ಬೀದರ್ ವಿಶ್ವವಿದ್ಯಾಲಯ ಅಭಿವೃದ್ಧಿ ಹೊಂದಬೇಕಾದರೆ ಎಲ್ಲಾ ಸಿಂಡಿಕೇಟ್ ಸದಸ್ಯರ ಸಹಕಾರ ಮಾರ್ಗದರ್ಶನದ ಅವಶ್ಯಕತೆಯಿದೆ. ಎಲ್ಲರ ಸಹಕಾರದೊಂದಿಗೆ ಮಾದರಿ ವಿಶ್ವವಿದ್ಯಾಲಯ ಕಟ್ಟೋಣ ಎಂದು ಬೀದರ್ ವಿವಿ ಕುಲಪತಿ ಪ್ರೋ.ಬಿ.ಎಸ್.ಬಿರಾದಾರ್ ಹೇಳಿದರು.
ರಾಜ್ಯ ಸರ್ಕಾರ ಬೀದರ ವಿಶ್ವವಿದ್ಯಾಲಯಕ್ಕೆ ನೂತನವಾಗಿ ನೇಮಿಸಿದ ಆರು ಜನ ಸಿಂಡಿಕೇಟ್ ಸದಸ್ಯರು ಶುಕ್ರವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ವರದಿ ಮಾಡಿಕೊಂಡರು.
ನೂತನ ಸಿಂಡಿಕೇಟ್ ಸದಸ್ಯರಾದ ಶಿವನಾಥ ಪಾಟೀಲ್ ಮಾಧವರಾವ್ ಪಾಟೀಲ್ (ಸಾಮಾನ್ಯ), ಸಚಿನ್ ಶಿವರಾಜ್ (ಸಾಮಾನ್ಯ), ವಿಠಲ್‌ದಾಸ್ ದೇವಿದಾಸ ಪ್ಯಾಗೆ (ಪರಿಶಿಷ್ಟ ಜಾತಿ), ಅರ್ಜುನ್ ಮತೆಪ್ಪ ಕನಕ (ಹಿಂದುಳಿದ ವರ್ಗ), ಅಬ್ದುಲ್ ಸತ್ತಾರ್ ಚಾಂದ್ ಸಾಬ್ (ಅಲ್ಪಸಂಖ್ಯಾತರು) ಹಾಗೂ ವೈಷ್ಣವಿ ಆರ್.ಪಾಟೀಲ್ ಅವರು ತಮ್ಮ ಜವಾಬ್ದಾರಿ ವಹಿಸಿಕೊಂಡರು.
ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಬಿ.ಎಸ್.ಬಿರಾದಾರ್ ಮಾತನಾಡಿ, ʼನೂತನ ಸದಸ್ಯರ ಆಗಮನದಿಂದ ವಿಶ್ವವಿದ್ಯಾಲಯಕ್ಕೆ ವಿಶೇಷ ಶಕ್ತಿ ಬಂದಂತಾಗಿದೆ. ವಿಶಾಲವಾದ 322 ಎಕರೆಯಲ್ಲಿ ವ್ಯಾಪಿಸಿರುವ ಬೀದರ ವಿಶ್ವವಿದ್ಯಾಲಯವು 124 ಕಾಲೇಜುಗಳ ಸಂಯೋಜನೆಯೊಂದಿಗೆ 14 ಸ್ನಾತಕೋತ್ತರ ಪದವಿ ಕೋರ್ಸ್ ಹಾಗೂ 26,000 ವಿದ್ಯಾರ್ಥಿಗಳು ಪ್ರವೇಶ ಪಡೆದಂತಹ ವಿಶ್ವವಿದ್ಯಾಲಯವಾಗಿದೆʼ ಎಂದರು.
ʼವಿಶ್ವವಿದ್ಯಾಲಯದ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸೋಣ. ಬೀದರ್ ವಿಶ್ವವಿದ್ಯಾಲಯದ ಸರ್ವಾಂಗೀಣ ವಿಕಾಸಕ್ಕೆ ಬದ್ಧರಾಗಿ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಸರ್ಕಾರದಿಂದ ಅನುದಾನವನ್ನು ಪಡೆದು ಸುವ್ಯಸ್ಥಿತವಾದ ವಿಶ್ವವಿದ್ಯಾಲಯದ ಭೌತಿಕ ಸಂಪನ್ಮೂಲ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸೋಣʼ ಎಂದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್‌ನಲ್ಲಿ ಬೀದರ್ ಜಿಲ್ಲೆಗೆ ಸಿಕ್ಕಿದ್ದೇನು, ಯಾರು ಏನಂದ್ರು?
ಆಡಳಿತ ಕುಲಸಚಿವೆ ಸುರೇಖಾ ಕೆ.ಎ.ಎಸ್ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೋ.ಪರಮೇಶ್ವರ ನಾಯ್ಕ್ ವಂದಿಸಿದರು. ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು