ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯ ಭೂ ಕೆಳಮೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ (ಸಿಐಟಿಯು) ಏ.2ರಂದು ಪ್ರತಿಭಟನಾ ಧರಣಿ ಆಯೋಜಿಸಿದೆ.
ಹಟ್ಟಿಯ ಭೂ ಕೆಳಮೈನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ನಿರಂತರ ಕೃತಕ ವಿಷ ಗಾಳಿ, ಧೂಳು ಸೇವನೆಯಿಂದ ಹೃದಯ ಸಂಬಂಧೀ ರೋಗ, ಬಿಪಿ, ಶುಗರ್, ಪ್ಯಾರಾಲಿಸಿಸ್ ಸಿಲಿಕೋಸಿಸ್ ಸೇರಿದಂತೆ ನಾನಾ ಬಗೆಯ ಭಯಂಕರ ಮಾರಣಾಂತಿಕ ರೋಗಗಳಿಗೆ ತುತ್ತಾಗುತ್ತಿದ್ದು, ಅವರಿಗೆ ಸೂಕ್ತ ಆರೋಗ್ಯ ತಪಾಸಣೆ, ಚಿಕಿತ್ಸೆ, ವಿಮೆಯಂತಹ ಪರಿಹಾರಗಳನ್ನು ರೂಪಿಸಬೇಕು. ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡಬೇಕು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಮುಖಂಡರು, ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ಬಹದ್ದೂರು ಅವರಿಗೆ ಮನವಿ ಸಲ್ಲಿಸಿದರು.
ಗಣಿ ಅಡಳಿತ ಮಂಡಳಿ ನಿರ್ದೇಶಕರ ಮಂಡಳಿ ಸಭೆಯಲ್ಲಿ ಯಾವುದೇ ಷರತ್ತುಗಳನ್ನು ವಿಧಿಸದೆ ಅನುಮೋದನೆ ಪಡೆದು ಗಣಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಏ.2ರಂದು ಹಟ್ಟಿಯ ಕ್ಯಾಂಪ್ (ಹಳೆ ಬಸ್ ನಿಲ್ದಾಣ)ನಲ್ಲಿ ಬಹಿರಂಗ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸಿಐಟಿಯು ತಾಲೂಕು ಮುಖಂಡ ರಮೇಶ ವೀರಾಪೂರು, ತಾಲೂಕು ಸಂಚಾಲಕ ಹನೀಫ್, ಹಟ್ಟಿ ಘಟಕದ ಅಧ್ಯಕ್ಷ ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಗೋರ್ಕಲ್, ಸಹ ಕಾರ್ಯದರ್ಶಿಗಳಾದ ಅಲ್ಲಾಬಕ್ಷ ದೇವಪೂರು, ಎಂ.ಡಿ. ರಫಿ ಕೆ, ಲಿಂಗಸೂರು, ಶ್ರೀಧರ್ ಪೆಂಚಲಯ್ಯ, ಅಮರೇಶ, ರಾಜರತ್ನಂ, ಮಲ್ಲಿಕಾರ್ಜುನ್, ಅಲ್ಲಾಭಕ್ಷ ಸಾಶಿಹಾಳ ಉಪಸ್ಥಿತರಿದ್ದರು.
