'ಫೋರ್ ಮದರ್ಸ್' ಚಿತ್ರದ ನಾಲ್ವರು ಅಮ್ಮಂದಿರು ಖಿನ್ನತೆಯಿಂದ ಕೂತಲ್ಲೇ ಕರಗಿಹೋಗುತ್ತಿದ್ದವರು, ಉತ್ಸಾಹದ ಚಿಲುಮೆಗಳಾಗುತ್ತಾರೆ. ಅಮ್ಮಂದಿರು ಮಾಗುವ, ಮಗ ಎಡ್ವರ್ಡ್... ಅಮ್ಮಂದಿರಿಗೇ ಅಮ್ಮನಾಗುವ ಬಗೆ ಭಿನ್ನವಾಗಿದೆ. ಮಹಿಳಾ ದಿನಕ್ಕಾಗಿ ನಾಲ್ವರು ಅಮ್ಮಂದಿರು... ನಿಮಗಾಗಿ.
ಆತ ಸೌಮ್ಯ ಸ್ವಭಾವದ ಐರಿಶ್ ಲೇಖಕ, ಮಧ್ಯವಯಸ್ಕ. ಹದಿನಾರನೇ ವಯಸ್ಸಿನಲ್ಲಿ, ತನಗಿಂತ ಚಿಕ್ಕವನನ್ನು ಇಷ್ಟಪಟ್ಟು, ಆತನಿಂದ ಪ್ರೇಮ ನಿರಾಕರಿಸಲ್ಪಟ್ಟವ. ಕಾದಂಬರಿಕಾರನಾಗುವ, ಆ ಮೂಲಕ ಅಮೆರಿಕಾಕ್ಕೆ ಹೋಗಿಬರುವ ಕನಸು ಕಾಣುತ್ತಿರುವ ಎಡ್ವರ್ಡ್‌ಗೆ, ಪ್ರಕಾಶಕರೊಂದಿಗಿನ ಸಂದರ್ಶನ ಎಂದಾಕ್ಷಣ, ಆತಂಕ ಆವರಿಸುತ್ತದೆ. ಬರೆಯಲಿರುವ ಕಾದಂಬರಿ ಕುರಿತು ಮಾತನಾಡಲು ಹಲವು ವಿಷಯಗಳಿದ್ದರೂ, ಮಂಡಿಸುವಾಗ ಮುಗ್ಗರಿಸುತ್ತಾನೆ. ವಿಚಲಿತನಾಗಿ ಒದ್ದಾಡುತ್ತಾನೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೇ, ಆತನಿಗೆ ವಯಸ್ಸಾದ ತಾಯಿಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಇದೆ. ಆಕೆಗೆ ಪ್ಯಾರಲಿಸಿಸ್ ಆಗಿ, ಎದ್ದು ಓಡಾಡುವುದು, ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಜೊತೆಗೆ ಮಾತೂ ಬರುವುದಿಲ್ಲ. ತುರ್ತು ಅಗತ್ಯಗಳಿಗೆ ಆಕೆಯ ಬೆಡ್ ಬಳಿ ಒಂದು ಗಂಟೆ ಕಟ್ಟಲಾಗಿದೆ. ಗಂಟೆ ಬಾರಿಸಿದ ತಕ್ಷಣ ಮಗ ಎಡ್ವರ್ಡ್, ತನ್ನೆಲ್ಲ ಕೆಲಸಗಳನ್ನು ಬಿಟ್ಟು ಹಾಜರಾಗಬೇಕು. ಆಕೆ ಐಪಾಡ್ ಮೂಲಕ ಮಾತನಾಡುವುದು, ಅದನ್ನು ಆ ತಕ್ಷಣವೇ ಪೂರೈಸುವುದು, ಅಮ್ಮ-ಮಗನ ನಿತ್ಯದ ಬದುಕಾಗಿದೆ. ಅದೇ ಚಿತ್ರದ ಆತ್ಮವಾಗಿದೆ.
ಅಮ್ಮ-ಮಗ ಒಟ್ಟಿಗೆ ಬದುಕುವುದೇ ಕಷ್ಟ. ಅಂಥದ್ದರಲ್ಲಿ, ಅವರದು ಪರಸ್ಪರ ಪ್ರೀತಿ, ಕರುಣೆ, ಕಾಳಜಿಯುಳ್ಳ ಬದುಕು. ಅಮ್ಮನಿಗೆ, ಆತ ಅತ್ಯುತ್ತಮ ಕಾದಂಬರಿಕಾರನೆಂಬ ಹೆಮ್ಮೆ. ಮಗನಿಗೆ, ಅಮ್ಮನೇ ಆಕಾಶ. ಅಮ್ಮನ ಐಪಾಡ್ ಮಾತು ಮತ್ತು ಇರಿಯುವ ನೋಟ; ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಒದ್ದಾಡುವ ಮಗ- ನೋಡುಗರಲ್ಲಿ ನಗೆಯುಕ್ಕಿಸುತ್ತದೆ.
ಆಧುನಿಕ ಜಗತ್ತಿನ ಜನ ಸ್ವಾರ್ಥ ಮತ್ತು ಸ್ವಚ್ಛಂದ ಬದುಕಿಗೆ ಹಾತೊರೆಯುವವರು. ಮೋಜು-ಮಸ್ತಿಯಲ್ಲಿ ಕಾಲ ಕಳೆಯುವವರು. ಆದರೆ, ಎಡ್ವರ್ಡ್‌ನ ಆಯ್ಕೆ ಮತ್ತು ಆಸೆಗಳೇ ಬೇರೆ. ವೃದ್ಧರನ್ನು ತೊರೆಯುವ ಅಥವಾ ದುಡ್ಡು ಕೊಟ್ಟು ಆಶ್ರಮವಾಸಿಗಳನ್ನಾಗಿಸುವ ಸಂದರ್ಭದಲ್ಲಿ, ಎಡ್ವರ್ಡ್‌ನ ಕಾಳಜಿ-ಕಕ್ಕುಲಾತಿ ಕರುಳಿಗಿಳಿಯುತ್ತದೆ. ಗಂಡು ಮಕ್ಕಳು ಹೇಗೆ ಬೆಳೆಯುತ್ತಾರೆ ಮತ್ತು ಹೇಗಾಗುತ್ತಾರೆ ಎಂಬುದು, ಮನೆ ಮತ್ತು ಪೋಷಕರನ್ನು ಅವಲಂಬಿಸಿರುತ್ತದೆ. ಎಡ್ವರ್ಡ್‌ನ ಹೆಂಗರುಳು ಎದೆಗಿಳಿಯುತ್ತದೆ.
ಎಡ್ವರ್ಡ್‌ಗೆ ಮೂವರು ಸ್ನೇಹಿತರೂ ಉಂಟು. ಅವರೂ ಕೂಡ ಅಮ್ಮಂದಿರನ್ನು ನೋಡಿಕೊಳ್ಳುವುದುಂಟು. ಆದರೆ, ಅದರಿಂದ ಅವರು ರೋಸಿಹೋಗಿದ್ದಾರೆ. ಅಮ್ಮಂದಿರಿಂದ ತಪ್ಪಿಸಿಕೊಳ್ಳಲು, ಸ್ವಚ್ಛಂದವಾಗಿ ಕಾಲಕಳೆಯಲು ಬಯಸುತ್ತಾರೆ. ಮೂವರೂ ಮೂವರು ವಯಸ್ಸಾದ ವೃದ್ಧ ಅಮ್ಮಂದಿರನ್ನು ತಂದು ಎಡ್ವರ್ಡ್ ಮನೆಗೆ ಬಿಡುತ್ತಾರೆ. ಆತನಿಗೆ ಕಷ್ಟವಾಗುತ್ತದೆ ಎಂಬುದನ್ನೂ ಲೆಕ್ಕಿಸದೆ, ನಿರಾಕರಿಸಿದರೂ ಕೇಳದೆ, ಅಕ್ಷರಶಃ ಬಿಟ್ಟು ಓಡುತ್ತಾರೆ.
ಇದನ್ನು ಓದಿದ್ದೀರಾ?: ಫಿಲ್ಮ್ ಫೆಸ್ಟಿವಲ್ | ‘ಪೈರ್’ ಚೆನ್ನಾಗಿದೆ; ಉದ್ಘಾಟನಾ ಚಿತ್ರಕ್ಕಿರಬೇಕಾದ ನಿರೀಕ್ಷೆ ಹುಸಿಗೊಳಿಸಿದೆ
ಆ ಮೂರು ಮುದುಕಿಯರು- ಒಬ್ಬೊಬ್ಬರು ಒಂದೊಂದು ರೀತಿ. ವಿಲಕ್ಷಣ ಬುದ್ಧಿಯ ವೃದ್ಧರು. ಬಯಸಿದ್ದು ಬೇಕೆನ್ನುವ ಧಿಮಾಕಿನವರು. ಪ್ರತಿಯೊಂದಕ್ಕೂ ತಗಾದೆ ತೆಗೆಯುವ ತಂಟೆಕೋರಿಯರು. ಹೊಸದಾಗಿ ಬಂದ ಮೂವರು ಮುದುಕಿಯರನ್ನು ಮನೆಯಲ್ಲಿ ನೋಡುತ್ತಿದ್ದಂತೆ, ಎಡ್ವರ್ಡ್‌ನ ಅಮ್ಮನಿಗೆ ಸಿಟ್ಟು ನೆತ್ತಿಗೇರುತ್ತದೆ. ಬೆಡ್ ಬಳಿಯ ಗಂಟೆ ಬಡಿದುಕೊಳ್ಳತೊಡಗುತ್ತದೆ. ಐಪಾಡ್ ಸದ್ದು ಮಾಡತೊಡಗುತ್ತದೆ. ಎಡ್ವರ್ಡ್ ಅವರನ್ನೂ ಸಮಾಧಾನಿಸಿ, ಮನೆಗೆ ಬಂದ ಅತಿಥಿಗಳಿಗೂ ಮಲಗಲು ಕೋಣೆ ವ್ಯವಸ್ಥೆ ಮಾಡಿ, ಹಾಸಿಗೆ-ಹೊದಿಕೆಗಳನ್ನು ಹೊಂದಿಸುತ್ತಾನೆ. ಆದರೆ ಅಮ್ಮ, ತನ್ನ ದಿಂಬು ಮತ್ತೊಬ್ಬರಿಗೆ ಕೊಟ್ಟಿದ್ದಕ್ಕೆ ಸಿಟ್ಟಾಗುತ್ತಾಳೆ. ಅದೇ ಬೇಕೆಂದು ಹಠ ಮಾಡುತ್ತಾಳೆ. ವಾಪಸ್ ಕೇಳಿ ಪಡೆವಾಗ, ಮುಖ ನೋಡುವುದು ಕೂಡ ಕಷ್ಟವಾಗುತ್ತದೆ. ಎಡ್ವರ್ಡ್‌ನಲ್ಲಿ ಅದು ಕಸಿವಿಸಿ ಹುಟ್ಟಿಸುತ್ತದೆ. ಅಮ್ಮನನ್ನು ಸಂಭಾಳಿಸುವುದೇ ಕಷ್ಟವಾಗಿರುವಾಗ, ವಿಲಕ್ಷಣ ಬುದ್ಧಿಯ ಮೂವರು ಅಮ್ಮಂದಿರನ್ನು ಒಂದೇ ಮನೆಯಲ್ಲಿ, ಒಟ್ಟಿಗೇ ನೋಡಿಕೊಳ್ಳುವುದು, ಕಾದಂಬರಿ ಬರೆಯುವುದೇ ವಾಸಿ ಎನಿಸುತ್ತದೆ.
ಬೆಳಗಿನ ಬ್ರೇಕ್‌ಫಾಸ್ಟಿಗೆ ಕೂತಾಗ ಮೂವರಿಗೂ ಮೂರು ರೀತಿಯ ತಿಂಡಿ ಬೇಕು. ಮನೆಯಲ್ಲಿ ಆಳುಗಳಿಲ್ಲ, ಮಾಡಲಾಗುವುದಿಲ್ಲ. ತರಲು ಆತ ಅಂಗಡಿಗೆ ಓಡಬೇಕು. ತಂದು ಪ್ಲೇಟ್‌ಗೆ ಹಾಕಿ ಕೊಟ್ಟರೆ, ಒಬ್ಬರು ತಿನ್ನುವುದು ಇನ್ನೊಬ್ಬರಿಗೆ ವಿಚಿತ್ರವಾಗಿ ಕಾಣಿಸುತ್ತದೆ. ವ್ಯಂಗ್ಯವಾಡುವುದು, ಮೂದಲಿಸುವುದು, ತಿಂಡಿ ತಿನ್ನದಂತೆ ಮಾಡುತ್ತದೆ. ಅವರ ನಡುವೆ ಎಡ್ವರ್ಡ್ ನಿಜಕ್ಕೂ ಸ್ಯಾಂಡ್‌ವಿಚ್ ಆಗುತ್ತಾನೆ. ಬರೆಯಲಿರುವ ಕಾದಂಬರಿಯ ಕುರಿತು ಯೋಚಿಸಲು, ಸಂದರ್ಶಕರನ್ನು ಸಂತೃಪ್ತರನ್ನಾಗಿಸಲು ಸಮಯವಿಲ್ಲದೆ ಒದ್ದಾಡುತ್ತಾನೆ.
ಇಷ್ಟಾದರೂ, ಅಮ್ಮನ ಫಿಜಿಯೋಥೆರಪಿಗೆ ಬರುವ ಗೆಳೆಯನ ಮನವೊಲಿಸಿ, ನಾಲ್ವರು ಅಮ್ಮಂದಿರನ್ನು ವೈದ್ಯಕೀಯ ತಪಾಸಣೆಗೆ, ಹೊರಗೆ ಸುತ್ತಾಡಿಸಲಿಕ್ಕೆ ಕರೆದುಕೊಂಡು ಹೋಗುತ್ತಾನೆ. ಅದು ಅವರ ಬದುಕಿನ ಏಕತಾನತೆಯನ್ನು ಹೋಗಲಾಡಿಸಿ, ಅವರಲ್ಲಿ ಹೊಸ ಹುರುಪು ತುಂಬಲು ಸಹಕಾರಿಯಾಗುತ್ತದೆ. ಒಬ್ಬಾಕೆ- ಆ ವಯಸ್ಸಿನಲ್ಲಿಯೂ ತನ್ನ ಬಾಯ್‌ಫ್ರೆಂಡ್ ಬಗ್ಗೆ ಸೆಕ್ಸಿಯಾಗಿ ಮಾತನಾಡುವುದು; ಮತ್ತೊಬ್ಬಾಕೆ- ರಾತ್ರಿ ವೇಳೆಯಲ್ಲಿ ಎದ್ದು ಹೋಗಿ ನೈಟ್‌ಕ್ಲಬ್‌ನಲ್ಲಿ ಹಾಡುವುದು; ಇನ್ನೊಬ್ಬಾಕೆ- ಯಾರದೋ ಮನೆಯ ಸಾವಿನಲ್ಲಿ ಭಾಗಿಯಾಗಿ, ಅವರಿಗೆ ಟೀ-ಕಾಫಿ ವಿತರಿಸುವುದು- ಎಡ್ವರ್ಡ್‌ನಲ್ಲಿ ರೇಜಿಗೆ ಹುಟ್ಟಿಸುತ್ತಾರೆ. ಅದೇ ಸಮಯದಲ್ಲಿ ಆ ಮೂವರೂ ಮತ್ತಷ್ಟು ಮಾಗುತ್ತಾರೆ. ಎಡ್ವರ್ಡ್ ಅಮ್ಮನೂ ಅವರಂತೆಯೇ ಆಗಿ, ಅವರೊಂದಿಗೆ ಬೆರೆಯುತ್ತಾರೆ. ಎಡ್ವರ್ಡ್ ನಾಲ್ವರು ಅಮ್ಮಂದಿರ ಮಗನಾಗುತ್ತಾನೆ.
ಏತನ್ಮಧ್ಯೆ, ಎಡ್ವರ್ಡ್ ಬರೆಯಲಿರುವ ಕಾದಂಬರಿ ಮುಂದೂಡುತ್ತ ಆತನಲ್ಲಿ ಇನ್ನಷ್ಟು ಹೆದರಿಕೆ ಹುಟ್ಟಿಸುತ್ತದೆ. ತನ್ನ ಸಾಮರ್ಥ್ಯದ ಬಗ್ಗೆ ತನ್ನಲ್ಲಿ ವಿಶ್ವಾಸವಿಲ್ಲದಂತಹ ಸಂದರ್ಭ ಸೃಷ್ಟಿಯಾಗುತ್ತದೆ. ಅದನ್ನು ಹೋಗಲಾಡಿಸಲು, ಆತನ ಅಮ್ಮ, ʼನಾನು ನನ್ನ ಪತಿಯೊಂದಿಗೆ ಮಾತನಾಡಬೇಕು, ಡಬ್ಲಿನ್‌ಗೆ ಹೋಗೋಣ, ಮಾಟಗಾತಿಯನ್ನು ಭೇಟಿ ಮಾಡೋಣʼ ಎನ್ನುತ್ತಾಳೆ.

ಕಷ್ಟವಾದರೂ, ಫಿಸಿಯೋ ಗೆಳೆಯನ ಮನವೊಲಿಸಿ, ಬಸ್ ಮಾಡಿಕೊಂಡು ಅವರನ್ನು ಕರೆದುಕೊಂಡು ಹೋಗುತ್ತಾನೆ. ಆತ್ಮಗಳನ್ನು ಕರೆದು ಮಾತನಾಡಿಸುವ ಮಾಟಗಾತಿ ಮುಂದೆ ನಾಲ್ವರು ಅಮ್ಮಂದಿರನ್ನು ಕೂರಿಸಿ, ದೂರದಲ್ಲಿ ನಿಲ್ಲುತ್ತಾನೆ. ಅದರಲ್ಲಿ ಆತನಿಗೆ ನಂಬಿಕೆ ಇಲ್ಲ. ಆದರೆ ಅಮ್ಮನ ಒತ್ತಾಯಕ್ಕೆ ಮಣಿದು, ಮೌನವಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಾನೆ.
ಇದನ್ನು ಓದಿದ್ದೀರಾ?: Biffes 2025 | ಬರ್ಬರ ಬದುಕನ್ನು ಬಿಡಿಸಿಟ್ಟು, ಬೆಚ್ಚಿಬೀಳಿಸುವ ‘ದ ಗರ್ಲ್ ವಿಥ್ ದ ನೀಡಲ್’
ಎಡ್ವರ್ಡ್ ತಂದೆಯ ಆತ್ಮ ಬರುವುದು, ಅದು ಮಾಟಗಾತಿಗೆ ಮಾತ್ರ ಕಾಣಿಸುವುದು, ಆ ಆತ್ಮ ಮಾತನಾಡುವುದು, ಅದು ನಿಜವೆಂದು ಅಮ್ಮ ನಂಬುವುದು. ಸಾಲದು ಎಂದು ಎಡ್ವರ್ಡ್‌ನನ್ನು ಬಲವಂತ ಮಾಡಿ, ಆತ್ಮದೊಂದಿಗೆ ಸಂವಾದಿಸುವಂತೆ ಒತ್ತಾಯಿಸುವುದು- ಅಸಂಗತ ನಾಟಕದಂತೆ ನಗೆಯುಕ್ಕಿಸುತ್ತದೆ. ಆದರೆ ಆ ದೂರ ಪ್ರಯಾಣ, ಅವರಿಷ್ಟದ ಜನರೊಂದಿಗಿನ ಒಡನಾಟ, ಹೊರಾಂಗಣ ನೋಟ, ಮಾಟಗಾತಿ ಮೇಲಿಟ್ಟ ನಂಬಿಕೆ- ಎಲ್ಲವೂ ಅವರಲ್ಲಿ ಹೊಸ ಉತ್ಸಾಹ, ಚೈತನ್ಯ, ಲವಲವಿಕೆಗೆ ಕಾರಣವಾಗುತ್ತದೆ. ಖಿನ್ನತೆಯಿಂದ ಕೂತಲ್ಲೇ ಕರಗಿಹೋಗುತ್ತಿದ್ದವರು, ಉತ್ಸಾಹದ ಚಿಲುಮೆಗಳಾಗುತ್ತಾರೆ. ಎಡ್ವರ್ಡ್ ಅಮ್ಮಂದಿರ ಅಮ್ಮನಾಗುತ್ತಾನೆ. ಅವರ ಪ್ರೀತಿ ಮತ್ತು ಹಾರೈಕೆ ಅವನಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ವಿಡಿಯೋ ಸಂದರ್ಶನವನ್ನು ಸುಲಭಗೊಳಿಸುತ್ತದೆ. ಜನಪ್ರಿಯ ಕಾದಂಬರಿಕಾರನಾಗಿಸುತ್ತದೆ. ಅಮೆರಿಕಕ್ಕೆ ಹೋಗುವ ಕನಸನ್ನು ನನಸು ಮಾಡುತ್ತದೆ.
ಅಮ್ಮಂದಿರ ಆರೈಕೆಯಲ್ಲಿ ಕಳೆದುಹೋಗುವ ಎಡ್ವರ್ಡ್‌ಗೆ, ʼನಿನಗಾಗಿ ಬದುಕುʼ ಎನ್ನುವ ಅಮ್ಮನ ಮಾತು; ಅವರೊಂದಿಗಿನ ಒಡನಾಟದಲ್ಲಿ ಅವನು ರೂಢಿಸಿಕೊಳ್ಳುವ ತಾಳ್ಮೆ, ಸಹನೆ, ಸಮಾಧಾನ- ನೋಡುಗರಿಗೆ ಬೇರೆಯದೇ ಸಂದೇಶ ರವಾನಿಸುತ್ತದೆ. 90 ನಿಮಿಷಗಳ ‘ಫೋರ್ ಮದರ್ಸ್‘ ಎಂಬ ಐರಿಶ್ ಚಿತ್ರವನ್ನು ನಿರ್ದೇಶಿಸಿರುವ ಡರೆನ್ ಥೋರ್ನ್ಟನ್, ಆಕಳಿಸಲು ಅವಕಾಶ ಕೊಡದಂತೆ ಕಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಸಹೋದರ ಕೊಲಿನ್ ಥೋರ್ನ್ಟನ್‌ನ ಚುರುಕು ಸಂಭಾಷಣೆ, ವೃದ್ಧರ ಲವಲವಿಕೆಯ ನಟನೆ- ಭಿನ್ನ ಚಿತ್ರವನ್ನಾಗಿಸಿದೆ. ಚಿತ್ರದ ನಾಯಕನಾಗಿ ಜೇಮ್ಸ್ ಮೆಕಾರ್ಡಲ್, ಆತನ ಅಮ್ಮನಾಗಿ ಫಿಯೋನುಲಾ ಫ್ಲನಾಗನ್, ಅಮ್ಮ-ಮಗನಾಗಿಯೇ ಬದುಕಿದ್ದಾರೆ. ಅದರಲ್ಲೂ ಮಗ ಎಡ್ವರ್ಡ್… ಅಮ್ಮಂದಿರಿಗೇ ಅಮ್ಮನಾಗುವ ಬಗೆ ಭಿನ್ನವಾಗಿದೆ, ಚಿತ್ರ ಚಿತ್ತಕ್ಕಿಳಿಯುತ್ತದೆ.

ಲೇಖಕ, ಪತ್ರಕರ್ತ