ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆ ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅಂಗೀಕಾರ

Date:

Advertisements

ಆಡಳಿತ ವಿಕೇಂದ್ರೀಕರಣ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಖ್ಯೆಯನ್ನು ಹೆಚ್ಚು ಮಾಡುವ ಉದ್ದೇಶದ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ವನ್ನು ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಸೋಮವಾರ ಅಂಗೀಕರಿಸಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಅವರು 20 ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ಅನ್ನು ಸದನದಲ್ಲಿ ಮಂಡಿಸಿ, ಮಾತನಾಡಿದ ಅವರು, “ವಿರೋಧ ಪಕ್ಷಗಳ ನಾಯಕರು ತಮ್ಮದೇ ಆದ ಅಭಿಪ್ರಾಯ ತಿಳಿಸಿದ್ದಾರೆ. ಅವರು ಅಭಿಪ್ರಾಯವನ್ನು ನಾನು ವಿರೋಧಿಸುವುದಿಲ್ಲ. ಅವರಲ್ಲಿ ಕೆಲವರಿಗೆ ರಾಜಕೀಯ ಇಚ್ಚಾಶಕ್ತಿಯೂ ಇದೆ. ಅದರಲ್ಲಿ ತಪ್ಪಿಲ್ಲ. ಈಗಿರುವ ವ್ಯವಸ್ಥೆಯಲ್ಲಿಯೇ ಬೆಂಗಳೂರು ನಗರವನ್ನು ಮುನ್ನಡೆಸುವುದು ಅಸಾಧ್ಯ ಎಂದು ಅವರು ಆತ್ಮಸಾಕ್ಷಿ ಮೂಲಕ ಒಪ್ಪಿದ್ದಾರೆ” ಎಂದರು.

“ಬೆಂಗಳೂರು ನಗರ ಕೆಂಪೇಗೌಡರು ಕಟ್ಟಿಸಿದ ಗೋಪುರ ಮೀರಿ ಬೆಳೆದಿದೆ. ಈಗಲೂ ಅದನ್ನು ನಿಲ್ಲಿಸಲು ಆಗುವುದಿಲ್ಲ, ಮುಂದೆಯೂ ಆಗುವುದಿಲ್ಲ. ಯಲಹಂಕ, ಕೆಂಗೇರಿ ಉಪನಗರಗಳು ಈಗ ಪಾಲಿಕೆ ವ್ಯಾಪ್ತಿಗೆ ಸೇರಿವೆ. ಹೀಗೆ ಬೆಳೆದಿರುವ ಬೆಂಗಳೂರಿನ ಆಡಳಿತವನ್ನು ನಾವು ವಿಕೇಂದ್ರೀಕರಣ ಮಾಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

Advertisements

“ದೆಹಲಿ ಪರಿಸ್ಥಿತಿಯೇ ಬೇರೆ. ಇನ್ನು ಮುಂಬೈಯಲ್ಲಿ ಮೊದಲೇ ಅವರು ಅಧಿಕಾರ ನೀಡಿದ್ದರು. ಈಗ ಇಲ್ಲಿ ನಾವು ಹಣಕಾಸಿನ ವಿಚಾರ ಚರ್ಚೆ ಮಾಡುತ್ತಿದ್ದೇವೆ. ನಾವು ಬೆಂಗಳೂರನ್ನು ಛಿದ್ರ ಮಾಡಲು ಹೋಗುತ್ತಿಲ್ಲ, ಬೆಂಗಳೂರನ್ನು ಗಟ್ಟಿ ಮಾಡುತ್ತಿದ್ದೇವೆ. ಬೆಂಗಳೂರಿನ ಗೌರವ ಉಳಿಸಬೇಕು. ಮಾಜಿ ಪ್ರಧಾನಿ ವಾಜಪೇಯಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಾಗ, “ಇಷ್ಟು ದಿನ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು, ನಂತರ ದೇಶದ ಇತರ ನಗರಗಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದ್ದರು. ಇದಕ್ಕೆ ಕಾರಣ ಇಲ್ಲಿನ ಆಡಳಿತ. ಕೇವಲ ಕೃಷ್ಣ ಅವರ ಸರ್ಕಾರ ಅಥವಾ ಮತ್ತೊಂದು ಸರ್ಕಾರ ಮಾತ್ರ ಇದಕ್ಕೆ ಕಾರಣವಲ್ಲ. ಇಲ್ಲಿನ ಜನ ಅಷ್ಟರ ಮಟ್ಟಿಗೆ ವಿದ್ಯಾವಂತರು, ಬುದ್ದಿವಂತರು, ಪ್ರಜ್ಞಾವಂತರಿದ್ದಾರೆ. ನೆಹರೂ ಅವರು ಇಲ್ಲಿಯೇ ಇಸ್ರೋ, ಹೆಚ್ಎಂಟಿ, ಹೆಚ್ಎಎಲ್, ಐಟಿಐ ಆರಂಭಿಸಿದ್ದು ಏಕೆ? ಅನೇಕ ಮಹಾನ್ ಸಂಶೋಧಕರು, ಉದ್ದಿಮೆದಾರರು ಬೆಂಗಳೂರಿನಲ್ಲೇ ಓದಿದ್ದಾರೆ” ಎಂದು ವಿವರಿಸಿದರು.

ಆರ್ಥಿಕವಾಗಿ ಹಿಂದುಳಿದ ಪಾಲಿಕೆಗಳಿಗೆ ಸರ್ಕಾರದಿಂದ ನೆರವು

“ಅಧಿಕಾರ ವಿಕೇಂದ್ರಿಕರಣದ ಉದ್ದೇಶದಿಂದ ಬೆಂಗಳೂರು ಮೂರು ಜಿಲ್ಲೆಯಾಯಿತು, ಉಡುಪಿ ಹಾಗೂ ದಕ್ಷಿಣ ಕನ್ನಡ ಬೇರೆ ಜಿಲ್ಲೆಯಾದವು, ಗದಗ ಹಾಗೂ ಹಾವೇರಿ ಎರಡು ಜಿಲ್ಲೆಗಳಾದವು. ಅಶ್ವತ್ಥ್ ನಾರಾಯಣ ಅವರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಡಿ ಎನ್ನುತ್ತಿದ್ದರು. ಜಿಬಿಎಯಲ್ಲಿ (ಗ್ರೇಟರ್ ಬೆಂಗಳೂರು ಅಥಾರಿಟಿ) ನಾಮನಿರ್ದೇಶಿತ ಸದಸ್ಯರಿರುವುದಿಲ್ಲ. ಕೇವಲ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳು ಮಾತ್ರ ಮತದಾನ ಹಕ್ಕನ್ನು ಹೊಂದಿರುತ್ತಾರೆ” ಎಂದು ಸ್ಪಷ್ಟನೆ ನೀಡಿದರು.

“ನಾವು ಕೂಡ ಆಡಳಿತಾತ್ಮಕ ದೃಷ್ಟಿಯಿಂದಲೇ ಪಾಲಿಕೆ ವಿಭಜನೆ ಮಾಡುತ್ತಿದ್ದೇವೆ. ಯಾಕೆ ಮಾಡಬೇಕು. ಇದರಿಂದ ಅನುದಾನದ ಸಮಸ್ಯೆಯಾಗುತ್ತದೆ ಎಂದು ಕೆಲವು ಸದಸ್ಯರು ಪ್ರಸ್ತಾಪಿಸಿದ್ದಾರೆ. ನಾವು ಕೂಡ ಈ ವಿಚಾರವನ್ನು ಅವರುಗಳಂತೆಯೇ ಆಲೋಚನೆ ಮಾಡಿದ್ದೇವೆ. 75ನೇ ತಿದ್ದುಪಡಿ ಪ್ರಕಾರ ಸ್ಥಳೀಯ ಸಂಸ್ಥೆಗಳ ಹಣವನ್ನು ನಾವು ಬೇರೆಡೆಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಜತೆಗೆ ಎಲ್ಲವನ್ನು ಒಟ್ಟಿಗೆ ಸಂಗ್ರಹಿಸಿ ಹಂಚಿಕೆ ಮಾಡಲು ಆಗುವುದಿಲ್ಲ. ಹೀಗಾಗಿ ನಾವು ಸರ್ಕಾರದಿಂದ ಆರ್ಥಿಕವಾಗಿ ದುರ್ಬಲವಾಗಿರುವ ಪಾಲಿಕೆಗಳಿಗೆ ಸಹಾಯ ಮಾಡಬೇಕು ಎಂದು ಈ ಮಸೂದೆಯಲ್ಲಿ ಪ್ರಸ್ತಾಪಿಸಿದ್ದೇವೆ” ಎಂದು ತಿಳಿಸಿದರು.

ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಎಸ್.ಆರ್ ವಿಶ್ವನಾಥ್ ಅವರು ಮಾತನಾಡಿ, “ಹಲವು ಪಾಲಿಕೆಗಳನ್ನು ಮಾಡಿದರೆ, ಒಂದು ಪಾಲಿಕೆಯಲ್ಲಿ ಜನರಿಗೆ ಉಚಿತ ಯೋಜನೆಗಳನ್ನು ಕೊಡಲು ಆರಂಭಿಸಿದರೆ, ಆಗ ಈ ಪಾಲಿಕೆ ವ್ಯಾಪ್ತಿಗೆ ಬಾಡಿಗೆದಾರರು ಸ್ಥಳಾಂತರಗೊಂಡರೆ ಆಗ ಮತ್ತೊಂದು ಪಾಲಿಕೆ ಗತಿ ಏನು? ಇಂತಹ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ” ಎಂದು ಹೇಳಿದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ವಿಶ್ವನಾಥ್ ಅವರ ಧರ್ಮಪತ್ನಿ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದರು. ನಾನು ಕೂಡ ಬೆಂಗಳೂರು ಜಿಲ್ಲಾ ಪರಿಷತ್ ಸದಸ್ಯನಾಗಿದ್ದೆ. ಆಗ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಬೆಂಗಳೂರು ಒಂದೇ ಜಿಲ್ಲೆಯಾಗಿತ್ತು. ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಹೊಸಕೋಟೆ ಸೇರಿದಂತೆ ನಾವೆಲ್ಲರೂ ಬೆಂಗಳೂರಿಗರಾಗಿದ್ದೆವು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಗರ ಜಿಲ್ಲೆ, ರಾಮನಗರ ಜಿಲ್ಲೆಯಾಯಿತು. ಹೀಗೆ ಬೆಂಗಳೂರನ್ನು ಭಾಗ ಮಾಡುವ ಪರಿಸ್ಥಿತಿ ಯಾಕೆ ಬಂದಿತು? ಆಗಿನಂತೆ ಇಡೀ ಜಿಲ್ಲೆಯನ್ನು ಒಂದೇ ಮಾಡಿ ಜಿಲ್ಲಾ ಪಂಚಾಯ್ತಿ ಮಾಡಬಹುದಿತ್ತಲ್ಲವೇ? ಆಡಳಿತಾತ್ಮಕ ಉದ್ದೇಶದಿಂದಲೇ ಇವುಗಳನ್ನು ವಿಭಜನೆ ಮಾಡಿದ್ದೇವೆ ಅಲ್ಲವೇ?” ಎಂದು ಸ್ಪಷ್ಟನೆ ನೀಡಿದರು.

ನಾನು ಡಿನೋಟಿಫಿಕೇಶನ್ ಮಾಡಿ, ಸಮಸ್ಯೆಗೆ ಸಿಲುಕುವುದಿಲ್ಲ

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, “ಬಜೆಟ್ ನಲ್ಲಿ ಟನಲ್ ರಸ್ತೆ, ಮೇಲ್ಸೇತುವೆ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಈ ಹಿಂದೆ ಮಾಡಿರಲಿಲ್ಲ. ನೀವು ಮಾಡಿದ್ದೀರಿ. ನಮಗೆ ಸಂತೋಷವೇ. ಇವುಗಳು ಕಾಲಮಿತಿಯಲ್ಲಿ ಮುಗಿಯುತ್ತವೆಯೇ? ಇನ್ನು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೀರಿ. ಅಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮನೆಗಳಾಗಿವೆ. ಇದನ್ನು ಮಾಡುವುದಾದರೆ ಈಗಲೇ ಮಾಡಿ. 10 ವರ್ಷ ಕಳೆದರೆ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಈ ಬಗ್ಗೆ ಗಮನಹರಿಸಿ” ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನೀವು ಕೃಷ್ಣಪ್ಪ ಅವರ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದೀರಿ. ಈ ವಿಚಾರ ನನ್ನ ಗಮನದಲ್ಲಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ರಸ್ತೆವರೆಗೂ ನೋಟಿಫಿಕೇಶನ್ ಆಗಿತ್ತು. ನಂತರ ರಸ್ತೆ ಮಾಡಲಿಲ್ಲ. ಬಿಡಿಎನಿಂದ ಇದನ್ನು ಡಿಲೀಟ್ ಮಾಡಬೇಕು ಎಂಬ ಮನವಿ ಬಂದಿತು. ಯಾರೂ ಕೂಡ ಇದನ್ನು ಡಿಲೀಟ್ ಮಾಡಿ ಡಿನೋಟಿಫಿಕೇಶನ್ ಮಾಡಲಿಲ್ಲ. ಡಿಲೀಟ್ ಮಾಡಿ ಪ್ಲಾನ್ ಮಾಡಿಕೊಳ್ಳಲು ಅವಕಾಶವನ್ನು ನೀಡಲಿಲ್ಲ. ಈ ಪ್ರದೇಶವನ್ನು ಹಾಗೆ ಬಿಡಲಾಗಿದೆ. ನಾನಂತೂ ಡಿನೋಟಿಫಿಕೇಶನ್ ಮಾಡುವುದಿಲ್ಲ. ಅದರ ಸಮಸ್ಯೆಗೆ ಸಿಲುಕುವುದಿಲ್ಲ. ಕೊನೆಗೆ ಅವರಿಗೆ ಪರಿಹಾರ ನೀಡಿ, ಇದನ್ನು ಮಾಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರಿಗೆ ಒಬ್ಬರೇ ಉಸ್ತುವಾರಿ ಸಚಿವರಿರುವುದಿಲ್ಲ

ಗ್ರೇಟರ್ ಬೆಂಗಳೂರು ಕಾರ್ಯಾಕಾರಿ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಶಾಸಕ ಅಶ್ವತ್ಥನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಉತ್ತರಿಸಿದ ಡಿಸಿಎಂ ಅವರು, “ಬಿಜೆಪಿ ಸಮಯದಲ್ಲಿ ಬೆಂಗಳೂರಿನವರೇ ಮೂರು ನಾಲ್ಕು ಮಂದಿ ಸಚಿವರು ಇದ್ದರು. ಯಾರು ಜವಾಬ್ದಾರಿ ಹೊರುವವರು.ಕಾರ್ಯಕಾರಿ ಸಮಿತಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರು ಒಬ್ಬರೇ ಇರುವುದಿಲ್ಲ” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X