ಬಿಹಾರದಲ್ಲಿ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಸತ್ಯಾಗ್ರಹ ನಿರತ ಬೌದ್ದ ಬಿಕ್ಕುಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ ಎಂದು ಔರಾದ್ ತಾಲ್ಲೂಕಿನ ಭಾರತೀಯ ಬೌದ್ಧ ಮಹಾಸಭಾ ಹಾಗೂ ಇತರೆ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೋಮವಾರ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಔರಾದ್ ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸಲ್ಲಿಸಿದರು.
ʼಭಾರತೀಯ ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳಿಗೆ ಸಮಾನ ಅವಕಾಶವಿದೆ. ಆದರೆ ಬಿಹಾರದಲ್ಲಿ ಬೌದ್ಧವಿಹಾರ ಸಮಿತಿಯಿಂದ ಭಂತೇಜಿ ಅವರನ್ನು ಹೊರಗಿಡುವ ಪ್ರಯತ್ನ ನಡೆದಿದೆ. ಈ ನೀತಿ ವಿರುದ್ಧ ಹೋರಾಡುತ್ತಿರುವ ಭಂತೇಜಿ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ ಬಂಧಿಸಿರುವುದು ಜಗತ್ತಿನ ಬುದ್ದ ಅನುಯಾಯಿಗಳಿಗೆ ತೀವ್ರ ನೋವುಂಟು ಮಾಡಿದೆʼ ಎಂದರು.
ʼರಾಷ್ಟ್ರಪತಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಂತೇಜಿಗಳ ಮೇಲಿನ ದೌರ್ಜನ್ಯ ತಡೆದು ತಪ್ಪಿತ್ತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲಿದಿದ್ದರೆ ಕರ್ನಾಟಕದಿಂದ ಬುದ್ದಗಯಾವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಸಂಚಾಲಕ ಸೋಪಾನರಾವ ಡೊಂಗರೆ ಸೇರಿದಂತೆ ಪ್ರಮುಖರಾದ ಶಿವಕುಮಾರ ಕಾಂಬಳೆ, ಪ್ರಕಾಶ ಬಂಗಾರೆ, ರತ್ನದೀಪ ಕಸ್ತೂರೆ, ಸುನೀಲ ಮಿತ್ರಾ, ದಿನೇಶ ಸಿಂಧೆ, ಆನಂದ ಕಾಂಬಳೆ, ರವಿ ಯರನಾಳೆ, ಉತ್ತಮ ಗಾಯಕವಾಡ, ಸಜೀತ್ ಸಿಂಧೆ, ಸುಂದರ ಮೇತ್ರೆ, ವಿನೋದ ಕಾಂಬಳೆ ಮತ್ತಿತರರಿದ್ದರು.