ಲಸಿಕೆ ಪಡೆದ ಹೆಣ್ಣು ಮಗುವೊಂದು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮಾಗೋಡು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟಿರುವುದು ಗ್ರಾಮದ ಕೀರ್ತನ ಹಾಗೂ ಲಕ್ಷ್ಮೀಕಾಂತ್ ದಂಪತಿಯ ಮಗು ಎಂದು ಗುರುತಿಸಲಾಗಿದೆ.
ಗ್ರಾಮದ ಆರೋಗ್ಯ ಇಲಾಖೆ (ಎಎನ್‌ಎಂ) ಸಿಬ್ಬಂದಿ ಮುದ್ದಮ್ಮ ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ರೋಟ್-2 ಲಸಿಕೆ ನೀಡಿದ್ದಾರೆ. ಲಸಿಕೆ ಹಾಕಿದ ಬಳಿಕ ಮಗು ನಿದ್ದೆಗೆ ಜಾರಿತ್ತು. ಅದೇ ದಿನ ಮಧ್ಯಾಹ್ನ 3.30ರ ಸುಮಾರಿಗೆ ಬೇಧಿಯಿಂದ ಮಗು ಅಸ್ವಸ್ಥಗೊಂಡಿದೆ. ತಕ್ಷಣ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿ.. ಪರಿಶೀಲನೆ ನಡೆಸಿದ ವೈದ್ಯರು ತುಮಕೂರು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ನಂತರ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ಬಂದಾಗ ವೈದ್ಯರು ತಪಾಸಣೆ ನಡೆಸಿ ಮಗು ಮೃತ ಪಟ್ಟು ಒಂದು ತಾಸಾದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇತ್ತ ಮುದ್ದಮ್ಮ ನೀಡಿದ ಲಸಿಕೆಯಿಂದಲೇ ಮಗುವಿನ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದು, ಶಿರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗುವಿನ ಸಾವಿನ ಸತ್ಯಾ ಸತ್ಯತೆ ಕುರಿತು ಪೊಲೀಸರ ತನಿಖೆಯಷ್ಟೇ ಉತ್ತರ ನೀಡಬೇಕಿದೆ.
