ಪಾಳು ಬಿದ್ದಿದ್ದ ಕಟ್ಟಡ ಕುಸಿತದಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಹಣ್ಣು ಖರೀದಿಗೆ ಬಂದಿದ್ದ ನಜೀರ್ ಹಾಗೂ ಅಮರನಾಥ್ ಮೃತರು ಎಂದು ತಿಳಿದುಬಂದಿದೆ. ಇನ್ನು ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಬೇಲೂರು ಬಸ್ ನಿಲ್ದಾಣದ ಮುಂಭಾಗದಲ್ಲಿದ್ದ ಸತ್ಯನಾರಾಯಣ ಎಂಬುವರಿಗೆ ಸೇರಿದ ಎಂಟು ಮಳಿಗೆಗಳನ್ನೊಳಗೊಂಡ ಹಳೆಯ ಕಟ್ಟಡ ಇದಾಗಿದ್ದು, ಇದರಲ್ಲಿ ವ್ಯಾಪಾರ ನಡೆಯುತ್ತಿತ್ತು. ಹೀಗಾಗಿ ನಜೀರ್ ಹಾಗೂ ಅಮರನಾಥ್ ಹಣ್ಣು ಖರೀದಿ ಮಾಡಲು ಬಂದಿದ್ದರು. ಈ ವೇಳೆ ಕಟ್ಟಡದ ಸಬ್ಜಾ ಕುಸಿದುಬಿದ್ದಿದೆ. ಇನ್ನು ಘಟನೆಯಲ್ಲಿ ಇಬ್ಬರು ಮಹಿಳಾ ವ್ಯಾಪಾರಿಗಳ ಸ್ಥಿತಿ ಗಂಭೀರವಾಗಿದೆ, ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಲಾರಿ-ಕಾರು ನಡುವೆ ಭೀಕರ ಅಪಘಾತ; ಬಿಎಂಟಿಸಿ ನಿವೃತ್ತ ನೌಕರ ಸೇರಿ ಐವರ ಸಾವು
ಕಟ್ಟಡದ ಅವಶೇಷದಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೇಲೂರು ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
