ಬಿಜೆಪಿಯೊಂದಿಗೆ ಸೇರಿಕೊಂಡು ಒಳಸಂಚು ನಡೆಸುವವರನ್ನು ಪಕ್ಷದಿಂದ ತೆಗೆದುಹಾಕಿ, ಅವರ ಬಗ್ಗೆ ಎಚ್ಚರಿಕೆ ಹೊಂದಿರಿ ಎಂದು ಗುಜರಾತ್ ಕಾಂಗ್ರೆಸ್ ಸಮಿತಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಹಾಗೆಯೇ ಇಂತಹ ನಾಯಕರನ್ನು ದೂರ ಮಾಡಿದರೆ ಮಾತ್ರ ಕಾಂಗ್ರೆಸ್ ರಾಜ್ಯದಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಗುಜರಾತ್‌ನ ಜನರಿಗೆ ನಿಜವಾದ ಪರ್ಯಾಯ ಬೇಕಿದೆಯೇ ಹೊರತು ಬಿಜೆಪಿಯ ಬಿ ಟೀಮ್ ಬೇಕಾಗಿಲ್ಲ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಆರ್ಥಿಕ ಸೋಲು, ನಿರುದ್ಯೋಗ, ಹಣದುಬ್ಬರವನ್ನು ಮಾತ್ರ ಮೋದಿ ಸರ್ಕಾರ ‘ಭಾರೀ ಪ್ರಮಾಣದಲ್ಲಿ’ ಸೃಷ್ಟಿಸಿದೆ: ರಾಹುಲ್ ಗಾಂಧಿ
“ಗುಜರಾತ್‌ನಲ್ಲಿ ಜಿಲ್ಲಾ ಮಟ್ಟದಲ್ಲಿಯೇ ನಾಯಕತ್ವದಲ್ಲಿ ಒಡಕಿದೆ. ಗುಜರಾತ್‌ನಲ್ಲಿ ಎರಡು ರೀತಿಯ ನಾಯಕರಿದ್ದಾರೆ. ಈ ಪೈಕಿ ಒಂದು ವಿಭಾಗದ ನಾಯಕರು ಜನರಿಗಾಗಿ ನಿಲ್ಲುತ್ತಾರೆ. ಅವರ ಹೃದಯದಲ್ಲಿ ಕಾಂಗ್ರೆಸ್ ಸಿದ್ಧಾಂತವಿದೆ. ಇನ್ನೊಂದು ವಿಭಾಗದ ನಾಯಕರು ಜನರಿಂದ ದೂರ ಇರುತ್ತಾರೆ. ಜನರಿಗೆ ಗೌರವವೂ ನೀಡುವುದಿಲ್ಲ. ಈ ಪೈಕಿ ಅರ್ಧದಷ್ಟು ಜನರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಬಿಜೆಪಿಯೊಂದಿಗೆ ನಂಟು ಹೊಂದಿರುವ ಜನರನ್ನು ನಮ್ಮಿಂದ ದೂರ ಮಾಡುವವರೆಗೂ ನಮ್ಮನ್ನು ಜನರು ನಂಬುವುದಿಲ್ಲ. ಗುಜರಾತ್‌ನ ಜನರಿಗೆ, ಉದ್ಯಮಿಗಳಿಗೆ, ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಿಗಳಿಗೆ, ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ವಿರೋಧ ಪಕ್ಷ ಬೇಕಾಗಿದೆ. ಜನರಿಗೆ ಪರ್ಯಾಯ ಬೇಕಿದೆ, ಬಿಜೆಪಿಯ ಬಿ ಟೀಮ್ ಬೇಕಾಗಿಲ್ಲ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಗುಜರಾತ್ | ಎರಡು ವರ್ಷದಲ್ಲಿ 286 ಸಿಂಹಗಳು, 456 ಚಿರತೆಗಳು ಸಾವು
“ನಾವು ಜನರಿಗೆ ಗೌರವ ಕೊಡುವ ಮತ್ತು ಬಿಜೆಪಿಯೊಂದಿಗೆ ನಂಟು ಹೊಂದಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರತ್ಯೇಕ ಮಾಡಬೇಕು. ನಾವು ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯ ಬಂದರೆ ನಾವು ಕನಿಷ್ಠ 30-34 ಜನರನ್ನು ಪಕ್ಷದಿಂದ ತೆಗೆದುಹಾಕಬೇಕಾಗುತ್ತದೆ. ಕಾಂಗ್ರೆಸ್‌ನಲ್ಲಿದ್ದು ಬಿಜೆಪಿಗಾಗಿ ಕೆಲಸ ಮಾಡುವುದಾದರೆ ಅವರನ್ನು ಪಕ್ಷದಿಂದ ತೆಗೆಯಿರಿ, ಹೊರಗಿದ್ದು ಬಿಜೆಪಿಗಾಗಿ ಕೆಲಸ ಮಾಡಲಿ. ಬಿಜೆಪಿ ಅವರನ್ನು ಒಮ್ಮೆ ಪಕ್ಷಕ್ಕೆ ಸೇರಿಸಿ ಬಳಿಕ ಹೇಗೆ ಕಿತ್ತೆಸಿಯುತ್ತದೆ ಎಂಬುದನ್ನು ನಾವು ನೋಡೋಣ” ಎಂದು ಹೇಳಿದರು.
