ಹಿಜಾಬ್ ಒಂದು ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ತಂತ್ರ ಎಂದು ನಿವೃತ್ತ ಪ್ರಾಂಶುಪಾಲೆ ಶಾರದಾ ಉಡುಪಿ ಅಭಿಪ್ರಾಯಪಟ್ಟರು.
ವಿಜಯನಗರದ ಹೊಸಪೇಟೆ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ಧರ್ಮ, ಹಿಜಾಬ್ ಬಗ್ಗೆ ನಾವು ಮಾತನಾಡಲೇಬೇಕು. ಸದ್ಯ ಹಿಜಾಬ್ ವಿಷಯ ಮುನ್ನಲೆಗೆ ಬಂದಿದ್ದು ಒಂದು ಸಮುದಾಯದ ಮಹಿಳೆಯರ ಶಿಕ್ಷಣಕ್ಕೆ ಪೆಟ್ಟು ಕೊಡಲು ಹುಟ್ಟಿದ ಬಹುದೊಡ್ಡ ತಂತ್ರವಾಗಿದೆ. ಮಹಿಳೆಯರು ಪ್ರಶ್ನೆ ಮಾಡದೇ ಯಾವುದಕ್ಕೂ ಉತ್ತರ ಸಿಗೋದಿಲ್ಲ. ಅತ್ಯಾಚಾರಕ್ಕೊಳಗಾದ ಹೆಣ್ಣು ಠಾಣೆಗೆ ಪಿರ್ಯಾದಿ ಕೊಡಲು ಹೋದರೆ, ಮತ್ತೆ ಪೊಲೀಸ್‌ರಿಂದಲೇ ಅತ್ಯಾಚಾರಕ್ಕೊಳಗಾಗುವ ದರಿದ್ರ ಪರಿಸ್ಥಿತಿಯಲ್ಲಿದ್ದೀವಿ” ಎಂದು ಕಳವಳವ್ಯಕ್ತಪಡಿಸಿದರು.

ಡಾ. ಭಾನುಮತಿ ಕಲ್ಲೂರಿ ಮಾತನಾಡಿ, “ಕಾರ್ಖಾನೆಯ ಹೊಗೆಯಿಂದ ಮಹಿಳೆಯರು ಗರ್ಭಕೋಶದ ತೊಂದರೆಗೆ ಈಡಾಗುತ್ತಿದ್ದಾರೆ. ಗಣಿಗಾರಿಕೆಗಳು ಸಾಮಾನ್ಯ ಜನರ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತವೆ. ಸಾಲದಂತೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಪರ್ಯಾಯ ಸಂಪನ್ಮೂಲಗಳ ಜತೆ ಹೆಚ್ಚು ತೊಡಗಿಸಿಕೊಳ್ಳುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ವಲಸೆ ಹೋಗುವ ಪ್ರಮಾಣವನ್ನು ಕಡಿಮೆ ಮಾಡಬೇಕು” ಎಂದರು.
ಡಾ.ಜೋಗತಿ ಮಂಜಮ್ಮ ಮಾತನಾಡಿ, “ಸಮಾನತೆ ಜೊತೆಗೆ ಇಕ್ವಿಟಿ ಕೊಟ್ಟರೆ ಮಾತ್ರ ಸಮಾನತೆ ಆಗುತ್ತದೆ. ಇಲ್ಲಿ ಎಲ್ಲಾ ಲಿಂಗದವರು ಇದ್ದಾರೆ ಇದು ಸಮಾನತೆ ಆಗುತ್ತದೆ. ನನ್ನಂತ ಮಗು ಹುಟ್ಟಿದರೆ ಆ ಮಗುವನ್ನ ಬೀದಿಗೆ ಬಿಡಬೇಡಿ, ಆ ಮಗುವಿಗೆ ಉನ್ನತ ಶಿಕ್ಷಣಕೊಡಿ. ಅದು ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ. ಆ ಮೂಲಕ ಸಮಾನತೆ ಕೊಟ್ಟ ಸಂವಿಧಾನಕ್ಕೆ ಗೌರವ ಕೊಡೋಣ, ಅದನ್ನರಕ್ಷಿಸೋಣ” ಎಂದರು.

ಇದನ್ನೂ ಓದಿ: ವಿಜಯನಗರ | ಲಿಂಗ ಸಮಾನತೆ ನಮ್ಮ ಹೊಣೆ: ಪ್ರೊ. ರೋನಿತ್ ಕಾರ್ಕ
ಕಾರ್ಯಕ್ರಮದಲ್ಲಿ ಸೌಭಾಗ್ಯ ಎಚ್ ಸೇರಿದಂತೆ ಒಕ್ಕೂಟದ ಮುಖಂಡರು ಉಪಸ್ಥಿತರಿದ್ದರು.

