ಲೈಂಗಿಕ ಪ್ರೇರಿತ ಪ್ರಚೋದನೆಗಳಿಲ್ಲದೆ ಅಪ್ರಾಪ್ತ ಬಾಲಕಿಯ ತುಟಿಗಳನ್ನು ಮುಟ್ಟುವುದು, ಒತ್ತುವುದು ಹಾಗೂ ಆಕೆಯ ಪಕ್ಕದಲ್ಲಿ ಮಲಗುವುದು ಪೋಕ್ಸೋ ಕಾಯ್ದೆಯಡಿ ಅಪರಾಧವಲ್ಲ. ಅಂತಹ ಘಟನೆಗಳಲ್ಲಿ ಆರೋಪ ಹೊರಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸೋದರ ಮಾನವ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. “ಇಂತಹ ಕೃತ್ಯಗಳು ಮಗುವಿನ ಘನತೆಯನ್ನು ಉಲ್ಲಂಘಿಸಬಹುದು. ಆಕೆಯ ನಮ್ರತೆಯನ್ನು ಕೆರಳಿಸಬಹುದು. ಆದರೆ, ‘ಬಹಿರಂಗ ಅಥವಾ ಊಹಿಸಲಾದ ಲೈಂಗಿಕ ಉದ್ದೇಶ’ವಿಲ್ಲದೆ ಇದ್ದಾದ, ಅಂತಹ ಘಟನೆಯಗಳನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಆರೋಪಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
ಆದಾಗ್ಯೂ, “ಬಾಲಕಿಯ ನಮ್ರತೆಯನ್ನು ಕೆರಳಿಸುವ ಉದ್ದೇಶದಿಂದ ಎಸಗುವ ಇಂತಹ ಕೃತ್ಯಗಳ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ” ಎಂದು ಪೀಠವು ಹೇಳಿದೆ.
“ಪ್ರಕರಣ ದಾಖಲಿಸಿರುವ ಅರ್ಜಿದಾರ ಬಾಲಕಿ, ತನ್ನ ಸೋದರ ಮಾವ ತನ್ನ ತುಟಿಗಳನ್ನು ಮುಟ್ಟಿ ಒತ್ತಿದಿದ್ದಾರೆ. ತನ್ನ ಪಕ್ಕದಲ್ಲಿ ಮಲಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಆ ಕೃತ್ಯಗಳನ್ನು ಲೈಂಗಿಕ ಉದ್ದೇಶದಿಂದ ಎಸಗಲಾಗಿದೆ ಎಂಬುದಕ್ಕೆ ಆಕೆಯ ಯಾವುದೇ ಹೇಳಿಕೆಗಳು ನಿರ್ದಿಷ್ಟವಾಗಿ ಪ್ರತಿಪಾದಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ಬಾಲಕಿಯ ಹೇಳಿಕೆಗಳಲ್ಲಿ ಘಟನೆಯು ಲೈಂಗಿಕ ಪ್ರೇರಿತ ಕೃತ್ಯವೆಂಬುದಕ್ಕೆ ಸಣ್ಣದೊಂದು ಸೂಚನೆಯೂ ಇಲ್ಲ. ಹೀಗಾಗಿ, ‘ಲೈಂಗಿಕ ಉದ್ದೇಶ’ದ ಕೃತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಸಂತ್ರಸ್ತೆಯು ಯಾವುದೇ ಲೈಂಗಿಕ ಕೃತ್ಯದ ಆರೋಪಗಳನ್ನು ಮಾಡಿಲ್ಲ. ಮ್ಯಾಜಿಸ್ಟ್ರೇಟ್, ಪೊಲೀಸ್ ಅಥವಾ ಸಿಡಬ್ಲ್ಯೂಸಿ ಮುಂದೆ ದಾಖಲಿಸಿರುವ ಹೇಳಿಕೆಗಳಲ್ಲಿ ಆಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಅಥವಾ ಅಂತಹ ಅಪರಾಧಕ್ಕೆ ಯತ್ನಿಸಲಾಗಿದೆ ಎಂಬ ಕುರಿತು ಸೂಚಿಸಿಲ್ಲ. ಹೀಗಾಗಿ, ಪೋಕ್ಸೋ ಕಾಯ್ದೆಯ ಸೆಕ್ಷನ್ 10ರಂ ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಬದಲಾಗಿ, ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು” ಎಂದು ಹೇಳಿದೆ.