ತೆಲಂಗಾಣದ ನಾಲ್ಗೊಂಡಾ ಜಿಲ್ಲೆಯ ಮಿರ್ಯಾಲಗುಡದಲ್ಲಿ ದಲಿತ ಯುವಕನ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ನ್ಯಾಯಾಲಯವು ಸೋಮವಾರ ತೀರ್ಪು ಪ್ರಕಟಿಸಿದೆ. ಓರ್ವ ಅಪರಾಧಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು, ಆರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.
2018ರಲ್ಲಿ 30 ವರ್ಷದ ಪಿ ಪ್ರಣಯ್ ಕುಮಾರ್ ಎಂಬ ದಲಿತ ಯುವಕನ ಮರ್ಯಾದಾ ಹತ್ಯೆ ನಡೆದಿದೆ. ಈ ಕೊಲೆಗೆ ಎಸ್‌ಸಿ/ಎಸ್‌ಟಿ ಸೆಷನ್ಸ್ ಎರಡನೇ ಹೆಚ್ಚುವರಿ ನ್ಯಾಯಾಲಯವು ಸುಭಾಷ್ ಶರ್ಮಾ ಎಂಬ ಅಪರಾಧಿಗೆ ಮರಣದಂಡನೆ ವಿಧಿಸಿದೆ. ಶರ್ಮಾಗೆ 15,000 ರೂ. ಮತ್ತು ಇತರ ಆರು ಅಪರಾಧಿಗಳಿಗೆ ತಲಾ 10,000 ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.
ಇದನ್ನು ಓದಿದ್ದೀರಾ? ಗದಗ | ಮರ್ಯಾದೆಗೇಡು ಹತ್ಯೆ: ಮಗಳನ್ನೇ ಕೊಂದಿದ್ದ ನಾಲ್ವರು ಹಂತಕರಿಗೆ ಮರಣದಂಡನೆ
1 ಕೋಟಿ ರೂಪಾಯಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದ ಯುವತಿಯ ತಂದೆ ಟಿ. ಮಾರುತಿ ರಾವ್ 2020ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
2018ರ ಸೆಪ್ಟೆಂಬರ್‌ನಲ್ಲಿ ಪ್ರಣಯ್ ಕೊಲೆಯಾಗಿದೆ. ಮಿರ್ಯಾಲಗುಡದಲ್ಲಿ ತನ್ನ ಗರ್ಭಿಣಿ ಪತ್ನಿ ಅಮೃತಾಳೊಂದಿಗೆ ಆಸ್ಪತ್ರೆಯಿಂದ ಹೊರ ಬರುತ್ತಿದ್ದಾಗ ಹಾಡಹಗಲೇ ಪ್ರಣಯ್ ಅವರನ್ನು ಕೊಚ್ಚಿ ಕೊಲ್ಲಲಾಗಿತ್ತು. ಈ ಕೃತ್ಯವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈ ಮರ್ಯಾದೆಗೇಡು ಹತ್ಯೆಯನ್ನು ಜನರು ತೀವ್ರವಾಗಿ ಖಂಡಿಸಿದ್ದರು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
