ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ, ಫಲಿತಾಂಶ ಹೊರಬಿದ್ದು ತಿಂಗಳಾದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ. ಪಕ್ಷವನ್ನು ಮುನ್ನಡೆಸುವ ಮುಂಚೂಣಿ ನಾಯಕರು ಯಾರು ಎಂಬುದೂ ಗೊತ್ತಿಲ್ಲ. ಚುನಾವಣೆಗೂ ಮುಂಚೆ ವಾರದಲ್ಲಿ ಮೂರು ಬಾರಿ ಬಂದು ಹೋದ ಮೋಶಾಗಳಿಗೆ ಈಗ ಕರ್ನಾಟಕವೇ ಬೇಕಾಗಿಲ್ಲ. ಯಾರಿಗೂ ಬೇಡವಾದ ಬಿಜೆಪಿಯಲ್ಲಿ ಈಗ ಅಂತರ್ಯುದ್ಧ ಆರಂಭವಾಗಿದೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ, ಫಲಿತಾಂಶ ಹೊರಬಿದ್ದು ತಿಂಗಳಾದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗಿಲ್ಲ. ಪಕ್ಷವನ್ನು ಮುನ್ನಡೆಸುವ ಮುಂಚೂಣಿ ನಾಯಕರು ಯಾರು ಎಂಬುದೂ ಇಲ್ಲಿಯವರೆಗೂ ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗಿಲ್ಲ. ಪಕ್ಷದ ಆಗುಹೋಗುಗಳನ್ನು ನಿರ್ಧರಿಸುವವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಚುನಾವಣೆಗೂ ಮುಂಚೆ ವಾರದಲ್ಲಿ ಮೂರು ಬಾರಿ ಬಂದು ಹೋದ ಮೋಶಾಗಳಿಗೆ ಈಗ ಕರ್ನಾಟಕವೇ ಬೇಕಾಗಿಲ್ಲ.
ಇಂತಹ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಕೆಲ ನಾಯಕರು ಕೂತು ಆತ್ಮಾವಲೋಕನದ ಸಭೆ ನಡೆಸಿದ್ದಾರೆ. ಪಕ್ಷ ಸೋತ ಬಗೆಗಿನ ಚರ್ಚೆಯ ನೆಪದಲ್ಲಿ ಒಂದಷ್ಟು ನಾಯಕರು ತಮ್ಮೊಳಗಿದ್ದ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದ್ದಾರೆ. ನಾಯಕರೆನಿಸಿಕೊಂಡವರ ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೆಲವರು ಹೊಸಬರಿಗೆ ಟಿಕೆಟ್ ಕೊಟ್ಟಿದ್ದನ್ನು ಟೀಕಿಸಿದ್ದಾರೆ. ಅತಿಯಾದ ಭ್ರಷ್ಟಾಚಾರ ಮತ್ತು ಮುಸ್ಲಿಂ ವಿರೋಧವೇ ನಮ್ಮ ಸೋಲಿಗೆ ಕಾರಣ ಎಂದು ಕೆಲವರು ಸತ್ಯವನ್ನು ನುಡಿದಿದ್ದಾರೆ. ನಿನ್ನಿಂದ ನಾನು ಸೋತೆ ಎಂದು ಒಬ್ಬರಿಗೊಬ್ಬರು ದೂಷಿಸಿಕೊಂಡಿದ್ದಾರೆ. ಈ ದೂಷಣೆಯ ಹಿಂದೆ ಗುಂಪುಗಾರಿಕೆ, ಸಂಘನಿಷ್ಠೆ, ಜಾತಿಗಳೆಲ್ಲ ತಳುಕು ಹಾಕಿಕೊಂಡಿವೆ. ಮಾತನಾಡಿದವರೆಲ್ಲರೂ ಸೂತ್ರಧಾರರ ಸುಳಿವು ಬಿಟ್ಟುಕೊಡದಂತೆ ಬಣ್ಣವಿಲ್ಲದ ಬೀದಿನಾಟಕವನ್ನೇ ಆಡಿದ್ದಾರೆ. ಕೊನೆಗೆ ತಮ್ಮ ಒಡಲಾಳದ ಉರಿಯನ್ನು ಉಪಶಮನಗೊಳಿಸುವವರಾರು ಎಂಬುದು ಗೊತ್ತಾಗದೆ ಗೊಂದಲದಲ್ಲಿಯೇ ದಿನದೂಡುತ್ತಿದ್ದಾರೆ.
ಕರ್ನಾಟಕದ ರಾಜಕಾರಣವನ್ನು ಅವಲೋಕಿಸಿದರೆ, ಸೋತಾಗ ಆತ್ಮಾವಲೋಕನಕ್ಕೆ ಒಬ್ಬರಲ್ಲ ಒಬ್ಬರು ಇದ್ದೇ ಇರುತ್ತಿದ್ದರು. ಜಾತ್ಯತೀತ ಜನತಾದಳದವರು ಸೋತಾಗ ಸಹಜವಾಗಿಯೇ ಕೆಲವರು ದೇವೇಗೌಡರ ಬಳಿ ಹೋದರೆ, ಹಲವರು ಕುಮಾರಸ್ವಾಮಿಯವರ ಬಳಿ ಹೋಗುತ್ತಾರೆ. ಕಾಂಗ್ರೆಸ್ಸಿಗರಿಗಂತೂ ಒಬ್ಬರಲ್ಲ, ಹತ್ತಾರು ನಾಯಕರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಖರ್ಗೆ, ಮೊಯ್ಲಿಗಳಂತಹ ನಾಯಕರ ಮುಂದೆ ಅತ್ತು ಗೋಳಾಡಿದರೆ, ಸಮಾಧಾನ ಪಡಿಸುವ, ಆತ್ಮಸ್ಥೈರ್ಯ ತುಂಬುವ ಜವಾಬ್ದಾರಿಯನ್ನು ಆ ನಾಯಕರು ನಿರ್ವಹಿಸಿದ್ದಾರೆ. ಆದರೆ ಇಂದು ಬಿಜೆಪಿಯಲ್ಲಿ ಅಂತಹ ನಾಯಕನೇ ಇಲ್ಲ. ಎಲ್ಲವನ್ನು ಸಂಭಾಳಿಸುವ, ಎಲ್ಲರನ್ನು ಸಂತೈಸುವ ನಾಯಕನ ಕೊರತೆ ಎದ್ದು ಕಾಣುತ್ತಿದೆ. ಮನೆಯಲ್ಲಿ ಯಜಮಾನನೇ ಇಲ್ಲದಂತಾಗಿದೆ. ಯಾರ ಮೇಲೆ ಯಾರಿಗೂ ಹಿಡಿತವಿಲ್ಲದೆ, ಒಬ್ಬೊಬ್ಬರು ಒಂದೊಂದು ರೀತಿ ವರ್ತಿಸತೊಡಗಿದ್ದಾರೆ.
ಇದನ್ನು ಓದಿದ್ದೀರಾ?: ಮತ್ತೆ ಬಿತ್ತದಿರಿ ಜಾತಿಯ ವಿಷಬೀಜ; ಜಾತ್ಯತೀತತೆಯ ಹೊಲದಲ್ಲಿ ಈಗಷ್ಟೇ ಸಮಾನತೆಯ ಪೈರು ಫಲ ಬಿಡುತ್ತಿದೆ…
ಇದಕ್ಕೆ ಮುಖ್ಯ ಕಾರಣ, ಬಿಜೆಪಿ ಎಂಬ `ಭವ್ಯ ಪರಂಪರೆ’ಯ ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿದ್ದು, ಕಾಲ ಕಸಕ್ಕಿಂತ ಕಡೆಯಾಗಿ ಕಂಡಿದ್ದು. ಈ ರೀತಿ ಕಡೆಗಣಿಸುವ ಪ್ರಕ್ರಿಯೆ ಚುನಾವಣೆಗೂ ಮುಂಚೆಯೇ ಆರಂಭವಾಗಿತ್ತು. ಮೊದಲಿಗೆ ಕರ್ನಾಟಕದ ಮಟ್ಟಿಗೆ ಬಿಜೆಪಿ ಎಂದರೆ ಬಿ.ಎಸ್. ಯಡಿಯೂರಪ್ಪ ಎಂಬುದಾಗಿತ್ತು. ರಾಜ್ಯದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಾಗ, ತಮ್ಮ ತನು-ಮನ-ಧನವನ್ನು ಧಾರೆ ಎರೆದು ಪಕ್ಷವನ್ನು ಕಟ್ಟಿ ಬೆಳೆಸಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಷ್ಟು ದಿನವೂ ಕಿರುಕುಳ ಕೊಟ್ಟರು. ಕಣ್ಣೀರಿಡುತ್ತಲೇ ಕುರ್ಚಿಯಿಂದ ಕೆಳಗಿಳಿದರು. ಮಗ ವಿಜಯೇಂದ್ರನ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡಿದ್ದರು.
ಇದಾದ ನಂತರ, ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರನ್ನು 40% ಕಮಿಷನ್ ಕಾರಣಕ್ಕಾಗಿ ಮಂತ್ರಿ ಸ್ಥಾನದಿಂದ ಕಿತ್ತು ಬಿಸಾಕಿದರು. ಅಲ್ಲಿಗೆ ಅವರ ಅಧ್ಯಾಯ ಮುಗಿಯಿತು. ನಂತರ ಟಿಕೆಟ್ ನೀಡುವ ವಿಚಾರದಲ್ಲಿ ಪಟ್ಟಿಗೂ ಪರಿಗಣಿಸದೆ ನಿರ್ಲಕ್ಷಿಸಲಾಯಿತು. ಆದ ಅವಮಾನವನ್ನು ಮುಚ್ಚಿಕೊಳ್ಳಲು ಈಶ್ವರಪ್ಪನವರು, ಪಟ್ಟಿ ಬಿಡುಗಡೆಗೂ ಮುನ್ನವೇ, ಚುನಾವಣಾ ನಿವೃತ್ತಿ ಘೋಷಿಸಿದರು. ಘೋಷಣೆಯ ನೆಪದಲ್ಲಿ ಪುತ್ರನಿಗೆ ಟಿಕೆಟ್ ಕೇಳಿ, ಕೊಡದಿದ್ದಾಗ ಬಹಿರಂಗವಾಗಿ ಹೇಳಿಕೊಳ್ಳಲಾಗದ ಸಂಕಟಕ್ಕೀಡಾದರು. ಅಲ್ಲಿಗೆ ಶಿವಮೊಗ್ಗದ ಜೋಡೆತ್ತುಗಳೆಂದು ಪ್ರಸಿದ್ಧಿ ಪಡೆದಿದ್ದ ಯಡಿಯೂರಪ್ಪ-ಈಶ್ವರಪ್ಪನವರನ್ನು 2023ರ ಚುನಾವಣೆಯಿಂದ ವ್ಯವಸ್ಥಿತವಾಗಿ ದೂರವಿಡುವಲ್ಲಿ ಸಂಘಜೀವಿಗಳು ಯಶಸ್ವಿಯಾಗಿದ್ದರು.
ಅದಾದ ನಂತರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡದೆ ಅವಮಾನಿಸಲಾಯಿತು. ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ ಶೆಟ್ಟರ್, `ಬಿಜೆಪಿ ಎಂಬ ಪಕ್ಷ ಆರೆಸೆಸ್ ಹಿಡಿತದಲ್ಲಿದೆ, ಬಿ.ಎಲ್ ಸಂತೋಷ್ ಹಸ್ತಕ್ಷೇಪ ಅತಿಯಾಗಿದೆ, ಹಿರಿಯರನ್ನು ಅವಮಾನಿಸಲಾಗುತ್ತಿದೆ’ ಎಂದು ನೇರವಾಗಿ ದಾಳಿ ಮಾಡಿದ್ದರು. ಆದರೆ ಅಧಿಕಾರದ ಮದಕ್ಕಿಂತಲೂ ಹೆಚ್ಚಾಗಿ ಮೋದಿ ಮದ ಮೈ ಮೇಲೆ ಬಂದಿದ್ದ ಸಂಘಜೀವಿಗಳಿಗೆ ಹಿರಿಯರ ದಾಳಿ ಧೂಳಿಗೆ ಸಮನಾಗಿ ಕಂಡು ಕಡೆಗಣಿಸಲಾಯಿತು. ಅಲ್ಲಿಗೆ ಮುಂಬೈ-ಕರ್ನಾಟಕದ ಲಿಂಗಾಯತ ನಾಯಕರ ನಡ ಮುರಿದು ಮೂಲೆಗೆ ಕೂರಿಸುವಲ್ಲಿ ಸಂಘಜೀವಿಗಳು ಮತ್ತೊಮ್ಮೆ ಯಶಸ್ವಿಯಾಗಿದ್ದರು.
ಜಗದೀಶ್ ಶೆಟ್ಟರ್ ಅವರನ್ನು ಪಕ್ಷದಿಂದ ಹೊರಹೋಗುವಂತೆ ಮಾಡಿದ್ದು ಯಾರು ಎನ್ನುವುದು ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರಿಗೆ ಗೊತ್ತಿತ್ತು. ಅದರಿಂದ ಪಕ್ಷಕ್ಕಾಗುವ ನಷ್ಟವೇನು ಎಂಬುದರ ಅರಿವೂ ಇತ್ತು. ಆದರೆ, ಮೋದಿ ಮದದಿಂದ ಮೆರೆಯುತ್ತಿದ್ದ ಬಿಜೆಪಿಯ ಸಂಘಜೀವಿಗಳಿಗೆ ಶೆಟ್ಟರ್ ಮತ್ತು ಯಡಿಯೂರಪ್ಪ- ಇಬ್ಬರೂ ಬೇಕಿರಲಿಲ್ಲ. ಹಾಗೆಯೇ ಆ ಇಬ್ಬರು ನಾಯಕರ ಬೆನ್ನಿಗಿರುವ ಲಿಂಗಾಯತ ಸಮುದಾಯದ ಬೆಂಬಲವೂ ಬೇಕಿರಲಿಲ್ಲ. ಆದರೆ ಬಿಜೆಪಿಯನ್ನು ಬೆರಳ ತುದಿಯಲ್ಲಿ ಕುಣಿಸುತ್ತಿದ್ದ ಸಂಘಜೀವಿಗಳಿಗೆ, ಬಹಿರಂಗವಾಗಿ ಲಿಂಗಾಯತರು ಬೇಡ ಎಂದು ಹೇಳುವ ಧೈರ್ಯವಿರಲಿಲ್ಲ. ಹೇಳದೆ ಮಾಡುವುದು ಗೊತ್ತಿತ್ತು. ಆ ಹಾದಿಯಲ್ಲಿ ತುಮಕೂರಿನ ಜಿ.ಎಸ್. ಬಸವರಾಜು, ದಾವಣಗೆರೆಯ ಸಿದ್ದೇಶ್, ಬೆಳಗಾವಿಯ ಪ್ರಭಾಕರ ಕೋರೆ, ತುಮಕೂರಿನ ಸೊಗಡು ಶಿವಣ್ಣ, ಹಾವೇರಿಯ ಶಿವಕುಮಾರ್ ಉದಾಸಿ, ವಿಜಯನಗರದ ಸೋಮಣ್ಣ, ಅಥಣಿಯ ಲಕ್ಷ್ಮಣ ಸವದಿಗಳನ್ನು ಮುಗಿಸಲು ಷಡ್ಯಂತ್ರ ರೂಪಿಸಿದ್ದರು. ಹಾಗೆಯೇ ಸದಾನಂದಗೌಡ, ಕರಡಿ ಸಂಗಣ್ಣ, ರಮೇಶ್ ಜಿಗಜಿಣಗಿಯಂತಹ ಶೂದ್ರ ನಾಯಕರನ್ನೂ ಪಕ್ಷದಿಂದ ದೂರ ಇಡಲು ಹವಣಿಸಿದ್ದರು. ಅದರಲ್ಲೂ ಸಂಘಜೀವಿಗಳು ಯಶಸ್ವಿಯಾದರು.
ಜೊತೆಗೆ, ಕೀಲು ಕೊಟ್ಟಾಗೆಲ್ಲ ಕುಣಿಯುವ ಬೊಮ್ಮಾಯಿ ಎಂಬ ಬೊಂಬೆ, ಚಿವುಟಿದಾಗ ಚೀರಾಡುವ ಬಸನಗೌಡ ಪಾಟೀಲ್ ಯತ್ನಾಳ್, ಕಿವಿ ಹಿಂಡಿದರೆ ಹಿಗ್ಗುವ ಸಿ.ಟಿ ರವಿ ಮತ್ತು ಅಶ್ವತ್ಥನಾರಾಯಣ; ನೆಪಮಾತ್ರದ ಒಕ್ಕಲಿಗ ನಾಯಕ ಅಶೋಕ್, ಲಿಂಗಾಯತ ನಾಯಕ ಮುರುಗೇಶ್ ನಿರಾಣಿಗಳನ್ನು ಪಕ್ಕಕ್ಕೆ ಇಟ್ಟುಕೊಂಡ ಸಂಘಜೀವಿಗಳು- ಇನ್ನು ಮುಂದೆ ನಮ್ಮದೇ ದರ್ಬಾರು ಎಂದು ಬೀಗಿದ್ದರು. ಬೀಗುತ್ತಲೇ ಹಿಜಾಬ್, ಅಜಾನ್, ಹಲಾಲ್, ಪಠ್ಯಪುಸ್ತಕ, ಮತಾಂತರ ಕಾಯ್ದೆ, ಗೋ ಹತ್ಯೆ ನಿಷೇಧ- ತಮ್ಮ ಸಂಘದ ಹಿತಾಸಕ್ತಿಗೆ ತಕ್ಕಂತೆ ಬೊಂಬೆಯ ಸರ್ಕಾರವನ್ನೇ ಬಗ್ಗಿಸಿಕೊಂಡರು. ಯತ್ನಾಳ್, ರವಿ, ಸೋಮಣ್ಣರಿಂದ ದಿನನಿತ್ಯ ಯಡಿಯೂರಪ್ಪನವರ ಎದೆಗೆ ಭ್ರಷ್ಟಾಚಾರದ ಬಾಣ ಬಿಡಿಸಿದರು. ಅಶ್ವತ್ಥನಾರಾಯಣ, ಅಶೋಕರಿಂದ ಉರಿ-ನಂಜು ಕಾರಿಕೊಳ್ಳುವಂತೆ ಮಾಡಿ ಕೇಕೆ ಹಾಕಿದರು. ಅಲ್ಲಿಗೆ ಸರ್ಕಾರವನ್ನೇ ತಮ್ಮ ಬೆರಳ ತುದಿಯಲ್ಲಿ ಕುಣಿಸುವ ಕಲೆ ಸಂಘಜೀವಿ ಸಂತೋಷ್ ಮತ್ತು ಜೋಶಿಗಳಿಗೆ ಕರಗತವಾಗಿತ್ತು.
ಹೀಗೆ, ಪಕ್ಷದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿ ಮತ್ತು ಸರ್ಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ನಂತರ, ಜೀ ಹುಜೂರ್ ಎನ್ನುವ ಗಿರಾಕಿಗಳಿಗೆ ಟಿಕೆಟ್ ಕೊಟ್ಟು- ಮೋದಿ ಮಂತ್ರ ಜಪಿಸಿ ಎಂದು ಕಣಕ್ಕಿಳಿಸಿದರು. ಮೋಶಾ ಅಲೆಯ ಮುಂದೆ ಯಾರ ಬೇಳೆಯೂ ಬೇಯುವುದಿಲ್ಲ ಎಂದು ಭ್ರಮೆ ಬಿತ್ತಿದರು. ಕಾಂಗ್ರೆಸ್ ತನ್ನ ಆಂತರಿಕ ಕಚ್ಚಾಟದಿಂದಾಗಿಯೇ ಕಳೆಗುಂದುತ್ತದೆ. ಅದಕ್ಕೆ ಬೇಕಾದ್ದನ್ನು ಮಾರಿಕೊಂಡ ಮಾಧ್ಯಮಗಳ ಪತ್ರಕರ್ತರು ಮಾಡುತ್ತಾರೆ ಎಂದು ಭಾವಿಸಿದರು.
ಆದರೆ ಕರ್ನಾಟಕ ಬಸವಣ್ಣನ ನಾಡು, ಕುವೆಂಪು ಬೀಡು. ಈ ಬಾರಿಯ ಚುನಾವಣೆಯಲ್ಲಿ ಇಲ್ಲಿನ ಪ್ರಜ್ಞಾವಂತ ಮತದಾರರು ಬಿಜೆಪಿ ಬೆಚ್ಚಿ ಬೀಳುವಂತಹ ತೀರ್ಪನ್ನು ಕೊಟ್ಟು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದರು. ಭ್ರಮೆಯಲ್ಲಿದ್ದ ಸಂಘಜೀವಿಗಳು ಪಕ್ಷ ಹೀನಾಯವಾಗಿ ಸೋಲುತ್ತಿದ್ದಂತೆ ಕಣ್ಮರೆಯಾದರು. ದೆಹಲಿಯ ದೊರೆಗಳು ಕರ್ನಾಟಕ ಎಂಬ ರಾಜ್ಯವಿದೆಯೇ ಎಂಬುದನ್ನೇ ಮರೆತು ಕೂತರು. ಸಹಜವಾಗಿಯೇ ಪಕ್ಷ ನಾಯಕನಿಲ್ಲದ ಮನೆಯಾಯಿತು.
ಇದನ್ನು ಓದಿದ್ದೀರಾ?: ನೈತಿಕತೆಯೇ ಇಲ್ಲದ ರಾಜಕಾರಣದಲ್ಲಿ ’ಹೊಂದಾಣಿಕೆಯ’ ಒಣ ಚರ್ಚೆಯೂ, ಜೆ.ಎಚ್ ಪಟೇಲರ ಒಂದು ಪ್ರಸಂಗವೂ
ನಾಯಕನಿಲ್ಲದ ಮನೆಯಲ್ಲಿ, ಸೋತು ಗಾಯ ಕೆರೆದುಕೊಳ್ಳುತ್ತಾ ಕೂತಿರುವ ಬಿಜೆಪಿಗರಲ್ಲಿ ಈಗ ಅಂತರ್ಯುದ್ಧ ಆರಂಭವಾಗಿದೆ. ಸಂಸದ ಪ್ರತಾಪ್ ಸಿಂಹ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ, `ಬಿಎಸ್‌ವೈ ನಂತರ ಅಧಿಕಾರಕ್ಕೆ ಬಂದ ಅತಿರಥ ಮಹಾರಥರು ಮಾಡಿದ್ದೇನು’ ಎಂದು ಹರಿಹಾಯ್ದಿದ್ದಾರೆ. ಅತ್ತ ಸಿ.ಟಿ ರವಿ, ಹೊಂದಾಣಿಕೆ ರಾಜಕಾರಣದ ಬಗ್ಗೆ ಭಿನ್ನರಾಗ ತೆಗೆದಿದ್ದಾರೆ. ಸಂಸದ ಸದಾನಂದಗೌಡ, ಸಂಘಜೀವಿಗಳ ಹಸ್ತಕ್ಷೇಪದ ಬಗ್ಗೆ ಕೆಂಡಾಮಂಡಲರಾಗಿದ್ದಾರೆ. ನಾಯಕರೆನಿಸಿಕೊಂಡವರಿಂದ ತಮ್ಮದೇ ಪಕ್ಷದ ನಾಯಕರ ಬಗ್ಗೆ ದಿನಕ್ಕೊಂದು ಬಹಿರಂಗ ಹೇಳಿಕೆ, ಮೂದಲಿಕೆ, ಟೀಕೆ ವ್ಯಕ್ತವಾಗುತ್ತಲೇ ಇದೆ. ಉತ್ತರಿಸಲಾಗದ ಸ್ಥಿತಿ ತಲುಪಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ತಪ್ಪಿನ ಅರಿವಾಗಿ ಮತ್ತೆ ಯಡಿಯೂರಪ್ಪನವರ ಗುಂಪು ಸೇರಿದ್ದಾರೆ. `ಬಿಜೆಪಿ ಸೋಲಿಗೆ ನಾನೇ ಹೊಣೆ ಹೊರುತ್ತೇನೆ’ ಎಂದಿದ್ದಾರೆ. ಇದರಿಂದ ಇನ್ನಷ್ಟು ಕೆರಳಿರುವ ಸಂಘಜೀವಿಗಳು ಬೊಮ್ಮಾಯಿ ವಿರುದ್ಧ ಬಹಿರಂಗ ದಾಳಿಗೆ ಕರೆ ಕೊಟ್ಟಿದ್ದು, ಅದು ಸಿಂಹ ಘರ್ಜನೆಯಲ್ಲಿ ಕಾಣುತ್ತಿದೆ.
ಬಿಜೆಪಿಯೊಳಗಿನ ಈ ಅಂತರ್ಯುದ್ಧಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ನಾಯಕರೊಬ್ಬರು, `ಎಲ್ಲಾ ಸಂತೋಷದಾಟ. ಪಕ್ಷ ಹೀನಾಯವಾಗಿ ಸೋತಿದೆ. ಆ ಸೋಲನ್ನು ಯಡಿಯೂರಪ್ಪನವರ ತಲೆಗೆ ಕಟ್ಟಲು ಸಿಟಿ ರವಿ ಮತ್ತು ಪ್ರತಾಪ್ ಸಿಂಹ ಎಂಬ ಎಳಸುಗಳನ್ನು ಛೂ ಬಿಟ್ಟಿದ್ದಾರೆ. ಅದಕ್ಕಾಗಿ ಸಿಟಿ ರವಿಗೆ ಪಕ್ಷದ ಅಧ್ಯಕ್ಷ ಸ್ಥಾನದ; ಯತ್ನಾಳ್‌ಗೆ ವಿಪಕ್ಷ ನಾಯಕ ಸ್ಥಾನದ ಆಮಿಷ ಒಡ್ಡಿದ್ದಾರೆ. ಇದನ್ನರಿತ ಯಡಿಯೂರಪ್ಪನವರು ಅಶೋಕ್ ಅವರನ್ನು ಎತ್ತಿ ಕಟ್ಟಿದ್ದಾರೆ. ಹೊಂದಾಣಿಕೆ ರಾಜಕಾರಣವನ್ನು ಸಮರ್ಥಿಸಿಕೊಳ್ಳಲು ಬೊಮ್ಮಾಯಿಗೆ ಹೇಳಿದ್ದಾರೆ. ಅಶೋಕ್ ಮುನ್ನಲೆಗೆ ಬರುತ್ತಿದ್ದಂತೆ ಅಶ್ವತ್ಥನಾರಾಯಣ ಮೈ ಕೊಡವಿಕೊಂಡು ಎದ್ದು ನಿಂತು, ನಾನೂ ಆಕಾಂಕ್ಷಿ ಎಂದಿದ್ದಾರೆ. ಒಟ್ಟಿನಲ್ಲಿ ವಿಪಕ್ಷ ನಾಯಕ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರು ಎನ್ನುವುದು ಕಗ್ಗಂಟಾಗಿ ಕೂತಿದೆ. ಹೈಕಮಾಂಡಿಗೆ ಇಲ್ಲಿನ ನಾಯಕರ ಬಗ್ಗೆ ನಂಬಿಕೆಯೇ ಹೋಗಿದೆ. ರಾಜ್ಯ ರಾಜಕಾರಣವೂ ಬೇಡವಾಗಿದೆ’ ಎಂದರು.

ಲೇಖಕ, ಪತ್ರಕರ್ತ