ಹಿಂದೂ ಸಿದ್ಧಾಂತವಾದಿ ವಿ ಡಿ ಸಾವರ್ಕರ್ ಅವರ ಕುರಿತಾದ ಅಧ್ಯಾಯಗಳನ್ನು ಶಾಲಾ ಪಠ್ಯಪುಸ್ತಕಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಕೈಬಿಟ್ಟುರುವುದಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʻಶಾಲಾ ಪಠ್ಯಕ್ರಮದಿಂದ ಆರ್‌ಎಸ್‌ಎಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಮತ್ತು ವಿ ಡಿ ಸಾವರ್ಕರ್ ಪಠ್ಯಗಳನ್ನು ತೆಗೆದುಹಾಕಿರುವುದು ದುರದೃಷ್ಟಕರ. ಇದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲʼ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ಧಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ, ʻಹಿಂದುತ್ವ ಸಿದ್ಧಾಂತವಾದಿ ಸಾವರ್ಕರ್ ಸಮಾಜ ಸುಧಾರಕ ಮತ್ತು ದೇಶಭಕ್ತರಾಗಿದ್ದರು. ಅವರು ನಮಗೆ ಮಾದರಿಯಾಗಿದ್ದಾರೆ. ದೇಶಕ್ಕಾಗಿ ಎಲ್ಲವನ್ನೂ ನೀಡಿದ ವ್ಯಕ್ತಿಯನ್ನು ಅವಮಾನಿಸಲಾಗುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ತಿರುಗೇಟು
ಗಡ್ಕರಿ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್, ʻತನ್ನನ್ನು ಇಷ್ಟಪಡದ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಆರ್‌ಎಸ್‌ಎಸ್ ಅನ್ನು ಮೆಚ್ಚಿಸಲು ನಿತಿನ್ ಗಡ್ಕರಿ ಪ್ರಯತ್ನಿಸುತ್ತಿದ್ದಾರೆ’ ಎಂದು ಹೇಳಿದೆ.
“ಭಾರತ ಮತ್ತು ಕರ್ನಾಟಕದ ವಿದ್ಯಾರ್ಥಿಗಳು ಕೆ ಬಿ ಹೆಡ್ಗೆವಾರ್ ಮತ್ತು ಸಾವರ್ಕರ್ ಅವರ ಸಿದ್ಧಾಂತದ ಕುರಿತು ಅಧ್ಯಯನ ಮಾಡುವುದರ ಬದಲು ಬಿ ಆರ್ ಅಂಬೇಡ್ಕರ್, ಜವಾಹರಲಾಲ್ ನೆಹರು ಹಾಗೂ ಮಹಾತ್ಮ ಗಾಂಧಿಯವರ ಸಿದ್ಧಾಂತದ ಬಗ್ಗೆ ಅಧ್ಯಯನ ಮಾಡಬೇಕುʼ ಎಂಬುದು ನಮ್ಮ ಆಶಯ” ಎಂದು ಕಾಂಗ್ರೆಸ್ ನಾಯಕ ಗೌರವ್ ವಲ್ಲಭ್, ಎಎನ್‌ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಈ ಶೈಕ್ಷಣಿಕ ವರ್ಷಕ್ಕೆ ರಾಜ್ಯದಲ್ಲಿ 6 ರಿಂದ 10 ನೇ ತರಗತಿಯ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಕುರಿತು ಆದೇಶ ಹೊರಡಿಸಿದೆ. ಆರ್‌ಎಸ್‌ಎಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಮತ್ತು ವಿ ಡಿ ಸಾವರ್ಕರ್ ಸೇರಿದಂತೆ ಕನ್ನಡ, ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ವಿಷಯಗಳ ಬದಲಾವಣೆ ಮಾಡಲಾಗಿದ್ದು, ಪಠ್ಯದಿಂದ ಕೈ ಬಿಡುವ ಪಾಠಗಳ ಬಗ್ಗೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗಿದೆ.