ಕಾಸರಗೋಡಿನಿಂದ ಉಡುಪಿಯವರೆಗೆ ಆವರಿಸಿರುವ, ತುಳುನಾಡು ಎಂದೇ ಕರೆಯಲಾಗುವ ಕರ್ನಾಟಕದ ಕರಾವಳಿಯಲ್ಲಿ ಅದರದ್ದೇ ಆದ ಸಂಸ್ಕೃತಿ, ಆಚಾರ-ವಿಚಾರಗಳಿವೆ. ದೈವಾರಾಧನೆ, ಭೂತಾರಾಧನೆ- ಹೀಗೆ ನಂಬಿ ಬಂದವರಿಗೆ ಇಂಬನ್ನು ಶೋಷಣೆಗೊಳಗಾಗಿ ‘ದೈವ’ದ ಸ್ಥಾನ ಪಡೆದವರು ನೀಡುತ್ತಾರೆಂಬುದು ಕರಾವಳಿ ಜನರ ನಂಬಿಕೆ. ಕೊರಗ ತನಿಯ, ಕಲ್ಲುರ್ಟಿ ಕಲ್ಕುಡ, ಆಲಿ ಭೂತ, ಪಂಜುರ್ಲಿ, ಗುಳಿಗ, ಮಾಪುಳ್ತಿ, ಬಬ್ಬರ್ಯ, ಕೊರತಿ- ಹೀಗೆ ಕಡಲನಗರಿಯ ದೈವಗಳ, ಭೂತಗಳ ಸಂಖ್ಯೆ ಬೆರಳೆಣಿಕೆಗೆ ಸೀಮಿತವಾಗಿಲ್ಲ.
ಪಾಳೇಗಾರರು, ಬ್ರಾಹ್ಮಣರ ತುಳಿತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡವರನ್ನು, ಮೇಲ್ಜಾತಿ ಎಂದು ಕರೆಸಿಕೊಂಡವರಿಂದ ತಮಗಾದ ಅನ್ಯಾಯವನ್ನು ಮೆಟ್ಟಿ ನಿಂತವರನ್ನು ಕರಾವಳಿಯಲ್ಲಿ ದೈವ, ಭೂತ ಸ್ಥಾನಕ್ಕೆ ಏರಿಸಲಾಗಿದೆ. ಕರಾವಳಿಯ ಹಿನ್ನೆಲೆಯೇ ಹೀಗಿದೆ. ಆದರೆ ಇಂದು ತುಳುನಾಡಿಗೂ ವೈದೀಕಿಕರಣ ಕಾಲಿಟ್ಟಿದೆ. ಹಂತ ಹಂತವಾಗಿ ದೈವಗಳು ವೈದಿಕೀಕರಣಗೊಂಡು ದೇವರಾಗುತ್ತಿದ್ದಾರೆ. ತುಳುನಾಡ ಸಂಸ್ಕೃತಿ ನಿಧಾನಕ್ಕೆ ನಾಶವಾಗಿ ಬ್ರಾಹ್ಮಣ್ಯೀಕರಣಗೊಳ್ಳುತ್ತಿದೆ. ಇಂದು ಬಲಾಢ್ಯರ ಹಿಡಿತಕ್ಕೆ ಸಿಲುಕಿ ಭೀಕರವಾಗಿ ಸಾವನ್ನಪ್ಪಿದ ಸೌಜನ್ಯ ದಕ್ಷಿಣ ಕನ್ನಡದ ಸಂಸ್ಕೃತಿಯಂತೆ ದೈವವೆಂದು ಕರೆಸಿಕೊಳ್ಳಬೇಕಾಗಿತ್ತು. ಆದರೆ ಹಿಂದುತ್ವ, ವೈದಿಕೀಕರಣದಿಂದಾಗಿ ಇಂದು ಸೌಜನ್ಯ ದೇವಿಯಾಗಿದ್ದಾಳೆ! ಹಿಂದುತ್ವವನ್ನು ಒಪ್ಪಿಕೊಂಡವರೇ ಈ ಹೋರಾಟದಲ್ಲಿ ಮುನ್ನಲೆಯಲ್ಲಿರುವ ಕಾರಣದಿಂದಾಗಿ ‘ಸೌಜನ್ಯ ಎಂಬ ದೈವ ಇಂದು ಸೌಜನ್ಯ ದೇವಿ’ ಎಂದು ಬದಲಾಗಿದ್ದಾಳೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಸೌಜನ್ಯ ಪ್ರಕರಣ: ಸಮಾನ ಮನಸ್ಕರ ಸಮಾಲೋಚನಾ ಸಭೆಗೆ ಪೊಲೀಸರಿಂದ ಅಡ್ಡಗಾಲು!
ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಆಚಾರ- ವಿಚಾರಗಳು ವಿಭಿನ್ನವಾಗಿದೆ. ವಿವಾಹ, ಅಂತಿಮ ಸಂಸ್ಕಾರ, ಸೀಮಂತ- ಹೀಗೆ ಎಲ್ಲ ಕಾರ್ಯಕ್ರಮಗಳಿಗೂ ಸ್ಥಳೀಯವಾದ ಸಂಪ್ರದಾಯಗಳಿವೆ. ಆದರೆ ಪ್ರಸ್ತುತ ಎಲ್ಲೆಡೆ ವೈದಿಕೀಕರಣ ನುಸುಳಿದೆ. ನಮ್ಮ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯ ದೈವಾರಾಧನೆ ಅಥವಾ ಭೂತಾರಾಧನೆಗೂ ಇಂದು ವೈದಿಕೀಕರಣ ನುಗ್ಗಿದೆ. ದೈವಗಳ ಹೆಸರು ಬದಲಾವಣೆಯಿಂದ ಹಿಡಿದು, ಪದ್ಧತಿಯ ಬದಲಾವಣೆಯವರೆಗೆ ಮಾತ್ರವಲ್ಲ ದೈವದ ಹುಟ್ಟಿನ ಕಥೆಯನ್ನೇ ತಿರುಚಲಾಗುತ್ತಿದೆ. ದೈವಕ್ಕೂ ದೇವರಿಗೂ ನಂಟು ಕಲ್ಪಿಸಲಾಗುತ್ತಿದೆ.
ವೈದೀಕಿಕರಣ ನುಗ್ಗಿ ಮೊದಲು ದೈವಗಳ ಹೆಸರನ್ನೇ ಬದಲಾಯಿಸಿತು. ಇದರ ಅರಿವು ಯಾರಿಗೂ ಬರಲಿಲ್ಲ. ತಿಳಿಯುವಷ್ಟರಲ್ಲಿ ಬ್ರಾಹ್ಮಣ್ಯೀಕರಣಗೊಂಡ ಹೆಸರೇ ಚಾಲ್ತಿಗೆ ಒಗ್ಗಿಯಾಗಿತ್ತು. ಕರಾವಳಿಯ ಭೂತಾರಾಧನೆ ಸಂಸ್ಕೃತಿಯ ಬಗ್ಗೆ ಆಳ ಜ್ಞಾನ ಉಳ್ಳವರು ಗಮನಿಸಿ, ಚಿಂತನೆ ನಡೆಸಿದ ಬಳಿಕ ಬ್ರಾಹ್ಮಣ್ಯ ಪ್ರಾಬಲ್ಯ ಹೆಚ್ಚುತ್ತಿರುವುದು ಮನದಟ್ಟಾಯಿತು. ಅಷ್ಟರಲ್ಲೇ ನಮ್ಮ ಆರಾಧನೆ ವಿಧಾನವೇ ಬದಲಾಗಲು ಶುರುವಾಗಿತ್ತು. ಎಷ್ಟೇ ವಿರೋಧ ವ್ಯಕ್ತವಾದರೂ ಹಿಂದುತ್ವವಾದಿಗಳ ಪ್ರಾಬಲ್ಯದಿಂದಾಗಿ ಕಣ್ಕಟ್ಟಿನಂತೆ ಬದಲಾವಣೆಗಳು ಸಾಗುತ್ತಲೇ ಇದೆ. ಈ ನಡುವೆ ನಮ್ಮ ಸಂಸ್ಕೃತಿ ಮುಂದುವರೆಸಬೇಕಾದ ಯುವಜನರು ಈ ವೈದಿಕೀಕರಣವನ್ನು ಒಪ್ಪಿಕೊಳ್ಳುತ್ತಿರುವುದು ವಿಷಾದನೀಯ.
ಇದನ್ನು ಓದಿದ್ದೀರಾ? ಸೌಜನ್ಯ ಪ್ರಕರಣದ ಬಗ್ಗೆ ವಿಡಿಯೋ; ಸಮೀರ್‌ಗೆ ನೋಟಿಸ್ ನೀಡಿದ ಪೊಲೀಸರಿಗೆ ಹೈಕೋರ್ಟ್ ತರಾಟೆ
ಈ ಹಿಂದೆ ಜುಮಾದಿ ಆಗಿರುವುದು ಇಂದು ಧೂಮಾವತಿಯಾಗಿ ಬದಲಾಗಿದೆ, ಲೆಕ್ಕಸಿರಿ ಇಂದು ರಕ್ತೇಶ್ವರಿಯಾಗಿದ್ದಾಳೆ. ಈ ಬದಲಾವಣೆಯನ್ನು ಗಮನಿಸಲು ಸಾಧ್ಯವಾಗದಷ್ಟು ಕ್ಷಿಪ್ರವಾಗಿ ನಡೆದಿದೆ. ಹಾಗೆಯೇ ಇಂದು ಬಹುತೇಕರು ಈ ವೈದಿಕೀಕರಣವನ್ನೇ ಒಪ್ಪಿಕೊಂಡು ಮುಂದುವರೆಯುತ್ತಿದ್ದಾರೆ. ಕರಾವಳಿಯಲ್ಲಿ ಧರ್ಮಾತೀತವಾಗಿ ಜನರು ನಂಬುವ ಕೊರಗ ತನಿಯ ಅಥವಾ ಕೊರಗಜ್ಜ ಎಂದು ಕರೆಯಲಾಗುವ ಭೂತವನ್ನು ಇಂದು ಹಿಂದುತ್ವವಾದಿಗಳು ಈಶ್ವರನ ಸ್ವರೂಪವನ್ನಾಗಿಸಿದ್ದಾರೆ. ಅದಕ್ಕಾಗಿ ಕೊರಗಜ್ಜನೆಡೆಗೆ ನಡೆ ಎಂಬುದನ್ನೂ ಮಾಡಿದ್ದಾರೆ. ಇದೀಗ ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ‘ಕಾಂತಾರ’ ಸಿನಿಮಾದ ಮೂಲಕ ಪಂಜುರ್ಲಿಯನ್ನು ವರಾಹ ಅವತಾರವನ್ನಾಗಿಸಲಾಗಿದೆ. ಕೊನೆಯದಾಗಿ ಕರಾವಳಿಯ ದೈವಗಳೆಲ್ಲವೂ ಪರಶಿವನ ಗುಣ ಎಂಬ ಕಟ್ಟು ಕಥೆಯೂ ಚಾಲ್ತಿಯಲ್ಲಿದೆ. ಹೀಗೆ ನಿಧಾನವಾಗಿ ಕರಾವಳಿ ಜನ ನಂಬುವ ದೈವಗಳನ್ನು ದೇವರನ್ನಾಗಿಸುತ್ತಿದ್ದಾರೆ. ಕೇರಳದಲ್ಲಿಯೂ ಹಿಂದುತ್ವವಾದಿಗಳು ಇದನ್ನೇ ನಡೆಸುತ್ತಿದ್ದಾರೆ. ಕೇರಳದಲ್ಲಿ ‘ತೆಯ್ಯಂ ಇಂದು ದೈವಂ’ ಆಗುತ್ತಿದೆ, ದಕ್ಷಿಣ ಕನ್ನಡದಲ್ಲಿ ‘ದೈವವನ್ನು ದೇವರು’ ಎಂದು ಕರೆಯಲಾಗುತ್ತಿದೆ.
ಕರಾವಳಿಯ ಭೂತಾರಾಧನೆ, ದೈವಾರಾಧನೆಗೂ ವೈಜ್ಞಾನಿಕವಾಗಿ ನಂಟಿದೆ. ಇಂದು ದೈವ ನುಡಿ ಹೇಳುವವರು ಕರಾವಳಿ ಪರಶುರಾಮನ ಸೃಷ್ಟಿ ಎಂದು ಹೇಳಬಹುದು. ಆದರೆ ಪಂಜುರ್ಲಿ ಪಾಡ್ದನ ಹೇಳುವುದೇ ಬೇರೆ. ಈ ಭೂಮಿ ಸೃಷ್ಟಿಯ ವೈಜ್ಞಾನಿಕ ನಿಲುವನ್ನೇ ಪಾಡ್ದನ ಪ್ರತಿಪಾದಿಸುತ್ತದೆ. ಹಾಗೆಯೇ, ಬಸವಣ್ಣನ ಕಾಯಕ ತತ್ವವನ್ನು ಸಾರುತ್ತದೆ. ‘ಕಾಯಕದಲ್ಲಿ ದೈವವಿದೆ’ ಎನ್ನುವುದು ಪಂಜುರ್ಲಿ ಪಾಡ್ದನದಲ್ಲಿದೆ.
ವೈದಿಕೀಕರಣ, ವೈದಿಕ ಸಂಪ್ರದಾಯದ ಪ್ರಾಬಲ್ಯವು ಕರಾವಳಿಯನ್ನು ಎಷ್ಟರ ಮಟ್ಟಿಗೆ ಆವರಿಸಿದೆ ಎಂದರೆ ಈಗ ದೈವಸ್ಥಾನಕ್ಕೂ ಬ್ರಹ್ಮಕಲಶ ಮಾಡಲಾಗುತ್ತದೆ. ಬ್ರಹ್ಮಕಲಶ ಎಂಬುದು ವೈದಿಕ ವಿಧಿ ವಿಧಾನ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಬ್ರಾಹ್ಮಣರ ಪದ್ಧತಿಯಂತೆ ಬ್ರಹ್ಮಕಲಶೋತ್ಸವ ಮಾಡಲಾಗುತ್ತದೆ. ಇದನ್ನು ಹಲವು ದಿನಗಳ ಹಬ್ಬದಂತೆ ಸಂಭ್ರಮಿಸಲಾಗುತ್ತದೆ. ಸಾವಿರಾರು ಮಂದಿ ಈ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ವೈದಿಕ ಸಂಪ್ರದಾಯವು ಇಂದು ದೈವಸ್ಥಾನಕ್ಕೂ ಹೊಕ್ಕಿದೆ. ದೈವಸ್ಥಾನಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ದೈವಸ್ಥಾನದಲ್ಲಿ ಹಿಂದೆಂದೂ ಮಾಡದ, ಮಾಡಬಾರದು ಎಂದು ಹೇಳಬಹುದಾದ ಈ ವೈದಿಕ ಸಂಪ್ರದಾಯಕ್ಕಾಗಿ ಕುಟುಂಬಸ್ಥರು, ಊರಿನ ಜನರು ಲಕ್ಷಾಂತರ ರೂಪಾಯಿ ಸುರಿಯುತ್ತಾರೆ. ಕುಟುಂಬದಲ್ಲಿರುವ ಬಡವರು ತಲೆಗೆ ಇಷ್ಟು ಎಂಬ ಲೆಕ್ಕಾಚಾರದಲ್ಲಿ ನೀಡಬೇಕಾದ ಹಣ ಹೊಂದಿಸಲು ಸಾಲದ ಮೊರೆ ಹೋಗುತ್ತಾರೆ. ಇಲ್ಲಿ ಕರಾವಳಿಯ ಸಂಸ್ಕೃತಿಯ ನಾಶವೂ ಆಯಿತು, ಬಡವರ ಹೆಗಲಿಗೆ ಹೊರೆಯೂ ಆಯಿತು. ಇದರಂತೆ ದೈವಸ್ಥಾನದಲ್ಲಿ ಕಲಶ ಇಡುವ ಪದ್ಧತಿ ಹಿಂದೆ ಇರಲಿಲ್ಲ. ಆದರೆ ಇಂದು ಬ್ರಾಹ್ಮಣರನ್ನು ಕರೆಸಿ ದೈವಸ್ಥಾನಗಳಲ್ಲಿ ಹೋಮ- ಹವನ ಮಾಡಿಸಿ ಕಲಶವನ್ನು ಇಡಲಾಗುತ್ತಿದೆ. ಕೆಲವೆಡೆ ದೈವ ನರ್ತಕರು ಕಲಶ ಇಡುವುದನ್ನು ದೈವ ಆವಾಹನೆ ಸಂದರ್ಭದಲ್ಲಿ ವಿರೋಧಿಸಿದರೆ, ಇನ್ನೂ ಕೆಲವೆಡೆ ಈ ಪರ ಪದ್ದತಿಯನ್ನೇ ನಮ್ಮದೆಂಬಂತೆ ಕಾಣಲಾಗುತ್ತಿದೆ.
ಇದನ್ನು ಓದಿದ್ದೀರಾ? ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣ: ಮರು ತನಿಖೆ ಕೋರಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಕರಾವಳಿಯಲ್ಲಿ ವಿವಿಧ ದೈವಗಳ ಹುಟ್ಟಿಗೆ ವಿಭಿನ್ನವಾದ ಕಥೆಗಳಿವೆ. ಭೂಮಾಲೀಕರ, ಮೇಲ್ಜಾತಿಗರೆಂದು ಕರೆಸಿಕೊಳ್ಳುವವರ ದರ್ಪಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರಿಗೆ ದೈವದ ಸ್ಥಾನ ನೀಡಲಾಗಿದೆ. ಕಲ್ಲುರ್ಟಿ, ಕಲ್ಕುಡ, ಕೊರಗಜ್ಜ, ಮೈಸಂದಾಯ, ಕೋಟಿ ಚೆನ್ನಯ- ಹೀಗೆ ಉಳ್ಳವರಿಂದ ತುಳಿತಕ್ಕೆ ಒಳಗಾಗಿ ಮೃತಪಟ್ಟವರಿಗೆ ಕರಾವಳಿಯ ಮಣ್ಣು, ಜನರು ದೈವ ಸ್ಥಾನವನ್ನು ನೀಡಿದ್ದಾರೆ. ಪಾಳೇಗಾರರ ದಬ್ಬಾಳಿಕೆಯಿಂದಾಗಿ ಅದೆಷ್ಟೋ ಶೂದ್ರರು, ಕೆಳವರ್ಗದವರು ಸಾವನ್ನಪ್ಪಿದಾಗ ಈ ಪಾಳೇಗಾರರೇ ‘ಕಾಯ ಕಳೆದ್ ಮಾಯ ಲೋಕ ಸೇರಿಯೆ’ (ಕಾಯ ಬಿಟ್ಟು ಮಾಯಾಲೋಕ ಸೇರಿದ) ಎಂದು ಹೇಳುವ ಮೂಲಕ ದೈವದ ಸ್ಥಾನ ನೀಡಿದ್ದಾರೆ.
ಆ ಸಂಸ್ಕೃತಿ ಮುಂದುವರೆಯುತ್ತಾ ಹೋಗುವಾಗ ಇಂದು ಮೇಲ್ವರ್ಗದವರ ಅನ್ಯಾಯಕ್ಕೆ ಒಳಗಾದವರು ದೈವವಾಗಬೇಕು. ಕರಾವಳಿ ಇತಿಹಾಸ ನೋಡಿದಾಗ ಬಲಾಢ್ಯರ ತೆವಲಿಗೆ ಬಲಿಯಾದ ಸೌಜನ್ಯಳಿಗೂ ದೈವ ಸ್ಥಾನ ನೀಡಬೇಕಿತ್ತು ಎಂಬ ವಾದಗಳಿವೆ. “ಸೌಜನ್ಯಳನ್ನು ಕೂಡಾ ದೈವತ್ವಕ್ಕೆ ಏರಿಸಬೇಕು. ಸೌಜನ್ಯ ಎಂಬ ಭೂತ ವೈದಿಕ ದೇವರುಗಳ ಪ್ರಾಬಲ್ಯವನ್ನು ಮುರಿಯಲು ಒಂದು ಅಸ್ತ್ರವಾಗಿ ಉಳಿದವರು ಬಳಸಿಕೊಳ್ಳಬೇಕು” ಎನ್ನುತ್ತಾರೆ ಹಿರಿಯ ಪತ್ರಕರ್ತ ಎ. ನಾರಾಯಣ.
‘ಕೋಲ್ಡ್ ಕೇಸ್’ ತೆರೆಯಲು, ತನಿಖೆ ನಡೆಯಲಿ
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ವಿದ್ಯಾರ್ಥಿನಿಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದು 13 ವರ್ಷಗಳೇ ಆಗಿದೆ. ಆದರೆ ಇಂದಿಗೂ ನ್ಯಾಯವೆಂಬುದು ಆ ಪ್ರದೇಶವನ್ನು ಆಳುವವರು ಬೆಚ್ಚಗೆ ಕುಳಿತಿರುವ ಕುರ್ಚಿಯಡಿ ಸಿಲುಕಿ ನಜ್ಜುಗುಜ್ಜಾಗುತ್ತಿದೆ. ಇಲ್ಲಿ ಕಾಮಾಂಧರು, ಕೊಲೆಗಡುಕರು ಯಾರೆಂಬುದು ಜಗಜ್ಜಾಹೀರು. ಅಧಿಕಾರ, ಕಾಂಚಾಣದ ಗದ್ದಲದ ಮುಂದೆ ಜನರ ಕೂಗು ಸರ್ಕಾರದ ಕಿವಿಗೆ ಮುಟ್ಟದು. ಪಿಸುದನಿ ಶುರುವಾದರೂ ಹತ್ತಿಕ್ಕಿ, ಜೈಲಿಗಟ್ಟಿ ದಮನಿಸುವ ಎಲ್ಲ ಯತ್ನಗಳು ನಡೆದಿದೆ, ಚಾಲ್ತಿಯಲ್ಲೂ ಇದೆ.
ಅಮಾಯಕನ ಹೆಗಲ ಮೇಲೆ ಅಪರಾಧದ ಹೊರೆ ಇರಿಸಿ ಆತನ ಹತ್ತು ವರ್ಷದ ಜೀವನವನ್ನು ಹಾಳುಗೆಡವಿದ್ದಾಯಿತು. ಎಲ್ಲಾ ಸಾಕ್ಷ್ಯಗಳ ನಾಶ ಮಾಡಲು ಒಂದು ದಶಕ ಸಾಲದೇ? ಸಮಯವೆಷ್ಟೇ ಕಳೆದರೂ ಜಾತಿ, ಧರ್ಮವೆಂಬ ವೇಷ ಕಳಚಿಟ್ಟು ಜನಸಾಮಾನ್ಯರು ಒಂದಾದರೆ ಬೂರ್ಜ್ವಾಗಳ ಎದೆ ನಡುಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಸೌಜನ್ಯ ಪ್ರಕರಣದ ಬಗ್ಗೆ ಸಮೀರ್ ವಿಡಿಯೋ ಮಾಡಿದ ಬೆನ್ನಲ್ಲೇ ಧರ್ಮದ ಗೂಟ ಹೊಡೆದು ಜನರ ನಡುವೆ ಕಿಚ್ಚು ಹಚ್ಚಿ ಕುಳಿತು ಮನರಂಜನೆ ಪಡೆಯುತ್ತಿದ್ದಾರೆ. ಈ ವಾಸ್ತವತೆಯನ್ನು ಜನರು ಅರ್ಥಮಾಡಿಕೊಂಡು, ಸೌಹಾರ್ದತೆಯಿಂದ ಹೆಣ್ಣಿಗಾದ ಅನ್ಯಾಯದ ವಿರುದ್ದ ದನಿ ಎತ್ತುವುದು ಅನಿವಾರ್ಯ. ಜೊತೆಗೆ ಸರ್ಕಾರ ಇದೊಂದೇ ಪ್ರಕರಣವಲ್ಲ, ಧರ್ಮಸ್ಥಳದಲ್ಲಿ ನಡೆದಿರುವ ಹಲವು ‘ಕೋಲ್ಡ್ ಕೇಸ್‌ಗಳನ್ನು’ ಮತ್ತೆ ತೆರೆಯಬೇಕು, ತನಿಖೆ ನಡೆಸಬೇಕಾದ ಅಗತ್ಯವಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.
ಉತ್ತಮವಾದ ಬರಹ. ಅರ್ಥವತ್ತಾಗಿದೆ.