ದಕ್ಷಿಣ ಕೊರಿಯಾ ಆಟಗಾರರ ವಿರುದ್ಧ ಪ್ರಬಲ ಸವಾಲೊಡ್ಡಿ ಗೆದ್ದು ಬೀಗಿದ ಭಾರತದ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಇಂಡೋನೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ.
ಆದರೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್‌ಎಸ್ ಪ್ರಣೋಯ್, ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.
ಜಕಾರ್ತದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ಜೋಡಿ, ಕೊರಿಯಾದ ಕಾಂಗ್ ಮಿನ್ ಹ್ಯುಕ್-ಸಿಯೊ ಸೆಯುಂಗ್ ಜೇ ವಿರುದ್ಧ 17-21, 21-19, 21-18 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.
67 ನಿಮಿಷಗಳ ಕಾಲ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪ್ರಶಸ್ತಿ ವಿಜೇತ, ಪ್ರಸ್ತುತ ವಿಶ್ವ 6ನೇ ಶ್ರೇಯಾಂಕಿತ ಭಾರತೀಯ ಜೋಡಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಿತು. ಈ ಮೂಲಕ ʻಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿʼಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಡೋನೇಷ್ಯಾದ ಪ್ರಮುದ್ಯ ಕುಸುಮವರ್ಧನ – ಯೆರೆಮಿಯಾ ಎರಿಚ್ ಯೋಚೆ ಯಾಕೋಬ್ ರಾಂಬಿಟನ್ ಅಥವಾ ಎರಡನೇ ಶ್ರೇಯಾಂಕದ ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಜೋಡಿಯನ್ನು ಫೈನಲ್ ಪಂದ್ಯದಲ್ಲಿ, ಸಾತ್ವಿಕ್ – ಚಿರಾಗ್ ಎದುರಿಸಲಿದ್ದಾರೆ.
ಎಚ್‌ಎಸ್ ಪ್ರಣೋಯ್‌ಗೆ ನಿರಾಸೆ
ಮಲೇಷ್ಯಾ ಮಾಸ್ಟರ್ಸ್ ಚಾಂಪಿಯನ್ ಎಚ್‌ಎಸ್ ಪ್ರಣೋಯ್ ಅವರು ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಅಗ್ರ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ, 15-21, 15-21 ಅಂತರದಲ್ಲಿ ನೇಟರ್ ಸೆಟ್‌ಗಳಿಂದ ಮಣಿದು ನಿರಾಸೆ ಅನುಭವಿಸಿದರು.