆಲ್ಲೋಣ’ ಈ ಎಲ್ಲ ಜ್ವಲಂತ ಸಮಸ್ಯೆಗಳ ವಿರುದ್ಧ ಬಲಿಷ್ಟ ಹೋರಾಟ ಕಟ್ಟುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದು, ಮಾ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಬೃಹತ್ ರೈತರ ಹೋರಾಟವನ್ನು ಸಂಘಟಿಸಲಾಗುತ್ತಿದೆ. ಈ ಹೋರಾಟವನ್ನು ಯಶಸ್ವಿಗೊಳಿಸಲು ಸಹಸ್ರಾರು ಸಂಖ್ಯೆಯ ರೈತರು ಭಾಗವಹಿಸಬೇಕು ಎಂದು ಎಐಕೆಕೆಎಂಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಗಣಪತರಾವ್ ಕೆ ಮಾನೆ ಕರೆ ನೀಡಿದರು.
ಕಲಬುರಗಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್)ಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ದೆಹಲಿಯಲ್ಲಿ ನಡೆದ ಐತಿಹಾಸಿಕ ರೈತ ಚಳವಳಿಯಾಗಲೀ ರಾಜ್ಯದಲ್ಲಿ ಅಭೂತಪೂರ್ವವಾಗಿ ನಡೆದ ಆಶಾ ಕಾರ್ಯಕರ್ತೆಯರ ಸಂಧಾನತೀತ ಹೋರಾಟಗಳಾಗಲೀ ಈ ಸಂದರ್ಭದಲ್ಲಿ ನಮಗೆ ಸ್ಪೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸಮಿತಿಯು ದೇಶಾದ್ಯಂತ ಎಲ್ಲ ರಾಜಧಾನಿಗಳಲ್ಲೂ ಹೋರಾಟ ಕಟ್ಟಲು ಕರೆ ನೀಡಿದೆ” ಎಂದು ಹೇಳಿದರು.
“ನಮ್ಮ ರಾಜ್ಯದಲ್ಲಿಯೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಏಕಸ್ವಾಮ್ಯಾಧಿಪತಿಗಳ ಪರವಾಗಿರುವ ರೈತ ವಿರೋಧಿ, ಜನ ವಿರೋಧಿ ನೀತಿಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ, ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಕಾನೂನುಬದ್ಧಗೊಳಿಸಬೇಕು(ಎಲ್ಲ ಬೆಳೆಗಳಿಗೂ ಅನ್ವಯಿಸಿ). ಮನರೆಗಾ(ಉದ್ಯೋಗ ಖಾತ್ರಿ) ಕೆಲಸಗಾರರಿಗೆ ದಿನಕ್ಕೆ ₹600 ವೇತನ ನೀಡಬೇಕು. ವಿದ್ಯುತ್ ಕಾಯ್ದೆ 2023ನ್ನು ರದ್ಧುಮಾಡಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡಲು ಹಾಗೂ ಹೊಸ ಕೃಷಿ ಮಾರುಕಟ್ಟೆ ನೀತಿಯನ್ನು ಹಿಂತೆದುಕೊಳ್ಳಬೇಕೆಂದು ಒತ್ತಾಯಿಸಿ ವಿಧಾನಸೌಧ ಚಲೋ ಹಮ್ಮಿಕೊಂಡಿದ್ದು, ಮಾರ್ಚ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ” ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಬಿ. ಭಗವಾನ್ ರೆಡ್ಡಿಯವರು ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, “ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ನೀಡಲೇಬೇಕು. ಖಾತೆ ಹೊಂದಿರುವವರಿಗೆ ಪೋಡಿ, ದುರಸ್ತಿ ಮಾಡಿಕೊಡಬೇಕು, ಮನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಎರಡು ನೂರು ಮಾನವ ದಿನಗಳ ಕೆಲಸ ಹಾಗೂ ಅದಕ್ಕೆ ಕನಿಷ್ಠ ₹600 ವೇತನ ಖಾತ್ರಿಪಡಿಸಬೇಕು. ಹೊಸ ಕೃಷಿ ನೀತಿಯನ್ನು ಕೈಬಿಡಬೇಕು, ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಜಾರಿಗೊಳಿಸಬೇಕು, ರೈತರ ಎಲ್ಲ ಬೆಳೆಗಳಿಗೂ ಸಿ2+50% ಸೂತ್ರದಡಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಮತ್ತು ಕಾನೂನುಬದ್ಧಗೊಳಿಸಬೇಕೆಂದು ಆಗ್ರಹಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಗ್ಯಾರಂಟಿ ವೈಫಲ್ಯ ಆರೋಪ; ಜೆಡಿಎಸ್ ಪ್ರತಿಭಟನೆ
“ಬೀಜ, ರಸಗೊಬ್ಬರ ಕೀಟನಾಶಕಗಳಂತಹ ಕೃಷಿ ಒಳಸುರಿಗಳನ್ನು ಅತ್ಯಂತ ಕಡಿಮೆ ದರದಲ್ಲಿ ಸರಬರಾಜು ಮಾಡಿ, ವಿದ್ಯುತ್ ಕಾಯ್ದೆ 2023ನ್ನು ಕೂಡಲೇ ರದ್ದುಗೊಳಿಸಬೇಕು. ವಿದ್ಯುತ್ ಖಾಸಗೀಕರಣವನ್ನು ಹಿಂತೆಗೆದುಕೊಳ್ಳಬೇಕು, ರೈತರ ಸಾಲ ಮನ್ನಾ ಮಾಡಬೇಕು ಮತ್ತು 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ನೀಡಬೇಕು, ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಲ್ಲ ತಾಲೂಕು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಉಚಿತ ಆರೋಗ್ಯವನ್ನು ಖಾತ್ರಿಪಡಿಸುವಂತೆ ಒತ್ತಾಯಿಸಲಾಗುವುದು” ಎಂದು ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್ ಬಿ, ಕಲಬುರಗಿ ತಾಲೂಕಧ್ಯಕ್ಷ ವಿಶ್ವನಾಥ್ ಸಿಂಗೆ, ಭಾಗಣ್ಣ ಬುಕ್ಕಾ, ನೀಲಕಂಠ ಎಂ ಹುಲಿ, ಭೀಮಾಶಂಕರ್ ಆಂದೋಲಾ ಸೇರಿದಂತೆ ಇತರರು ಇದ್ದರು.