“ನಾನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಿಂದ ಸದ್ಯಕ್ಕಂತೂ ನಿವೃತ್ತಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ವದಂತಿಗಳು ಹರಡದಿರಲು ಈ ಮಾತನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ”…. ಈ ರೀತಿಯ ಹೇಳಿಕೆ ನೀಡಿದ್ದು ಟೀಮ್ ಇಂಡಿಯಾ ನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಹೌದು. ಈ ರೀತಿಯ ಸ್ಪಷ್ಟವಾದ ಹೇಳಿಕೆಯನ್ನು ಬಹಿರಂಗವಾಗಿಯೇ ಹೇಳುವ ಮೂಲಕ ತಮ್ಮ ನಿವೃತ್ತಿ ವದಂತಿಗಳಿಗೆ ನಾಯಕ ತೆರೆ ಎಳೆದಿದ್ದಾರೆ.
ದುಬೈಯ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ 4 ವಿಕೆಟ್‌ಗಳ ಅಂತರದಿಂದ ಸೋಲಿಸಿ, ಚಾಂಪಿಯನ್ ಪಟ್ಟ ಅಲಂಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಸುದ್ದಿಗೋಷ್ಠಿಯ ಮುಗಿಸುವುದಕ್ಕೂ ಮುನ್ನ ಈ ರೀತಿಯ ಹೇಳಿಕೆ ನೀಡಿದ್ದಾರೆ.
ROHIT SHARMA DROPS BANGER. 🎤
— Mufaddal Vohra (@mufaddal_vohra) March 9, 2025
– 2027 World Cup in South Africa.🤞🇮🇳 pic.twitter.com/SKPGbIOeQg
ತಮ್ಮ ಕುರ್ಚಿಯಿಂದ ಏಳುವುದಕ್ಕೂ ಮುನ್ನ, “ಇನ್ನೊಂದು ವಿಷಯ. ನಾನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಪಡೆಯುತ್ತಿಲ್ಲ. ಮುಂದೆ ಯಾವುದೇ ವದಂತಿಗಳು ಹರಡಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಹೇಳುತ್ತಿದ್ದೇನೆ. ಧನ್ಯವಾದಗಳು” ಎಂದು ರೋಹಿತ್ ಹೇಳಿದರು.
ಹಿಟ್‌ಮ್ಯಾನ್ ನಿರ್ಧಾರವು ಆಘಾತಕಾರಿ ಅಂತೂ ಅಲ್ಲ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವು ಸಕ್ರಿಯ ಭಾರತೀಯ ಕ್ರಿಕೆಟಿಗನಾಗಿ ರೋಹಿತ್ ಅವರ ಕೊನೆಯ ಪಂದ್ಯ ಎಂಬ ವದಂತಿಗಳು ಹರಡಿತ್ತು. ಆದರೂ, 38 ವರ್ಷದ ಆಟಗಾರನ ಫಿಟ್‌ನೆಸ್, ಫಾರ್ಮ್ ನೋಡಿದರೆ ಅವರ ನಿವೃತ್ತಿಗೆ ಇನ್ನೂ ಸ್ವಲ್ಪ ಸಮಯವಿದೆ ಎಂಬುವುದು ಸ್ಪಷ್ಟವಾಗಿದೆ.

ಇತ್ತೀಚೆಗೆ ಅಂತ್ಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ, ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುಂಚಿತವಾಗಿ ರೋಹಿತ್ ಆಡುವ ಬಳಗದಿಂದ ಹೊರಗುಳಿದಾಗ ನಿವೃತ್ತಿ ವದಂತಿ ಸೋಷಿಯಲ್ ಮೀಡಿಯಾಗಳಲ್ಲಿ ಹರಡಿತ್ತು. ಬಾಕ್ಸಿಂಗ್ ಡೇ ಟೆಸ್ಟ್ ಮುಗಿದ ಬಳಿಕ ರೋಹಿತ್ ನಿವೃತ್ತಿ ಘೋಷಿಸುತ್ತಾರೆ ಎಂದು ವರದಿಯಾಗಿತ್ತು. ಆದರೆ, ರೋಹಿತ್ ತಾನು ಟೀಮ್ ಇಂಡಿಯಾಕ್ಕಾಗಿ ಆಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಸದ್ಯ ತಾನು ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರೆಸುವುದಾಗಿ ರೋಹಿತ್ ಪ್ರತಿಜ್ಞೆ ಮಾಡಿದ್ದರೂ, ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಏಕೆಂದರೆ ಟೂರ್ನಿಗೆ ಇನ್ನೂ ಎರಡು ವರ್ಷಗಳಿವೆ. ಹಾಗಾಗಿ, ಈ ನಡುವೆ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಅವರು ಈ ಹಿಂದೆ ಎಂಎಸ್ ಧೋನಿ ಮಾಡಿದ ಸಾಧನೆಯನ್ನು ಮಾಡಿದ್ದಾರೆ. ಒಂದಕ್ಕಿಂತ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ಭಾರತವನ್ನು ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಮುನ್ನಡೆಸಿದ್ದಾರೆ.
ಒಂದು ವೇಳೆ 2023ರ ನವೆಂಬರ್ 19ರಂದು ಆಸ್ಟ್ರೇಲಿಯಾ ವಿರುದ್ಧ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ಗೆಲ್ಲುತ್ತಿದ್ದರೆ ವಿಶ್ವ ಅದು ದಾಖಲೆಯಾಗುತ್ತಿತ್ತು. ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಎಲ್ಲಾ ಮೂರು ಪ್ರಮುಖ ಐಸಿಸಿ ಪ್ರಶಸ್ತಿಗಳನ್ನು ಗೆದ್ದ ದಾಖಲೆ ರೋಹಿತ್ ಹೆಸರಿನಲ್ಲಿ ದಾಖಲಾಗುತ್ತಿತ್ತು.
