ವರದಕ್ಷಿಣೆ ನೀಡಿಲ್ಲವೆಂಬ ಕಾರಣಕ್ಕೆ ಮದುವೆ ಹಿಂದಿನ ದಿನ ವರ ಹಾಗೂ ಆತನ ಕುಟುಂಬ ಮದುವೆ ಮನೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಹೀಗೆಂದು ಆರೋಪಿಸಿ ಯುವತಿಯ ತಂದೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ವರ ಪ್ರೇಮ್‌ಚಂದ್ ಹಾಗೂ ವಧು ಫ್ರಾನ್ಸ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಬೆಂಗಳೂರಿನಲ್ಲಿ ನಿಶ್ಚಿತಾರ್ಥವೂ ಆಗಿತ್ತು. ಮಾ.2ರಂದು ಮದುವೆ ದಿನ ನಿಗದಿಯಾಗಿತ್ತು. ಇದೆಲ್ಲದರ ನಡುವೆ ಫೆಬ್ರವರಿಯಲ್ಲಿ ಯುರೋಪಿಯನ್ ಸಂಸ್ಕೃತಿ ಎಂದು ಪುಸಲಾಯಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದುವೆ ಸಮಾರಂಭಕ್ಕಾಗಿ ಗಾಂಧಿನಗರದ ರೈಲ್ವೆ ಎನ್‌ಕ್ಲೇವ್‌ನ ನಂದಿ ಕ್ಲಬ್ ಬುಕ್ ಮಾಡಲಾಗಿತ್ತು. ಮಾ.1ರ ರಾತ್ರಿ ವರನ ಪೋಷಕರು ಯುವತಿಯ ತಂದೆಗೆ ಫೋನ್ ಮಾಡಿ ₹50 ಲಕ್ಷ ನಗದು, ಅರ್ಧ ಕೆಜಿ ಚಿನ್ನ ಹಾಗೂ ಬೆಂಜ್ ಕಾರನ್ನು ವರದಕ್ಕಿಣೆಯಾಗಿ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಯುವತಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಕೆಪಿಸಿಎಲ್ 622 ಹುದ್ದೆಗಳಿಗೆ ಪರೀಕ್ಷೆ ನಡೆದರೂ ನೇಮಕಾತಿಯಾಗಿಲ್ಲ; ಅರ್ಹರಿಗೆ ನೇಮಕಾತಿ ಪತ್ರ ನೀಡಲು ಆಗ್ರಹ
ಈಗಾಗಲೇ ಮದುವೆಗಾಗಿ ₹25 ಖರ್ಚಾಗಿದೆ. ಮತ್ತೂ ಕೊಡಲು ಸಾಧ್ಯವಿಲ್ಲ ಎಂದು ಯುವತಿಯ ತಂದೆ ಹೇಳಿದ್ದಾರೆ. ಆಗ ವರ ಹಾಗೂ ಆತನ ಪೋಷಕರು ರಾತ್ರೋರಾತ್ರಿ ಮದುವೆ ಮನೆಯಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ವಧುವಿನ ತಂದೆಯ ದೂರು ಆಧರಿಸಿ ಪ್ರೇಮ್‌ಚಂದ್, ಆತನ ತಂದೆ ಶಿವಕುಮಾರ್, ತಾಯಿ ರಾಧಾ ಮತ್ತು ಸ್ನೇಹಿತ ಮಂಜು ಭರತ್ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
