ಸಾಬರ ದೇಸಿ ಆರ್ಥಿಕ ಚಿಂತನೆಗಳು ಇರುವುದರಿಂದಲೇ ಹಳ್ಳಿಗರ ಬದುಕಿಗೆ ಮರ್ಯಾದೆ ಬಂದಿರೋದು. ಕಾಲ್ದಾರಿಗಳಲ್ಲಿ ಸೈಕಲ್ ತಳ್ಳಿಕೊಂಡು ಬರುವ ವಯೋವೃದ್ಧ ಸಾಬರು ವ್ಯಾಪಾರಿಗಳ ಬದುಕು ಸುಧಾರಣೆ ಕಾಣದಿದ್ದರೂ, ಅವರು ವ್ಯಾಪಾರ ಬಿಟ್ಟಿಲ್ಲ. ಕೃಷಿ ಸಂಪನ್ಮೂಲಗಳನ್ನು ಮಾರುಕಟ್ಟೆಗಳಿಗೆ ದಿನವೂ ಹೊರುವ ಇವರನ್ನು ಕೃಷಿ ಮಿತ್ರರೆಂದು ಯಾವ ಸರ್ಕಾರವೂ ಪರಿಗಣಿಸಿಲ್ಲ.
ಕೇಂದ್ರ ಸರ್ಕಾರ ಮಾಡುತ್ತೋ, ಬಿಡುತ್ತೋ, ಕರ್ನಾಟಕ ರಾಜ್ಯ ಸರ್ಕಾರ ಮಾಡಬೇಕಾದ್ದು ಸಾಬರ ಬಜೆಟ್ಟೇ. ಸಾಬರು ಪಾಲ್ಗೊಳ್ಳುವ ಗ್ರಾಮೀಣ ಆರ್ಥಿಕತೆ ಬೆಳವಣಿಗೆಯ ವಿಧಾನಗಳು ಬಹುಮುಖ್ಯವಾಗಿವೆ. ಸಾಬ್ರು ಪರಂಪರೆಯಿಂದಲೂ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸ್ಥಳೀಯ ಉದ್ಯೋಗ ಖಾತರಿ ಬದುಕುಗಳು, ನಾಡಿನ ಆರ್ಥಿಕ ನೀತಿಗಳಾಗಬೇಕಾಗಿವೆ. ಸರ್ಕಾರದ ವಾರ್ಷಿಕ ಆಯ-ವ್ಯಯದ ವ್ಯವಸ್ಥೆಗೆ ಕೃಷಿ ಮತ್ತು ಪರಿಸರ ಸ್ನೇಹಿ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿರುವವರು ನಮ್ಮ ಸಾಬರುಗಳೇ.
ಹುಣಸೇ ಹಣ್ಣಿನಿಂದ ಹಿಡಿದು ಆಡುಕುರಿಯವರೆಗೂ ಕೊಟ್ಟಿಗೆ ದನ, ಗೂಡಿನ ಆಡು, ರೊಪ್ಪದ ಕುರಿ ಎಲ್ಲಾ ಉತ್ಪನ್ನಗಳು ಮತ್ತು ಉತ್ಪಾದನೆಗಳನ್ನು ಮಾರಾಟ ಮಾಡುವ ದೇಸಿ ಮಾರುಕಟ್ಟೆ ವ್ಯವಸ್ಥೆಯನ್ನು ರೂಢಿಗೆ ತಂದವರು ಮತ್ತು ಗ್ರಾಮಗಳ ಆರ್ಥಿಕತೆಗೆ ಚಲನಶೀಲತೆ ತಂದವರು ಸಾಬರು. ಕೊಟ್ಟಿಗೆಗಳಿಂದ ಕಾರ್ಖಾನೆಗಳವರೆಗೂ ಬೇಸಾಯಗಾರರ ವ್ಯಾಪಾರ ಇವರಿಂದ ವೃದ್ಧಿ ಆಯಿತು. ಹಳ್ಳಿ ಮತ್ತು ಪಟ್ಟಣ ಹಾಗೂ ನಗರಗಳ ಆರ್ಥಿಕತೆಯ ಕೊಂಡಿಗೆ ಇವರು ಕಾರಣಕರ್ತರು. ಗ್ರಾಮೀಣ ಮಾರುಕಟ್ಟೆಯನ್ನು ಕಡೆದು ನಿಲ್ಲಿಸಿದದವರು. ಚಿಲ್ಲರೆ ವ್ಯಾಪಾರವನ್ನು ಚಿನ್ನದ ವ್ಯಾಪಾರವನ್ನಾಗಿ ಮಾಡಿ ತೋರಿಸಿದ ಛಲವಂತರು. ರೈತ ಬಿಸಾಡುವ ಯಾವುದನ್ನು ಬಿಡದೆ, ಬೆಲೆ ಕಟ್ಟಿದವರು. ಆದುದರಿಂದ, ಸರ್ಕಾರದ ಬಜೆಟ್‌ಗಿಂತ ಸಾಬರ ಬಜೆಟ್ ಎನ್ನುವದು ಸೂಕ್ತವಾಗಿದೆ.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರಾದ ಸಿದ್ಧರಾಮಯ್ಯನವರು ಮಂಡಿಸಿದ, ಕರ್ನಾಟಕ ರಾಜ್ಯ ಸರ್ಕಾರದ 2025- 26ನೇ ಸಾಲಿನ ಬಜೆಟ್ ಅನ್ನು ಕೆಲವರು ಸಾಬರ ಬಜೆಟ್ ಎನ್ನುವುದನ್ನು ಸಕಾರಾತ್ಮಕವಾಗಿ ನೋಡಿ ಸ್ವಾಗತಿಸುತ್ತೇನೆ.
ನಮ್ಮ ತುಮಕೂರು ಸೀಮೆಯಲ್ಲಿ, ಒಬ್ಬೊಬ್ಬರಿಗೆ ಒಂದೊಂದು ಹೆಸರಿದೆ. ಕಡ್ಡಿಸಿವುಡಿನ ಸಾಬ್ರು, ಹುಣಸೇ ಹಣ್ಣಿನ ಸಾಬ್ರು, ಹೊಂಗೇಹಳ್ಳು, ಬೇವಿನಹಳ್ಳು, ಹಿಪ್ಪೇಹಳ್ಳು ಸಾಬ್ರು, ಎತ್ತಿಗೆ ಸಬ್ರ ಹೊಲೆವ ಸಾಬ್ರು, ಕೋಡಣಸು, ಗರಗ, ಕಾಲ್ಗಜ್ಜೆ, ಕೊರಳಗಂಟೆ, ಗೆರಸಲು ಕಾಯಿ ತಂದುಕೊಡೋ ಸಾಬ್ರು, ಚರ್ಮದ ಸಾಬ್ರು, ಮೀನು ಸಾಬ್ರು, ಸೀಗ್ಡಿ ಸಾಬ್ರು, ಹುಚ್ಚೆಳ್ಳು ಸಾಬ್ರು, ಮಿಷನ್ ಸಾಬ್ರು, ಹೊಲಿಗೆ ಸಾಬ್ರು, ಮಿಠಾಯ್ ಸಾಬ್ರು, ಪಾತ್ರೆ ಸಾಬ್ರು, ಕಡ್ಡಿ ಸಾಬ್ರು…
ನಮ್ಮ ಹೊಲದಲ್ಲಿ ಬೆಳಿಯೋದು, ಕೊಟ್ಗೇಲಿ ಈಯೋದಕ್ಕೆಲ್ಲಾ ಬೆಲೆ ತಂದುಕೊಟ್ಟೋರು, ಮಾರುಕಟ್ಟೆಗೆ ಸರಬರಾಜು ಮಾಡಲು ಅವಕಾಶ ಕಲ್ಪಿಸಿದೋರು ಸಾಬರು. ಆಡು, ಕುರಿ, ದನ, ಎತ್ತು, ಎಮ್ಮೆಗಳ ಮಾಂಸ ಮತ್ತು ಚರ್ಮಕ್ಕೆ ಮೌಲ್ಯವರ್ಧಿತ ಬೆಲೆ ತಂದೋರೆ ಸಾಬರು.
ಇದನ್ನು ಓದಿದ್ದೀರಾ?: ವರ್ಷಕ್ಕೆ 500 ಕೋಟಿಗೂ ಅಧಿಕ ವಹಿವಾಟು | ‘ಬರದ ನಾಡಿನ ಬಂಗಾರ’ ಹುಣಸೆಗೆ ಬಂಪರ್ ಬೆಲೆ!
‘ಎತ್ತಿಗೆ ಲಾಳ ಕಟ್ಟೋ ಸಾಬ್ರು ಇಲ್ದೆ ಇದ್ರೆ ಎಲ್ಲಿತ್ರೀ ನಮ್ಮ ಆರಂಭ. ಅವುಗಳ ಕಾಲಿಗೆ ಆದಿಯಿಂದಲೂ ಲಾಳ ಕಟ್ಟಿದೋರು ನಮ್ಮ ಸಾಬ್ರು. ನೇಗಿಲು, ನೊಗಗಳಿಗೆ ಹೆಗಲು ಕೊಟ್ಟು ಹೊತ್ತು, ಕತ್ತು ಎತ್ತಿ ಬಾರ ಎಳಿಯೋ ರಾಸುಗಳಿಗೆ ಲಾಳ ಇಲ್ದೆ ಹೋಗಿದ್ರೆ ಆರಂಭ ಉಳಿತಿತ್ತಾ? ಅವರ ಈ ಬುದ್ಧಿವಂತಿಕೆಯ ಬದುಕು ಇವತ್ತಿಗೂ ನಮ್ಮ ಆರಂಭದ ಬದುಕನ್ನು ತಲೆ ಎತ್ತಿ ನಡೆಯುವಂತೆ ಮಾಡಿದೆ’ ಎನ್ನುವವರು ಇದ್ದಾರೆ. ಅನ್ನ ಉಂಡು, ಅರಿವೆ ಹೊದಿಯೋರು ಯಾರೂ ಸಾಬ್ರು ಬಜೆಟ್ ಅನ್ನು ಲೇವಡಿ ಮಾಡಲಾರರು. ಸಾಬ್ರು ಬಗ್ಗೆ ಮಾತನಾಡೋ ಇವರಾರೂ ಒಂದು ದಿನ ಮೈ ಬಗ್ಗಿ ಉರಿಬಿಸಿಲಲ್ಲಿ ಒಣಗಿ ಹಣಸೇಮರ ಹತ್ತಿ, ಬಡಿದು, ಕೆಳಗೆಬಿದ್ದ ಹುಣಸೇಹಣ್ಣು ಹಾಯ್ದು, ಹಣ್ಣು ಕೆಚ್ಚಿ ಬೀಜ ತೆಗೆದವರಲ್ಲ. ಬದಲಿಗೆ, ಪೆನ್ನು, ಪೆನ್ಸಿಲ್, ಅಳಸೋ ರಬ್ಬರ್, ಪೆಪ್ಪರ್ ಮೆಂಟಿಗೆ ಹೊಂಗೆಸಾಲು, ತೋಟ್ದ ಸಾಲು, ಬೇಲಿ ಸಾಲುಗಳಲ್ಲಿ ಹುಣಸೆ, ಹೊಂಗೆ, ಬೇವು, ಹಿಪ್ಪೆ ಬೀಜ ಹಾಯ್ದು ಕಾಯ್ದು ಮಾರಿದೋರಿಗೆ ಮಾತ್ರ ಅರ್ಥವಾಗುವಂಥದ್ದು. ಅಂಚಿಕಡ್ಡಿ ಕೊಯ್ಯದವರಿಗೆ, ಮುತ್ತುಗದ ಎಲೆ ಹಚ್ಚದವರಿಗೆ, ದನ-ಕುರಿ ಹಿಂದೆ ತಿರುಗದವರಿಗೆ ಎಂದಿಗೂ ಅರ್ಥವಾಗದು.
ದ್ವೇಷದ ರಾಜಕಾರಣ ಮಾಡುವ ಇವರು ಎಂದಿಗೂ ಹೊಲಗಳಲ್ಲಿ ಕುಕ್ಕರು ಗಾಲಿನಲ್ಲಿ ಮುಂಬಿಡಿದು ಕುಳಿತು ನೆಲ ತೆವಳಿ ಉಸಿರುಕಟ್ಟಿ ಹುಲ್ಲು ಕುಯ್ದೋರೂ ಆಗಿರಲಾರರು. ಇವರದು ರಾಜಕಾರಣದ ತೆವಲಿನ ಮಾತುಗಳೇ ಹೊರತು ನಾಡಿನ ನೈಜ ಆರ್ಥಿಕತೆಯ ಚಿಂತನೆಗಳಲ್ಲ.
ಸಾಬ್ರು ಸೈಕಲ್ ಏರಿ ಹಳ್ಳಿಗಳಿಗೆ ಬರದಿದ್ದರೆ, ಬೆಲೆ ಕಟ್ಟಿ ಖರೀದಿಸದಿದ್ದರೆ, ಹುಣಸೇ ಬೀಜ ಹುಳಹಿಡಿಯುತಿತ್ತು, ಹೊಂಗೇ ಬೀಜ ಬಿದ್ದು ಮಣ್ಣು ಹಿಡಿಯುತಿತ್ತು, ಬೇವಿನ ಬೀಜ ಬೇಲಿ ಒಳಗೇ ಕರಗಿ ಹೋಗಿರುತಿತ್ತು, ಇಪ್ಪೇ ಬೀಜ ಬೇಡವಾಗಿತ್ತು. ಹಳ್ಳಿ ಮೇಲೆ ಬಂದು ಇವುಗಳಿಗೆಲ್ಲಾ ಬೆಲೆ ನಿಗದಿ ಮಾಡಿದವರು ಸಾಬರು ಎನ್ನುವುದನ್ನು ಮರೆಯಲು ಸಾಧ್ಯವೇ? ‘ಉಗುಳ ಬೇಡ ಉಣಸೇ ಬೀಜ ಎತ್ಕೋ ಎಂದು ಹೇಳಿಕೊಟ್ಟ ಸಾಬರ ಆರ್ಥಿಕ ಪಾಠಗಳು ನಮಗೆ ಪೆನ್ನು, ಪುಸ್ತಕ ಒದಗಿಸಿಕೊಟ್ಟಿವೆ’ ಎನ್ನುವ ಮಂದಿ ಈಗಲೂ ಹಳ್ಳಿಗಳಲ್ಲಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಮುಂದೆ ರೂಪಾಯಿ ಕುಸಿಯುತ್ತಿರುವ ಈ ಹೊತ್ತಿಗೂ, ಹಳ್ಳಿಗಳಲ್ಲಿ ಪದಾರ್ಥ ಕೊಟ್ಟು ಪದಾರ್ಥಗಳನ್ನು ಖರೀದಿಸುವ ಕರೆನ್ಸಿ ರಹಿತವಾದ ವಸ್ತು ವಿನಿಮಯ ವ್ಯಾಪಾರ ವಹಿವಾಟನ್ನು ಸಾಬ್ರು ಮುಂದುವರಿಸಿದ್ದಾರೆ. ಪರಂಪರೆಯ ವ್ಯಾಪಾರ ಪದ್ದತಿಯನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ. ಸಾಬ್ರು ಬಜೆಟ್ ಎಂದು ಲೇವಡಿ ಮಾಡುವವರು ಇದನ್ನು ಅವಲೋಕನ ಮಾಡಿ ಮಾತನಾಡಬೇಕಾಗಿದೆ.
ಸಾಬರ ದೇಸಿ ಆರ್ಥಿಕ ಚಿಂತನೆಗಳು ಇರುವುದರಿಂದಲೇ ಹಳ್ಳಿಗರ ಬದುಕಿಗೆ ಮರ್ಯಾದೆ ಬಂದಿರೋದು. ಕಾಲ್ದಾರಿಗಳಲ್ಲಿ ಸೈಕಲ್ ತಳ್ಳಿಕೊಂಡು ಬರುವ ವಯೋವೃದ್ಧ ಸಾಬರು ವ್ಯಾಪಾರಿಗಳ ಬದುಕು ಸುಧಾರಣೆ ಕಾಣದಿದ್ದರೂ, ಅವರು ಕಡ್ಡಿ, ಹುಣಸೆ, ಹೊಂಗೆ, ಹಿಪ್ಪೆ ಬೀಜಗಳ ವ್ಯಾಪಾರ ಬಿಟ್ಟಿಲ್ಲ. ಕೃಷಿ ಮೂಲದಿಂದ ಬಂದು ಅಲಾಕಾಗುತ್ತಿರುವ ಸಂಪನ್ಮೂಲಗಳನ್ನು ಮಾರುಕಟ್ಟೆಗಳಿಗೆ ದಿನವೂ ಹೊರುವ ಇವರನ್ನು ಕೃಷಿ ಮಿತ್ರರೆಂದು ಯಾವ ಸರ್ಕಾರವೂ ಪರಿಗಣಿಸಿಲ್ಲ.
ಬೀಡಿ ಕಟ್ಟುವ ಸಾಬರಿಂದ ತೂಬರೆ ಎಲೆಗಳಿಗೆ ಬೆಲೆ ಬಂತು. ಇಸ್ತ್ರಿ ಎಲೆ ಹಚ್ಚಿದ ಸಾಬರಿಂದಮುತ್ತುಗದ ಎಲೆಗೆ ಬೆಲೆ ತಂದರು. ಬೀಳಂಚಿ ಕಡ್ಡಿ ಕೊಯ್ಲು ಮಾಡ್ಸಿ ಇಡಗಲಿಗೆ ಬೆಲೆ ತಂದರು. ಹಳೇ ಲಾಳದ ಚೂರಿಗೆ ಕಡಲೆ ಮಿಠಾಯಿ, ಮೋಟುಕುಳ ಕೊಟ್ಟರೆ ಮಾಡಿಉಣ್ಣೋ ಪಾತ್ರೆ ಕೊಟ್ಟ ಅವರ ಪಾಲಿಸಿಗಳು ಆರ್ಥಿಕ ನೀತಿಗಳಾಗಬೇಕಾಗಿವೆ.
ನೈಸರ್ಗಿಕವಾಗಿ ಬೆಳೆದು ಕೊಳತು ಹೋಗುತ್ತಿರುವ ಮತ್ತು ಬಿಸಾಡುವ ಹತ್ತು ಹಲವು ನಿರುಪಯುಕ್ತ ಸಂಪನ್ಮೂಲಗಳಿಗೆ ಸಂಪೂರ್ಣವಾಗಿ ಮಾರಾಟದ ವ್ಯವಸ್ಥೆ ಕಲ್ಪಿಸುವ ಪರಿಶ್ರಮವನ್ನು, ವ್ಯಾಪಾರ ವಹಿವಾಟು ಒಂದುಗೂಡಿಸುವ ಕೆಲಸವನ್ನು ಹಗಲೂ ಇರುಳೂ ಇತರೆ ಸಮುದಾಯಗಳೊಂದಿಗೆ ಸ್ಥಳೀಯವಾಗಿ ಕೈಗೂಡಿಸಿ, ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡುತ್ತಿರುವ ಸಮುದಾಯ ಸಾಬರದು. ‘ಮುಸ್ಲಿಮರಿಗೆ ಈದಕಾ ಬಿರಿಯಾನಿ’ ಎಂದು ಜರಿಯುವ ರಾಜಕೀಯ ನಾಯಕರಿಗೆ ಅದರ ಹಿಂದಿರುವ ಬೆವರಿನ ಪರಿಶ್ರಮ ಅರ್ಥವಾಗಲಾರದು.
ಇದನ್ನು ಓದಿದ್ದೀರಾ?: ಬೇಸಿಗೆಯಲ್ಲೂ 19 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಸಾಬ್ರು, ಸಾಬ್ರು ಎಂದು ಏದುಸಿರು ಬಿಟ್ಟು ಸದನದ ಒಳಗೂ ಹೊರಗೂ ಕೊಳಕು ರಾಜಕಾರಣ ಮಾಡುವವರು ಇವುಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ಗ್ರಾಮೀಣ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ವ್ಯವಸ್ಥೆ ಹಳ್ಳ ಹಿಡಿಯುತ್ತದೆ. ಹಳ್ಳಿಗಳೂ ಇವುಗಳನ್ನು ಗಮನಿಸದಿದ್ದರೆ ಅವುಗಳ ಬೇರು ಮಟ್ಟದ ಆರ್ಥಿಕ ಆಸರೆಗಳು ಮಣ್ಣು ಪಾಲಾಗುತ್ತವೆ. ಅವುಗಳ ಬದುಕಿನ ಹಣಕಾಸಿನ ಆಸರೆಗಳು ಸಡಿಲವಾಗುತ್ತವೆ ಮತ್ತು ಬೇರು ಕೊಳೆಯುತ್ತವೆ. ದಿಣ್ಣೆ ಮೇಲೆ ಕುಳಿತು ಯಾರು ಬೇಕಾದರೂ ಮಾತನಾಡಬಹುದು. ನೆಲಕ್ಕಿಳಿದು ಕೆಲಸ ಮಾಡುವ ಸಮುದಾಯಗಳು ಸರ್ಕಾರವನ್ನು ಒತ್ತಾಯಿಸಬೇಕು, ‘ಸಾಬ್ರು ಬಜೆಟ್’ ಎಂದೇ ಮಂಡನೆ ಆಗಬೇಕೆಂದು.

ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ