ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ʼನಮ್ಮ ಪೊಲೀಸ್, ನಮ್ಮ ಹೆಮ್ಮೆ’ ಘೋಷವಾಕ್ಯದೊಂದಿಗೆ ಬೀದರ್ ನಗರದಲ್ಲಿ ಭಾನುವಾರ ಬೆಳಿಗ್ಗೆ ಮ್ಯಾರಾಥಾನ್ ನಡೆಯಿತು.

ಫಿಟ್ನೆಸ್ ಫಾರ್ ಆಲ್, ಡ್ರಗ್ಸ್ ಮುಕ್ತ ಕರ್ನಾಟಕ, ಕಡ್ಡಾಯ ತಲೆಕಾಪು ಧರಿಸಿ ಮತ್ತು ಸೈಬರ್ ಅಪರಾಧ ಮುಕ್ತ ಬೀದರ್ ಧ್ಯೇಯವಾಕ್ಯದೊಂದಿಗೆ ನಡೆದ ʼಪೊಲೀಸ್ ರನ್ʼಗೆ ಭರ್ಜರಿ ಸ್ಪಂದನೆ ದೊರೆಯಿತು.
ನಗರದ ಸಿದ್ದಾರೂಢ ಮಠದ ಆವರಣದಿಂದ ಆರಂಭಗೊಂಡ 5 ಕಿ.ಮೀ. ಓಟ ಬಿವಿಬಿ ಕಾಲೇಜು, ಮೈಲೂರ್ ಕ್ರಾಸ್, ಹಾರೂರಗೇರಿ ಕಮಾನ್, ಬೋಮಗೊಂಡೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ ಶಿವಾಜಿ ವೃತ್ತ, ಮಡಿವಾಳ ವೃತ್ತದ ಮಾರ್ಗವಾಗಿ ಶಿವನಗರ ವಾಕಿಂಗ್ ಪಾಥ್ ಬಳಿ ಮುಕ್ತಾಯಗೊಂಡಿತು.

ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು, ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.