ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಐವರು ಸಿಬ್ಬಂದಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಭಾನುವಾರ ಮುಂಬೈನ ನಾಗಪಾಡಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ನಾಗಪಾಡಾದ ಮಿಂಟ್ ರಸ್ತೆಯ ಗುಡ್ ಲಕ್ ಮೋಟಾರ್ ತರಬೇತಿ ಶಾಲೆಯ ಬಳಿಯ ಡಿಮ್ಟಿಮ್ಕರ್ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಸ್ಪೇಸ್ ಬಿಲ್ಡಿಂಗ್ ಎಂಬ ನಿರ್ಮಾಣ ಹಂತದಲ್ಲಿರುವ ಕಟ್ಟದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವಾಗ ಮಧ್ಯಾಹ್ನ 1:30 ಸುಮಾರಿಗೆ ಈ ಘಟನೆ ಸಂಭವಿಸಿದೆ.
ಇದನ್ನು ಓದಿದ್ದೀರಾ? ಮುಂಬೈನ ಭಾಷೆ ಮರಾಠಿ, ಇತರರೂ ಅರ್ಥಮಾಡಿಕೊಳ್ಳಬೇಕು: ಆರ್‌ಎಸ್‌ಎಸ್ ನಾಯಕ ಯೂಟರ್ನ್
ಮುಂಬೈ ಅಗ್ನಿಶಾಮಕ ದಳದ ತಂಡಗಳು ಕಾರ್ಮಿಕರನ್ನು ಟ್ಯಾಂಕ್‌ನಿಂದ ಹೊರತೆಗೆದು ಸರ್ ಜೆಜೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳು ಐವರು ಕಾರ್ಮಿಕರು ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.
ಯಾವುದೇ ದೊಡ್ಡ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವಾಗ ಕಾರ್ಮಿಕರ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಆದರೆ ದೇಶದಲ್ಲಿ ಹಲವೆಡೆ ಕಾರ್ಮಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಯಾವುದೇ ಸುರಕ್ಷತೆ ಇಲ್ಲದೆಯೇ ಕಾರ್ಮಿಕರನ್ನು ನೀರಿನ ಟ್ಯಾಂಕ್‌ಗೆ ಇಳಿಸಲಾಗುತ್ತದೆ. ದುಡಿಮೆಯೇ ಹೊಟ್ಟೆ ತುಂಬಿಸುವಾಗ ಕಾರ್ಮಿಕರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ.
