ಮದುವೆಯಾದ ಕೆಲವೇ ಗಂಟೆಗಳಲ್ಲಿ ಪತ್ನಿಯನ್ನು ಕೊಂದು ನವವಿವಾಹಿತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಯೋಧ್ಯೆ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ಪ್ರದೀಪ್ ಎಂಬಾತ ಶಿವಾಣಿ ಎಂಬ ಯುವತಿಯನ್ನು ಶನಿವಾರ ವಿವಾಹವಾಗಿದ್ದಾನೆ. ವಿವಾಹ ಸಮಾರಂಭ ಮುಗಿದ ಬಳಿಕವೇ ಇಬ್ಬರೂ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಒಂದೇ ಹಗ್ಗಕ್ಕೆ ಕೊರಳೊಡ್ಡಿ ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ!
ಶನಿವಾರ ಮದುವೆ ಸಮಾರಂಭ ಮುಗಿದ ಬಳಿಕ ಎಲ್ಲರೂ ಮಧ್ಯಾಹ್ನದ ವೇಳೆಗೆ ವರನ ಮನೆಗೆ ಆಗಮಿಸಿದ್ದರು. ಮನೆಯಲ್ಲಿ ಕೆಲವು ಶಾಸ್ತ್ರಗಳನ್ನು ನಡೆಸಲಾಗಿದೆ. ಎಲ್ಲಾ ಶಾಸ್ತ್ರಗಳು ಮುಗಿದ ಬಳಿಕ ವಧು ಮತ್ತು ವರ ಶನಿವಾರ ರಾತ್ರಿ ಅವರ ಕೋಣೆಗೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ರಾಜ್ ಕರಣ್ ನಯ್ಯಾರ್, “ಭಾನುವಾರ ಬೆಳಿಗ್ಗೆ ಎಷ್ಟು ಬಾಗಿಲು ತಟ್ಟಿದರೂ ದಂಪತಿ ಬಾಗಿಲು ತೆರೆದಿಲ್ಲ. ಆದ್ದರಿಂದ ಕುಟುಂಬಸ್ಥರು ಬಾಗಿಲು ಒಡೆದಿದ್ದಾರೆ. ಈ ವೇಳೆ ಶಿವಾಣಿ ಮೃತದೇಹ ಹಾಸಿಗೆಯಲ್ಲಿ ಕಂಡುಬಂದಿದೆ. ಪ್ರದೀಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ” ಎಂದು ತಿಳಿಸಿದ್ದಾರೆ.
ಕೋಣೆಯ ಬಾಗಿಲಿನ ಚಿಲಕವನ್ನು ಒಳಭಾಗದಿಂದಲೇ ಹಾಕಲಾಗಿತ್ತು. ಆದ್ದರಿಂದ ಪ್ರಾಥಮಿಕ ತನಿಖೆಯಲ್ಲಿ ವರ ವಧುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
