ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ ಬೆಳಿಗ್ಗೆ ನಗರದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ 5ಕೆ ಮತ್ತು ಪುರುಷರಿಗಾಗಿ 10ಕೆ ಕರ್ನಾಟಕ ಸ್ಟೇಟ್ ಪೊಲೀಸ್ ರನ್-2025 ಮ್ಯಾರಥಾನ್ ಓಟವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಪೊಲೀಸ್ ಓಟ–2024ರ ಯಶಸ್ಸಿನ ಹಿನ್ನೆಲೆಯಲ್ಲಿ, 2ನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ಓಟವನ್ನು ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಎಲ್ಲರಿಗಾಗಿ ಫಿಟ್‌ನೆಸ್ ಮತ್ತು ಮಾದಕ ದ್ರವ್ಯ ಮುಕ್ತ ಕರ್ನಾಟಕ ಧ್ಯೇಯ ವಾಕ್ಯದೊಂದಿಗೆ ನಡೆದ ಕರ್ನಾಟಕ ಸ್ಟೇಟ್ ಪೊಲೀಸ್ ರನ್-2025 ಮ್ಯಾರಥಾನ್ ಓಟಕ್ಕೆ ಶಾಸಕ ಚನ್ನಬಸಪ್ಪ, ಡಾ. ಧನಂಜಯ್ ಸರ್ಜಿ ಸೇರಿದಂತೆ ಇತರರು ಚಾಲನೆ ನೀಡಿದರು.
ಮ್ಯಾರಥಾನ್ ಓಟವನ್ನು ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮುಖಾಂತರ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ಮುಕ್ತಾಯವಾಯಿತು.
10ಕೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕಿರಣ್, ದ್ವಿತೀಯ ಸ್ಥಾನವನ್ನು ನಂದನ್ ತೃತೀಯ ಸ್ಥಾನವನ್ನು ಭರತ್ ಅವರು ಹಾಗೂ 5ಕೆ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲು ದ್ವಿತೀಯ ಸ್ಥಾನವನ್ನು ಧನರಾಜ್ ತೃತೀಯ ಸ್ಥಾನವನ್ನು ಧನುಷ್ ಹಾಗೂ 5ಕೆ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ದೀಕ್ಷಾ ದ್ವಿತೀಯ ಸ್ಥಾನವನ್ನು ಸಾನಿಕ ತೃತೀಯ ಸ್ಥಾನವನ್ನು ಸೋನಿಯಾ ಪಡೆದರು.
ಪ್ರಥಮ ಸ್ಥಾನ ಪಡೆದ ವಿಜೇತರಿಗೆ ₹10,000 ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ ₹8,000 ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ₹5,000 ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು. ಜತೆಗೆ ಮ್ಯಾರಥಾನ್‌ನಲ್ಲಿ ಭಾಗವಹಿಸಿ, ಪೂರ್ಣಗೊಳಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಲಾರಿ-ಕಾರು ನಡುವೆ ಭೀಕರ ಅಪಘಾತ; ಬಿಎಂಟಿಸಿ ನಿವೃತ್ತ ನೌಕರ ಸೇರಿ ಐವರ ಸಾವು
ಈ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳ ಕಡ್ಡಾಯ ಪಾಲನೆಯ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಯುವಜನ ಮತ್ತು ಕ್ರೀಡಾ ಇಲಾಖೆಯ ವಿಧ್ಯಾರ್ಥಿಗಳು, ವಿವಿಧ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು, ಶಿವಮೊಗ್ಗದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂಧಿಗಳು ಮತ್ತು ಸಾರ್ವಜನಿಕರು ಇದ್ದರು.