ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಖರೀದಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಇಂದು (ಭಾನುವಾರ) ಪ್ರಧಾನಿ ನರೇಂದ್ರ ಮೋದಿ ಅವರ 102ನೇ ಮನ್ ಕಿ ಬಾತ್ ಸಂಚಿಕೆಯಲ್ಲಿ, ರಾಜ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸುವಿರಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಇಂದು ಮೋದಿಯವರ 102ನೇ ಸಂಚಿಕೆಯ ಮನ್ ಕಿ ಬಾತ್. ಇತ್ತೀಚಿನ ವರದಿಗಳ ಪ್ರಕಾರ ಮೋದಿಯವರ ಅಂಧ ಭಕ್ತರೂ ಮನ್ ಕಿ ಬಾತ್ ಕೇಳುತ್ತಿಲ್ಲ. ಆದರೂ ಮೋದಿಯವರು ಛಲ ಬಿಡದ ತ್ರಿವಿಕ್ರಮನಂತೆ ಮನ್ ಕಿ ಬಾತ್ ಮಾಡುತ್ತಲೇ ಇದ್ದಾರೆ. ಮೋದಿಯವರೇ, ಇಂದಿನ ಮನ್ ಕಿ ಬಾತ್‌ನಲ್ಲಾದರೂ ಚರ್ವಿತ ಚರ್ವಣದಂತೆ ಹೇಳಿದನ್ನೇ ಹೇಳುವುದ ಬಿಟ್ಟು ಹೊಸದೇನಾದರೂ ಹೇಳುವಿರಾ” ಎಂದು ಪ್ರಶ್ನಿಸಿದ್ದಾರೆ.
“ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಬಗ್ಗೆ ಅನೇಕ ನಿರೀಕ್ಷೆಗಳಿವೆ. ಇಂದು ನಿಮ್ಮ ಮನದಾಳದ ಮಾತಿನಲ್ಲಿ ಮಣಿಪುರದ ಹಿಂಸಾಚಾರದ ಬಗ್ಗೆ ಮಾತಾಡುವಿರೆ? ಮಹಿಳಾ ಕುಸ್ತಿಪಟುಗಳ ಮೇಲೆ ನಿಮ್ಮ ಪಕ್ಷದ ಸಂಸದ ಎಸಗಿದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತಾಡುವಿರೆ? ಚೀನಾ ಮತ್ತು ಭಾರತದ ಗಡಿ ಸಂಘರ್ಷದ ಬಗ್ಗೆ ದೇಶದ ಜನರೆದುರು ಸತ್ಯ ಮಾತಾಡುವಿರೆ?” ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
“ಮೋದಿಯವರೇ, ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲು ಒಪ್ಪಿ ನಂತರ ನಿರಾಕರಿಸಿದ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮಾತಾಡುವಿರೆ? ಬಡವರಿಗೆ ಸಿಗಬೇಕಾಗಿದ್ದ ಅಕ್ಕಿಯನ್ನು ಹೆಂಡ ತಯಾರಿಸಲು ಬೇಕಾದ ಎಥೆನಾಲ್ ಉತ್ಪಾದನೆಗೆ ಕೊಟ್ಟಿದ್ಯಾಕೆ ಎಂಬ ಬಗ್ಗೆ ಮಾತಾಡುವಿರೆ? ನೀವು ಇಲ್ಲಿಯವರೆಗೂ ಕೊಟ್ಟ ಆಶ್ವಾಸನೆಗಳು ಎಷ್ಟು ಈಡೇರಿದೆ ಎಂಬ ಬಗ್ಗೆ ಮಾತಾಡುವಿರೆ” ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೂರು ತಿಂಗಳೊಳಗೆ ‘108’ ಆರೋಗ್ಯ ಸೇವೆಗೆ ಹೊಸ ರೂಪ: ದಿನೇಶ್ ಗುಂಡೂರಾವ್
“ಮೋದಿಯವರೇ, ನಿಮ್ಮ ಇಂದಿನ ಮನ್ ಕಿ ಬಾತ್ ಸತ್ಯ ಹಾಗೂ ವಾಸ್ತವದ ಅನಾವರಣವಾಗಿರಲಿ. ಸತ್ಯ ಹೇಳುವ ಮೂಲಕ ಈ ಮನ್ ಕಿ ಬಾತ್ ವಿಶಿಷ್ಟ ವಿಭಿನ್ನವಾಗಿರಲಿ. ಮೋದಿಯವರೆ ಸತ್ಯ ಮಾತಾಡಲು ಹೃದಯ ಶುದ್ಧಿಯಿರಬೇಕು ಹಾಗೂ ಮನಸ್ಸು ಕಲ್ಮಶ ರಹಿತವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಧೈರ್ಯವಿರಬೇಕು. ಇಂದಾದರೂ ನಾವು ನಿಮ್ಮಿಂದ ಸತ್ಯ ನಿರೀಕ್ಷಿಸಬಹುದೇ?” ಎಂದು ಕುಟುಕಿದ್ದಾರೆ.