ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, “ದಿಗಂತ್‌ನನ್ನು ಯಾರೂ ಅಪಹರಿಸಿರಲಿಲ್ಲ,ಅವನೇ ಹೋಗಿದ್ದ” ಎಂದು ತಿಳಿಸಿದ್ದಾರೆ.
“ದಿಗಂತ್ ಮನೆಯಿಂದ ನಾಪತ್ತೆಯಾದ ಬಳಿಕ ಬಂಟ್ವಾಳ ಡಿವೈಎಸ್ ಪಿ ನೇತೃತ್ತದಲ್ಲಿ ಏಳು ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು. ಕಾಣೆಯಾಗಿದ್ದ ದಿಗಂತ್ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ.ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ಹೊರ ಹಾಕಿದ್ದಾನೆ” ಎಂದು ತಿಳಿಸಿದ್ದಾರೆ.
“ಮಾ.3 ?ರಿಂದ ದ್ವಿತೀಯ ಪಿಯುಸಿ ಫೈನಲ್ ಪರೀಕ್ಷೆಯ ಇದ್ದ ಹಿನ್ನೆಲೆಯಲ್ಲಿ ಹೆದರಿರುವ ಬಗ್ಗೆ ಹೇಳಿದ್ದಾನೆ. ಪರೀಕ್ಷೆಗೆ ಸರಿಯಾದ ತಯಾರಿ ಮಾಡದೇ ಇರುವುದರಿಂದ ಹೆದರಿ ಮನೆಬಿಟ್ಟು, ನಾಪತ್ತೆಯಾಗಿದ್ದಾನೆ.ಅವನು ಮನೆಯಿಂದ ರೈಲ್ವೆ ಟ್ರ್ಯಾಕ್‌ನಲ್ಲಿ ಅರ್ಕುಳಕ್ಕೆ ಬಂದಿದ್ದ. ಬಳಿಕ ಬೈಕ್ ಹಿಡಿದು ಮಂಗಳೂರಿಗೆ ಬಂದಿದ್ದಾನೆ” ಎಂದು ಎಸ್ ಪಿ ಯತೀಶ್ ತನಿಖೆಯ ನಂತರ ತಿಳಿದು ಬಂದ ಎಲ್ಲ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
ಮಂಗಳೂರಿಗೆ ಬಂದ ಬಳಿಕ ಅಲ್ಲಿಂದ ಬಸ್ಸಿನಲ್ಲಿ ಶಿವಮೊಗ್ಗ ಹೋಗಿ ಅಲ್ಲಿಂದ ಮೈಸೂರು ಹೋಗಿದ್ದಾನೆ. ಬಳಿಕ ಬೆಂಗಳೂರಿನ ಕೆಂಗೇರಿಗೆ ಹೋಗಿ ರೆಸಾರ್ಟ್‌ವೊಂದರಲ್ಲಿ ಕೆಲಸ ಮಾಡಿದ್ದಾನೆ. ಬಳಿಕ ಬೆಂಗಳೂರು ತಿರುಗಿ ಮತ್ತೆ ಮೈಸೂರು ಬಂದು ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ. ಉಡುಪಿಯಲ್ಲಿ ಬಟ್ಟೆ ತೆಗೆದುಕೊಳ್ಳಲು ಡಿ ಮಾರ್ಟ್ ಮಳಿಗೆಗೆ ಹೋಗಿದ್ದ. ಅಲ್ಲಿ ದುಡ್ಡು ಕೊಡದೇ ಎಸ್ಕೇಪ್ ಆಗುವ ವೇಳೆ ಸಿಬ್ಬಂದಿ ಕೈಗೆ ತಗಲಾಕಿಕೊಂಡಿದ್ದಾನೆ” ಎಂದು ತಿಳಿಸಿದರು.
“ಮನೆಯಿಂದ ಹೋಗುವಾಗ 500 ರೂ ತೆಗೆದುಕೊಂಡು ಹೋಗಿದ್ದಾನೆ. ಆ ಬಳಿಕ ಕೆಲವು ಕಡೆ ಟಿಕೆಟ್ ಕೊಡದೇ ಪ್ರಯಾಣ ಮಾಡಿದ್ದಾನೆ. ಅವನ ಪಾದದಲ್ಲಿ ಗಾಯ ಆಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಅಂತ ಅವನೇ ಹೇಳಿದ್ದಾನೆ. ಅವನನ್ನ ಯಾರೂ ಎತ್ತಿಕೊಂಡು ಹೋಗಿರಲಿಲ್ಲ,ಅವನೇ ಹೋಗಿದ್ದ. 11 ದಿನಗಳ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ” ಎಂದು ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾಹಿತಿ ನೀಡಿದ್ದಾರೆ.
“ದಿಗಂತ್ ಕಲಿಯೋದರಲ್ಲಿ ಹುಷಾರಿದ್ದ. ಕೆಲ ದಿನಗಳಿಂದ ಸ್ವಲ್ಪ ಡಲ್ ಇದ್ದ. ಹತ್ತನೇ ತರಗತಿಯಲ್ಲಿ 80% ಅಂಕ ಗಳಿಸಿದ್ದ” ಎಂದಿರುವ ಎಸ್ ಪಿ, “ಸದ್ಯ ಹೈಕೋರ್ಟ್ ಹೆಬಿಯಸ್ ಕಾರ್ಪಸ್ ದಾಖಲಾಗಿರುವ ಕಾರಣ ಹೈಕೋರ್ಟಿಗೆ ಸೋಮವಾರ ಹಾಜರುಪಡಿಸಲಾಗುವುದು. ಸದ್ಯ ವಿದ್ಯಾರ್ಥಿ ದಿಗಂತ್‌ನನ್ನು ಬೊಂದೇಲ್‌ನಲ್ಲಿರುವ ಬಾಲ ಮಂದಿರದಲ್ಲಿ ಇರಿಸಿದ್ದೇವೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ವಿವರಿಸುವ ಮೂಲಕ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ.
