ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 16ನೇ ಬಜೆಟ್ ಅನ್ನು ಮಂಡಿಸಿದ್ದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಅತಿಥಿ ಶಿಕ್ಷಕರಿಗೆ ಗೌರವ ಧನ ಹೆಚ್ಚಳವನ್ನು ಘೋಷಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಒಂದು ಸಾವಿರ ರೂಪಾಯಿ ಹಾಗೂ ಸಹಾಯಕಿಯರ ಗೌರವ ಧನವನ್ನು 750 ರೂಪಾಯಿ ಹೆಚ್ಚಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕೂಡ್ಲಿಗಿ | ಗೌರವ ಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಅಂಗನವಾಡಿ ನೌಕರರ ಒತ್ತಾಯ: ಶಾಸಕರ ಮೂಲಕ ಪತ್ರ
ನಿರೀಕ್ಷೆಯಂತೆ ಅನೇಕ ಯೋಜನೆಗಳನ್ನು ಪರಿಚಯಿಸಿರುವ ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಗೌರವ ಧನ ಹೆಚ್ಚಳವನ್ನು ಘೋಷಿಸಿದೆ. ಅತಿಥಿ ಶಿಕ್ಷಕರಿಗೆ ಮಾಸಿಕ ಗೌರವ ಧನವನ್ನು ಎರಡು ಸಾವಿರ ರೂಪಾಯಿ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಇನ್ನು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಧನವನ್ನು ಕೂಡಾ ತಲಾ ಒಂದು ಸಾವಿರ ರೂಪಾಯಿ ಏರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಘೋಷಿಸಿದ್ದಾರೆ.
ಹಾಗೆಯೇ ವಿಶೇಷ ಪಾಲನಾ ಯೋಜನೆಯಡಿ ಎಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಧನಸಹಾಯವನ್ನು ಒಂದು ರೂಪಾಯಿಯಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.
