“ನೊಂದ ಜೀವಂ ತಣ್ಣಗಾಯ್ತು…”: ‘ಹಾಡುಪಾಡು’ ರಾಮು ಕುರಿತು ಎಚ್‌ಎಸ್‌ಆರ್ ಬರೆಹ

Date:

Advertisements

ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರರಾಗಿ, ಜನಪರವಾದ ಪತ್ರಕರ್ತರಾಗಿ, ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ‍ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ ಬದುಕಿದ ತಮ್ಮ ಗೆಳೆಯ ‘ಹಾಡುಪಾಡು’ ರಾಮು ಅವರ ಬಗ್ಗೆ ಲೇಖಕ ಎಚ್ ಎಸ್‌ ರಾಘವೇಂದ್ರರಾವ್ ಬರೆಹ..

ಈ ರಾಮು ಬಗ್ಗೆ ಏನು ಬರೆಯುವುದು? ಹೀಗೆ ಬರೆಯುತ್ತಿರುವೆನೆಂದು ಗೊತ್ತಾದರೆ, “ದಮ್ಮಯ್ಯ ಅಂತೀನಿ. ಬೇಡ ಸಾರ್” ಎಂದು ಕಾಲು ಹಿಡಿಯುವವರು ಅವರು. ಈಗ ಅವರು ಇಲ್ಲ, ನನ್ನಂತಹವರು ಬರೆಯಬಹುದು. ಅವರ ಕ್ಷಮೆ ಕೇಳಿ ಈ ಬರೆಹ.

ಸಕಲ ಜೀವಾತ್ಮರನ್ನೂ ಎದೆಯೊಳಗಿಟ್ಟುಕೊಂಡು ಪೊರೆಯುತ್ತಿದ್ದ ಈ ಗೆಳೆಯನ ಕವಿತೆ ಮತ್ತು ಜೀವನ ಎರಡರ ಮೂಲಸೆಲೆಯೂ ಒಂದೇ. ಆದು ಎಂದಿಗೂ ಬತ್ತದ ಪ್ರೀತಿಯ ಒರತೆ. ಅವರ ಜೀವನದ ಹಲವು ಹಂತಗಳನ್ನು ಒಟ್ಟಂದದಲ್ಲಿ ನೋಡುವ, ಇಂಥ ಬರೆಹದ ಪುಟ್ಟ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ನನ್ನದು.

Advertisements

ಇವರು ತೀವ್ರಗಾಮಿಯಾದ ಎಡಪಂಥೀಯ ಹೋರಾಟಗಾರನಾಗಿ, ಜನಪರವಾದ, ಜನರನ್ನು ತಲುಪಿದ ಪತ್ರಕರ್ತನಾಗಿ, (ಮೈಸೂರಿನ ‘ಆಂದೋಲನ’ ಪತ್ರಿಕೆಯ ‘ಹಾಡು-ಪಾಡು’ ಪುರವಣಿಯಲ್ಲಿ) ಕನ್ನಡ ಮತ್ತು ಬೇರೆ ಹಲವು ಭಾಷೆಗಳ ಮತ್ತು ಎಲ್ಲ ಕಾಲದ ಕವಿತೆಗಳ ಲಯವಿನ್ಯಾಸಗಳನ್ನು ಒಳಗು ಮಾಡಿಕೊಂಡು, ವಿಶಿಷ್ಠ ‍ಶೈಲಿಯನ್ನು ಕಟ್ಟಿಕೊಂಡು ತನ್ನದೇ ಆದ ಲೋಕದರ್ಶನವಿದ್ದ ಕವಿಯಾಗಿ, ಎಳೆಯ ಕವಿಗಳ ಕಿವಿಯಾಗಿ, ನೋವು ತುಂಬಿದ ಬಾಣ-ಹಾಸಿಗೆಯಲ್ಲಿ ಮಲಗಿದ್ದರೂ “ಶುಭ ನುಡಿವ” ಶಕುನದ ಹಕ್ಕಿಯಾಗಿ ‘ತುಂತುಂಬಿ’ ಬದುಕಿದರು. ‘ಅಗ್ನಿಸೂಕ್ತ’, ‘ರಾಮು ಕವಿತೆಗಳು’ ಮತ್ತು ‘ವಿಷ್ಣುಕ್ರಾಂತಿ’ ಇವು ಇವರ ಅನುಮತಿಯಿಲ್ಲದೆ ಅಥವಾ ಇವರಿಂದ ಬೈಸಿಕೊಂಡು ಗೆಳೆಯರು ಹೊರತಂದ ಸಂಕಲನಗಳು. ‘ಅವು ಅಗ್ನಿಗೇ ಸೂಕ್ತ ಸಾರ್’ ಎಂದು ಅವರೇ ಜೋಕ್ ಮಾಡುತ್ತಿದ್ದರು. ಅವರು ಇಷ್ಟು ಕಡಿಮೆ ಬರೆದರೂ ಕನ್ನಡದ ಬಹಳ ಒಳ್ಳೆಯ ಕವಿಗಳಲ್ಲಿ ಒಬ್ಬರೆಂದು ನಾನು ಪ್ರಾಣವನ್ನೇ ಪಣವಾಗಿಟ್ಟು ಹೇಳಬಲ್ಲೆ. ಕವಿತೆಗೆ ಬೇಕಾದ ಸಾಮಗ್ರಿಗಳು ಅವರಲ್ಲಿ ಇಡಿಕಿರಿದಿದ್ದ ಬಗೆ ಒಂದು ವಿಸ್ಮಯ. ‘ವಿಷ್ಣುಕ್ರಾಂತಿ’, ‘ಬೀಬಿ ನಾಚ್ಚಿಯಾರ್’, ‘ಅಮ್ಮು-ವಂಕಿ’ಳಂತಹ ನೀಳ್ಗವನಗಳು, ‘ಮಳೆ’, ‘ಅವನು-ಅವಳು’, ‘ಸುಗ್ಗಿ’, ‘ಅವಳು’ ಮುಂತಾದ ನೀಳ್ಗವನಗಳು ಮತ್ತು ಹತ್ತು ಹಲವು ಭಾವನಿಬಿಡವಾದ ಸಂಕೀರ್ಣ ಕವಿತೆಗಳು ಈ ಮಾತಿಗೆ ಸಾಕ್ಷಿ. ಇವುಗಳಿಂದ ಬಿಡಿ ಸಾಲುಗಳನ್ನು ತೆಗೆದು ಕೊಡುವುದು ಅಂತಹ ಕವಿತೆಗೆ ಮಾಢುವ ಅವಮಾನ. ನಾನು ಒಂದೋ ಎರಡೋ ಕವಿತೆಗಳನ್ನು ಇಡಿಯಾಗಿ ಕೊಡುತ್ತೇನೆ. ದಯವಿಟ್ಟು ಅವರ ಕವಿತೆಗಳನ್ನು ಓದಿ.

ಈ ಸುದ್ದಿ ಓದಿದ್ದೀರಾ: ಮತ್ತೆ ಬಿತ್ತದಿರಿ ಜಾತಿಯ ವಿಷಬೀಜ; ಜಾತ್ಯತೀತತೆಯ ಹೊಲದಲ್ಲಿ ಈಗಷ್ಟೇ ಸಮಾನತೆಯ ಪೈರು ಫಲ ಬಿಡುತ್ತಿದೆ…

ಸೃಜನಶೀಲತೆಯಂತೆಯೇ ಇವರ ವಿಮರ್ಶನ ಶಕ್ತಿಯೂ ಹರಿತವಾದುದು. ಬರವಣಿಗೆಯ ಹೃದಯವನ್ನು ಗುರುತಿಸುವ, ಅದರ ಕೊರತೆಗಳನ್ನೂ ಗ್ರಹಿಸುವ ಶಕ್ತಿ ಅವರಿಗ ಇತ್ತು. ಅವರು ‘ಐಕಾನು’ಗಳಿಗೆ ಮರುಳಾಗದೆ ದಿಟವನ್ನು ಅರಸುತ್ತಿದ್ದರು. ‘ಕುಮಾರವ್ಯಾಸ ಭಾರತ’ ಮತ್ತು ‘ಆದಿಪುರಾಣ’ಗಳನ್ನು ಕುರಿತು ಬರೆದ ಲೇಖನಗಳು ಮತ್ತು ತೋಂಡಿಯಲ್ಲಿ ಹಂಚಿಕೊಂಡ ಅನಿಸಿಕೆಗಳು ಈ ಮಾತಿಗೆ ಸಾಕ್ಷಿ. ಹಾಗೆ ನೋಡಿದರೆ ಅವರು ಕಿ.ರಂ. ನಾಗರಾಜ ಅವರ ಫಿರ್ಕಾಗೆ ಸೇರಿದವರು. ಆದರೆ ಅವರಂತೆ ನಾಡು ತಿರುಗಿ ಭಾಷಣಗಳನ್ನೂ ಮಾಡಲಿಲ್ಲ.

ತಮ್ಮ ಆಸುಪಾಸಿನಲ್ಲಿ ಬಂದವರನ್ನು ಅವರು ಬೆಳೆಸಿದ ಬಗೆ ಅನುಪಮವಾದುದು. ಕೇವಲ ಸಾಹಿತ್ಯವಲ್ಲ, ಅದು ಲೋಕಶಿಕ್ಷಣ. ಈ ಮಾತಿಗೆ ಮೈಸೂರಿನ ಕುಕ್ಕರಹಳ್ಳಿಯ, ಅಷ್ಟೇ ಏಕೆ, ಇಡೀ ಕರ್ನಾಟಕದ ಹತ್ತು ಹಲವು ಗಂಡು ಹೆಣ್ಣು ಜೀವಗಳು ಸಾಕ್ಷಿ.

ದೇಹದೇಗುಲದ ಬಗ್ಗೆ ಒಂದಿನಿತು ಲಕ್ಷ್ಯ ಕೊಟ್ಟಿದ್ದರೆ, ಸ್ವಾವಲಂಬನೆ-ಪರಾವಲಂಬನೆಗಳ ದ್ವಂದ್ವದ ಒಳಗುದಿ ನರಳಿಸದಿದ್ದರೆ ಈ ಬಾಳು ಇನ್ನಷ್ಟು ಮುಂದುವರೆಯುತ್ತಿತ್ತೇನೋ. ನಮ್ಮೆಲ್ಲರಿಗಾಗಿ, ಇವರನ್ನು ಇಷ್ಟು ಕಾಲ ಕಾಪಾಡಿಕೊಂಡ ರಾಮು ಅವರ ತಾಯಿ ಸುಶೀಲಮ್ಮನವರು, ರಾಜಿ, ಕುಮುದ, ವೇಣು, ಶೈಲಜ, ತುಕಾರಾಮ್, ರಾಘವೇಂದ್ರ, ಸಚ್ಚಿ, ಸ್ನೇಹ, ಓಂಕಾರ್, ಓ.ಎಲ್ ಎನ್, ದೂರವಿದ್ದರೂ ಅವರಿಗೆ ತುಂಬ ಹತ್ತಿರವಿದ್ದ ಆತ್ಮೀಯ ಜೀವಗಳು ಎಲ್ಲರಿಗೂ ಕೈಯೆತ್ತಿ ಮುಗಿಯುತ್ತೇನೆ.

‘ರಾಮು ಯೂನಿವರ್ಸಿಟಿ’ ಮುಗಿಯದಿರಲಿ. ಅದು ನಮ್ಮಲ್ಲಿ ನಿಮ್ಮಲ್ಲಿ ಉಳಿಯಲಿ, ಬೆಳೆಯಲಿ.

ರಾಮು

ರಾಮು ಅವರ ಒಂದು ಕವನ

ಮಳೆ
ಬಂತು ಮಳೆ ಆಹ
ಮುಳ್ಳುಬೇಲಿಯಲ್ಲೂ ಹಾಡು ಉಕ್ಕಿ ಉಕ್ಕಿ.
ಅದೋ ಮಳೆ ಅಲ್ಲಿ, ಓ ಇಲ್ಲಿ, ಎಲ್ಲೆಲ್ಲು –
ನನ್ನ ಹುಡುಗಿಯ ಕೆನ್ನೆಗುಳಿ ಮೇಲು, ಈ ಹಾಡ ಮೇಲು.
ಆ ದಿಕ್ಕು ಈ ಗಾಳಿ ಆ ಬಾನು ಎಲ್ಲದರೊಳಗೆ ತಲ್ಲೀನ.

ಹದಿಹರೆಯ ನೆಲಗನ್ನೆ ಮೀಯುವುದ ಕದ್ದು ಇಣುಕುತಿರೊ ಖುಷಿಗಾರ
ಲೋಕ.

ನಾದ ಅಲ್ಲ ಇದು ಗುಡುಗು ಆದರೂ ಹಾಡೆ.
ಆ ಮರಳ ತೊಡೆಯೇರಿ ಇಳಿದಾಡೊ ತೊರೆ.

ಆ ತೊರೆಯ ಕಂಡು ಜಾರುವ ಮರಳು
ಎಲ್ಲ ದೇವರು ಈಗ, ಕಂಡದ್ದೆಲ್ಲ ಮೂರ್ತಿ –
ಈ ಮಂದ ಬೆಳಕಲ್ಲಿ ಅನಿಸಿದ್ದೆಲ್ಲ ಮಂತ್ರ –
ನನ್ನ ಹಸುವಿಗೆ ಮೇವು ಇಕ್ಕಿ ನಾನಿಗೆ ಮುತ್ತು
ನೆನೆದ ನಾಯಿಗೆ ಹಸುಬೆ ಎಲ್ಲ ನೈವೇದ್ಯ.

ಮುಳ್ಳು ಮುಳ್ಳಿಗೆ ಹೂವು ಎಲ್ಲೆಲ್ಲು ಅವತಾರ
ಈ ಕಾಫಿ ಬಟ್ಟಲೊಳಗೆ, ಈ ರೊಟ್ಟಿ ತುಂಡೊಳಗೆ
ಅವನ ಅಂಬಲಿಯೊಳಗೆ,
ಈ ಚಿಟುಕೆ ನಶ್ಯದೊಳಗು

ತುದಿಯಲ್ಲಿ ಚಿಗುರಿ ಒಣ ಚೆಕ್ಕೆ ಸುಕ್ಕುಗಳ ಮೈಯ ಬಿಟಕೊಂಡು
ತೊಯ್ದು ಪಟ ಪಟ ನಿಂತ ಈ ಮರದ ವಾಸನೆಯಂಥ ವಾಸನೆಯ
ಜೀವಂತ ದೇವರು ಬಂತು, ಇದೊ ಹಿಡಕೊ ಮುಟ್ಟು.
ಯಾವುದೋ ನಿಸ್ಸೀಮ ದೀಪದ ಕುಡಿಯ ನೆಟ್ಟ ಹಾಗೆ
ನೆನ್ನೆ ಬೋಳುಬೋಳಾಗಿದ್ದ
ಮರದಿಂದ ಇವತ್ತು ಥರಾವರಿ ಚಿಗುರು ಕಣ್ಣು

ಈ ಮಳೆದನಿಯಲ್ಲಿ ಹೊಳೆದನಿ ಮಲಗಿ, ಹೊಳೆದಡದ ಬಳೆದನಿ ಮಲಗಿ
ಖುಷಿಯ ಕಣ್ಣೀರಲ್ಲಿ ಪಿಸುಮಾತು ಸ್ವಪ್ನ ದನಿ ಮಲಗಿ
ಮಳೆಬೆರಳಲ್ಲಿ ರೋಮಾಂಚತಂತಿಯ ಮೀಟಿ ದೇವಜಾತಿ

ಎಂಥ ಲಯವಿನ್ಯಾಸ ಅಮೃತ ಗಾನ

ನಾಳೆ ತರಗಾಗೊ ನಿನ್ನೆಯ ಚಿಗುರೆ,
ತರಗಾಗಿ
ಮತ್ತೆ ಚಿಗುರಾಗಿ ಬಿದ್ದೆದ್ದು
ಜನ್ಮಗಳ ಹರಿಸುತಿಹ ಮಳೆಯೆಂಬ ಹೊಳೆಯೇ

ಈ ಚಿಗುರ ಮುಟ್ಟುತಲೆ, ನಾಳಿನ ತರಗ ಮುಟ್ಟಿದ ಹಾಗೆ ಎನಿಸಿಬಿಟ್ಟರೆ ನನಗೆ!
ಹಾಗಾಗದಿರಲಿ
ನಿನ್ನ ತೆರೆ ನಿನ ಹಕ್ಕಿ ನಿನ ಚಿಗುರು
ನನ್ನ ಅಂಗೈಯೊಳಗೆ ಕುಣಿದಾಡಲಿ
ಕುಣಿಕುಣಿದು ಉದಿರಾಡಲಿ.

ಇದೊ
ಇನ್ನೊಂದು ಹನಿ ಬಿತ್ತು
ಈ ಬೀಜ ಕಣ್ತೆರೆದು
ಚಿಗುರಾಡಲಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X