ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಅನ್ನು ಇಂದು ಮಂಡಿಸಿದ್ದು, ಬೆಂಗಳೂರು ಅಭಿವೃದ್ಧಿಗೆ 7,000 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದಾರೆ. ಹಾಗೆಯೇ ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಸಿಎಂ ಘೋಷಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಸಂಚಾರದಟ್ಟಣೆ ಅತೀ ದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗಿದೆ. ಈ ಸಮಸ್ಯೆ ನಿವಾರಣೆಗೆ ಟನಲ್ ರಸ್ತೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂಪಾಯಿ ಘೋಷಿಸಿದ್ದಾರೆ. ಹಾಗೆಯೇ ಇದಕ್ಕಾಗಿ 19 ಸಾವಿರ ಕೋಟಿ ರೂಪಾಯಿ ಗ್ಯಾರಂಟಿಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಇದನ್ನು ಓದಿದ್ದೀರಾ? Karnataka Budget 2025 | ಅಂಗನವಾಡಿ ಕಾರ್ಯಕರ್ತರು, ಅತಿಥಿ ಶಿಕ್ಷಕರಿಗೆ ಗೌರವ ಧನ ಹೆಚ್ಚಳ
40,000 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿಗೆ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್‌ಗಳನ್ನು ನಿರ್ಮಿಸಲು ಅನುಕೂಲವಾಗುವಂತೆ 19,000 ಕೋಟಿ ರೂ. ಗ್ಯಾರಂಟಿಯನ್ನು ಸರ್ಕಾರ ನೀಡಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಇನ್ನು 2025-26 ಹಣಕಾಸು ವರ್ಷದಲ್ಲಿ ಪಾಲಿಕೆಯ ಜಾಹೀರಾತು ಉಪ-ವಿಧಿಗಳು 2025ರ ಅನುಷ್ಠಾನದಿಂದ ವರ್ಷಕ್ಕೆ 750 ಕೋಟಿ ರೂಪಾಯಿ ಆದಾಯವನ್ನು ಪಡೆಯುವ ಅಂದಾಜು ಮಾಡಲಾಗಿದೆ.
ರಾಜ್ಯ ರಾಜಧಾನಿಗೆ ಬಜೆಟ್‌ನಲ್ಲಿ ದೊರಕಿದ್ದೇನು?
ಪ್ರತಿ ವರ್ಷ ನೀಡಲಾಗುತ್ತಿದ್ದ ಮೂರು ಸಾವಿರ ಕೋಟಿ ರೂಪಾಯಿ ಅನುದಾನವನ್ನು 7 ಸಾವಿರ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಅನುದಾನವನ್ನು ಬಳಸಿ ಬೃಹತ್ ಅಭಿವೃದ್ದಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುವುದು. ಅದಕ್ಕಾಗಿ ವಿಶೇಷ ಉದ್ದೇಶಿತ ಸಂಸ್ಥೆ ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ನಮ್ಮ ಮೆಟ್ರೋ ಹಂತ ಮೂರು ಯೋಜನೆ ಮೂಲಕ 8,916 ಕೋಟಿ ರೂಪಾಯಿ ವೆಚ್ಚದಲ್ಲಿ 40.50 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಫ್ಲೈಓವರ್ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ದೇವನಹಳ್ಳಿಯವರೆಗೆ ಮೆಟ್ರೋ ವಿಸ್ತರಣೆ ಮಾಡಲು ಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ಬಜೆಟ್ | ತೊಗರಿ ಖರೀದಿಗೆ ಹೆಚ್ಚುವರಿ ಪ್ರೋತ್ಸಾಹಧನ: ಸಿಎಂ ಸಿದ್ದರಾಮಯ್ಯ
ಪ್ರಸ್ತುತ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 8.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. 68 ನಿಲ್ದಾಣಗಳ ಒಳಗೊಂಡಂತೆ 79.65 ಕಿ.ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ಕಾರ್ಯಚರಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ 98.60 ಕಿ.ಮೀ ಮಾರ್ಗವನ್ನು ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಬೆಂಗಳೂರು ನಗರದಲ್ಲಿ 120.ಕಿ.ಮೀ. ಉದ್ದದ ಮೇಲ್ಸೇತುವೆ ಮತ್ತು ಗ್ರೇಡ್ ಸೆಪರೇಟರ್‌ಗಳನ್ನು ನಿರ್ಮಿಸಲಾಗುವುದು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಜಾಲವನ್ನು 660 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಸಂಚಾರದಟ್ಟಣೆ ನಿವಾರಣೆಗಾಗಿ ಕಾಲುವೆಯ ಬಫರ್ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲವನ್ನು ಅಭಿವೃದ್ಧಿಪಡಿಸಲಾಗುವುದು.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಬೆಂಗಳೂರು ಬಿಸ್‌ನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ 73 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲು ಹುಡೋ ಬ್ಯಾಂಕ್ ನೆರವಿನೊಂದಿಗೆ 27,000 ಕೋಟಿ ರೂ. ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪ್ರತ್ಯೇಕ ತಂಡಗಳನ್ನು ರಚಿಸಿ ಭೂಸ್ವಾದೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಇದನ್ನು ಓದಿದ್ದೀರಾ? ರಾಜ್ಯ ಬಜೆಟ್ | ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಿಎಂ ಕೊಟ್ಟಿದ್ದೇನು?
‘ಬ್ಯಾಂಡ್ ಬೆಂಗಳೂರು’ ಯೋಜನೆಯಡಿ 2024-25 ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳನ್ನು 1,800 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಹಾಗೆಯೇ ‘ಬ್ಯಾಂಡ್ ಬೆಂಗಳೂರು’ ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರೂ.ವೆಚ್ಚದಲ್ಲಿ ‘ಸಮಗ್ರ ಆರೋಗ್ಯ ಯೋಜನೆ’ಯನ್ನು ಜಾರಿಗೊಳಿಸಲಾಗುವುದು.
ಬೆಂಗಳೂರು ನಗರದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪ್ರವಾಹಸ್ಥಿತಿ ಉಂಟಾಗಿತ್ತು. ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ಗಳನ್ನು ನಿರ್ಮಿಸಲು ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿಗೆ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಳೆದ ವರ್ಷ ಕುಡಿಯುವ ನೀರಿನ ಅಭಾವ ಉಂಟಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿರುವಂತಿದೆ. 2024-25ನೇ ಸಾಲಿನಲ್ಲಿ 5,550 ಕೋಟಿ ರೂ. ಮೊತ್ತದಲ್ಲಿ 775 ಎಂಎಲ್‌ಡಿ ಹೆಚ್ಚುವರಿ ನೀರಿನ ಸಾಮರ್ಥ್ಯವನ್ನು ಹೊಂದಿರುವ ಕಾವೇರಿ 5ನೇ ಹಂತದ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು. ಈ ಯೋಜನೆಯಿಂದಾಗಿ 110 ಹಳ್ಳಿಗಳಲ್ಲಿರುವ 50 ಲಕ್ಷ ನಿವಾಸಿಗಳಿಗೆ ನೀರು ಲಭ್ಯವಾಗಲಿದೆ. ಕಾವೇರಿ ಹಂತ-6 ಅನುಷ್ಠಾನಕ್ಕಾಗಿ ವಿಸ್ಕೃತ ಯೋಜನಾ ವರದಿಯನ್ನು ತಯಾರಿಸಲಾಗುತ್ತಿದೆ.
ಬಿಡಬ್ಲ್ಯೂಎಸ್‌ಎಸ್‌ಬಿ ವತಿಯಿಂದ ಎಸ್.ಟಿ.ಪಿ ಘಟಕಗಳ ತ್ಯಾಜ್ಯವನ್ನು ಬಳಸಿ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗವನ್ನು ಪಡೆಯುವ ನಿಟ್ಟಿನಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲಾಗುವುದು ಎಂದು ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
