ಒಬ್ಬ ವಿಶ್ವಗುರು ಇತ್ತೀಚೆಗೆ ಕರ್ನಾಟಕಕ್ಕೆ ಕಾಲಿರಿಸಿದ. ಇವನ ಕೇಂದ್ರಕ್ಕಾಗಿ ನೂರಾರು ಜನ ರೈತರು ಭೂಮಿಯನ್ನು ಕಳೆದುಕೊಂಡರು. ಈ ಕೇಂದ್ರದ ಅಪಾಯವನ್ನು ರೈತರು ಅರಿಯಲಿಲ್ಲ. ಅವರು ಮುಗ್ಧರು ಮತ್ತು ಜಮೀನು ಮಾರುವುದರಿಂದ ತಾವು ಪಡೆಯುವ ಹಣ ತಮ್ಮನ್ನು ಸುಖ ಶಾಂತಿ ನೆಮ್ಮದಿಯಲ್ಲಿರುತ್ತದೆ ಎಂದು ಭಾವಿಸಿದರು. ಒಂದು ಸರ್ಕಾರಕ್ಕೂ ಇದರ ಅಪಾಯ ತಿಳಿಯಲಿಲ್ಲವೇ? ಪಕ್ಕದ ತಮಿಳುನಾಡನ್ನು, ಶಿವರಾತ್ರಿಯ ಎಚ್ಚರದ ಕಣ್ಣಿನಿಂದ ನೋಡಿದ್ದರೂ ಇಂಥ ಕೇಂದ್ರಗಳ ಅಪಾಯ ತಿಳಿಯುತ್ತಿತ್ತು.
ʼನನಗೇನು ಸಿಕ್ಕಿತು ಕುಂಬಳಕಾಯಿʼ ಎನ್ನುವ ಮಾತೊಂದಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಅಂತರಾರ್ಥಕ್ಕೆ ಕೈಹಾಕಿದರೆ, ಕುಂಬಳಕಾಯಿ ಎನ್ನುವುದಕ್ಕೆ ಬೆಲೆಯೇ ಇಲ್ಲ. ಅದೊಂದು ಪ್ರಯೋಜನವಿಲ್ಲದ ಪದಾರ್ಥ ಎಂಬುದು ಗೊತ್ತಾಗುತ್ತದೆ. ವಾಸ್ತವವಾಗಿ ಕುಂಬಳ ಕಾಯಿ ಬಹಳ ಪ್ರಯೋಜಕಾರಿಯಾದದ್ದು. ಅದರ ಬಿಜಗಳನ್ನು ಔಷಧಿಯಾಗಿಯೂ ಬಳಸುತ್ತಾರೆ. ಈ ಬೀಜಗಳು ಬಹಳ ದುಬಾರಿ.
ಹೀಗೆಯೇ ಕುಂಬಳಕಾಯಿಯ ಬೆನ್ನು ಹಿಡಿದು ಹೋದರೆ ನಮ್ಮ ವಿಚಾರವಾದಿ ದಿವಂಗತ ಎಚ್ ನರಸಿಂಹಯ್ಯನವರು ಎದುರಾಗುತ್ತಾರೆ. ದಶಕಗಳ ಹಿಂದೆ ಅವರು ಮತ್ತು ಅವರ ವಿಚಾರವಾದಿ ಮಿತ್ರರ ತಂಡ ಕುಂಬಳಕಾಯಿಯನ್ನು ಬಹಳ ದೊಡ್ಡ ರೂಪಕವಾಗಿ, ಸವಾಲಾಗಿ ಬಳಸಿಕೊಂಡಿತು. ಆಗಿನ ದೇವಮಾನವ ಸತ್ಯ ಸಾಯಿಬಾಬಾ ಅವರಿಗೆ ಈ ವಿಚಾರವಾದಿಗಳು ಎಸೆದ ಸವಾಲು: ನೀವು ಪವಾಡ ಮಾಡುತ್ತೀರೆಂದು ಹೆಸರಾಗಿದ್ದೀರಿ. ಪವಾಡದಿಂದ ಚಿನ್ನದ ಉಂಗುರ, ಚೈನು ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಕೊಡುತ್ತೀರೆಂದೂ ಜನ ಹೇಳುತ್ತಿದ್ದಾರೆ. ನಮಗೆ ಅಂಥ ವಸ್ತುಗಳು ಬೇಡ, ಒಂದು ಕುಂಬಳಕಾಯಿಯನ್ನು ಕೊಡುವ ಪವಾಡ ತೋರಿಸಿ.
ಕುಂಬಳಕಾಯಿಯನ್ನು ಜುಬ್ಬದಲ್ಲಿ ಅಡಗಿಸಿಕೊಂಡು ಕೊಡುವುದು ಅಸಾಧ್ಯ ಎಂಬುದು ನರಸಿಂಹಯ್ಯನವರಿಗೆ ಮಾತ್ರವಲ್ಲ, ಸ್ವತಃ ಸಾಯಿಬಾಬಾ ಅವರಿಗೂ ಗೊತ್ತಿತ್ತು. ಈ ಸವಾಲನ್ನು ಅವರು ಎದುರಿಸಲೇ ಇಲ್ಲ. ನರಸಿಂಹಯ್ಯನವರ ತಂಡ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಮಿನುಗಿತು.

ನರಸಿಂಹಯ್ಯ, ಕೋವೂರ್, ಪೆರಿಯಾರ್, ನಾರಾಯಣ ಗುರು, ವೈಚಾರಿಕ ಚಳವಳಿಯ ವಚನಕಾರರು ಇತ್ಯಾದಿ ದಂಡು ದಂಡೇ ವಿಚಾರವಾದಿಗಳು ಬಂದು ಹೋದರೂ, ದೇವಮಾನವರ ಸಂಖ್ಯೆ ಇಳಿಯಲೇ ಇಲ್ಲ; ಅದು ಹೆಚ್ಚುತ್ತಲೇ ಇದೆ. ಇಡೀ ದೇಶದಲ್ಲಿ ನಡೆಯುತ್ತಿರುವ ಈಗಿನ ವಿದ್ಯಮಾನಗಳನ್ನು ನೋಡಿದರೂ ಈ ಬೆಳವಣಿಗೆ ಗೋಚರವಾಗುತ್ತದೆ. ಗಂಗಾನದಿಯ ನೀರು ಕುಡಿಯಲು ಯೋಗ್ಯವಾಗಿಲ್ಲ, ಅದು ತುಂಬ ಗಲೀಜಾಗಿದೆ, ಅದನ್ನು ಶುದ್ಧೀಕರಿಸಬೇಕು ಎಂದು ಈಗಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಮೋದಿ ಅವರು ಹೇಳುತ್ತ, ಯೋಜನೆಗಳನ್ನು ಸಿದ್ಧಪಡಿಸಿ, ಹಣದ ಹೊಳೆ ಹರಿಸಿದರೂ, ಗಂಗೆ ಶುದ್ಧಿಯಾಗಲಿಲ್ಲ; ಇನ್ನಷ್ಟು ಗಲೀಜಾದಳು. ಇದೆಲ್ಲ ಗೊತ್ತಿದ್ದರೂ, ಸುಮಾರು 60 ಕೋಟಿ ಭಾರತೀಯರು ಮೊನ್ನೆ ನಡೆದ ಕುಂಭಮೇಳದಲ್ಲಿ ಪಾಲೊಂಡು, ಇದೇ ಗಲೀಜು ಗಂಗೆಯಲ್ಲಿ ಮುಳುಗೆದ್ದರು. ಉತ್ತರ ಭಾರತದಲ್ಲಂತೂ ಇಂಥ ಘಟನೆಗಳಿಗೆ ಬರವಿಲ್ಲ. ಇದನ್ನು ವೈಚಾರಿಕತೆಯ ಮುನ್ನಡೆ ಎನ್ನಬೇಕೊ, ಮೂಢನಂಬಿಕೆಯ ತಾಂಡವ ನೃತ್ಯ ಎನ್ನಬೇಕೋ ?

ದಕ್ಷಿಣ ಭಾರತವಾಗಲಿ ಅಥವಾ ಇನ್ನಾವುದೇ ಭೂಭಾಗವಾಗಲಿ ಇದಕ್ಕೆ ಹೊರತಾಗಿ ನಿಲ್ಲುವುದಿಲ್ಲ. ಪೆರಿಯಾರ್ ಕಾರ್ಯಕ್ಷೇತ್ರವಾದ ತಮಿಳ್ನಾಡಿನಲ್ಲಿ ಅನೇಕ ಬೆಳವಣಿಗೆಗಳಾಗಿವೆ. ದ್ರಾವಿಡ ಚಳವಳಿ ಬಿರುಗಾಳಿಯನ್ನೇ ಆ ರಾಜ್ಯದಲ್ಲಿ ಏಳಿಸಿರುವುದೂ ನಿಜ. ರಾಜಕೀಯ ಪಲ್ಲಟಗಳಂತೂ ತಮಿಳ್ನಾಡನ್ನು ಈ ಆರೇಳು ದಶಕಗಳಲ್ಲಿ ಆಳಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ, ತಮಿಳ್ನಾಡಿನ ವೈಚಾರಿಕ ಎಚ್ಚರ ಮತ್ತು ನಿಲುವು ದೊಡ್ಡದೆಂದೇ ಹೇಳಬೇಕು; ಅದು ಎದ್ದುಕಾಣುವುದೂ ನಿಜ. ಆದರೂ ಅಲ್ಲಿಯೂ ಮೌಢ್ಯ ತನ್ನ ಬಾಹುಗಳನ್ನು ಚಾಚಿ ಜನ ಸಮೂಹವನ್ನು ಹಿಡಿದಿಡುವುದು ಅಷ್ಠ ನಿಜ.
ಅಲ್ಲಿಯೂ ದೇವಮಾನವರಿದ್ದಾರೆ; ವಿಶ್ವಗುರುಗಳಿದ್ದಾರೆ. ಕುಣಿಯುವ, ನರ್ತಿಸುವ, ಹಾಡುವ, ಪಟಪಟ ಮಾತನಾಡುವ, ಜನರನ್ನು ಸಮ್ಮೋಹನಗೊಳಿಸುವ, ಶಿವರಾತ್ರಿಯನ್ನು ಮಂಪರು ಕವಿದ ರಾತ್ರಿಯಾಗಿ ಮಾಡುವ ಪವಾಡ ಪುರುಷರೂ ಇದ್ದಾರೆ. ಇದನ್ನು ವಿಶ್ವದ ಎಂಟನೇ ಸೋಜೆಗ ಎಂದು ಕರೆದರೆ ವಿಶ್ವದ ಸೋಜಿಗಗಳಿಗೆ ಅಪಮಾನ ಮಾಡಿದಂತೆ.
ಇಡೀ ನಾಡಿಗೆ ನಾಡೇ ʼಎಚ್ಚರʼವಾಗಿರುವ, ಅಕ್ಷರಸ್ಥರೇ ತುಂಬಿರುವ, ಬೀಸಿಬರುವ ಗಾಳಿಗೆ ಮೇಲೇಳುವ ಅಲೆಗಳಂತೆ ಸದಾ ಹೊಸ ಬೆಳವಣಿಗೆಗಳಿಗೆ ತನ್ನನ್ನು ತೆರೆದುಕೊಳ್ಳುವ ಕೇರಳದಲ್ಲಿ ನಾರಾಯಣ ಗುರು ಮಾಡಿದ ಸಾಧನೆ, ಅವರು ಹಿಂದುಳಿದ ಸಮುದಾಯಗಳಲ್ಲಿ ಮೂಡಿಸಿದ ಎಚ್ಚರ ಸಣ್ಣದೇನಲ್ಲ. ವ್ಯಂಗ್ಯ ಎಂದರೆ ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು, ಸಾಗರದಂತೆ ಉಕ್ಕಿಬರುವ ಭಕ್ತರನ್ನು ತಡೆಯಲು ಕಮ್ಮುನಿಸ್ಟ್ ಸರ್ಕಾರಕ್ಕೂ ಸಾಧ್ಯವಾಗಿಲ್ಲ.
ಕರ್ನಾಟಕದ ಸ್ಥಿತಿಯನ್ನು ನೋಡಿ: 12ನೇ ಶತಮಾನದಷ್ಟು ಹಿಂದೆಯೇ ನಡೆದ ವೈಚಾರಿಕ ಚಳವಳಿ, ಹುಟ್ಟುತ್ತಿದ್ದಂತೆಯೇ ಕೊನೆಯಾಯಿತು. ಮೂಲಭೂತವಾದ ಎನ್ನುವುದು ಅಲ್ಲಾಡದೆ ನಿಂತು ಎಲ್ಲ ಮೌಢ್ಯಗಳಿಗೆ ದಾರಿಮಾಡಿಕೊಟ್ಟಿತು. ಹತ್ತನೇ ಶತಮಾನದ ಪಂಪ, 12ನೇ ಶತಮಾನದ ವಚನಕಾರರು, ಮತ್ತು 20ನೇ ಶತಮಾನದ ಕುವೆಂಪು ಮೊಳಗಿಸಿದ ವಿಶಮಾನವ ತತ್ವ ಹೇಳ ಹೆಸರಿಲ್ಲದಂತೆ ಕರ್ನಾಟಕದಲ್ಲಿ, ಅಷ್ಟೇಕೆ, ಇಡೀ ಭಾರತದಲ್ಲಿ ಕಣ್ಮುಚ್ಚಿತು. ಇವತ್ತಿಗೂ ನಮ್ಮಲ್ಲಿ ಧರ್ಮಕ್ಷೇತ್ರಗಳಿವೆ. ಪ್ರಸಿದ್ಧ ಮಠಗಳಿವೆ; ದೇವಾಲಯಗಳಿವೆ. ಅವರವರ ನಂಬಿಕೆ ಅವರವರಿಗೆ ಎಂದು ಹೇಳುತ್ತ ರಾಜಕಾರಣಿಗಳು, ಸರ್ಕಾರಗಳು ಈ ತೆರೆಮರೆಯ ಶಕ್ತಿಗಳಿಗೆ ಹಾಲೆರೆಯುತ್ತಲೇ ಇವೆ. ಸ್ವತಃ ತಾವೇ ಇಂಥ ಕ್ಷೇತ್ರಗಳಿಗೆ ಭೇಟಿನೀಡುವ ರಾಜಕಾರಣಿಗಳು ಪರೋಕ್ಷವಾಗಿ ಭಕ್ತಿಯ ಹೆಸರಿನಲ್ಲಿ ಮೌಢ್ಯವನ್ನು ಬಿತ್ತುತ್ತ, ಬೆಳೆಯುತ್ತ, ಸಮೃದ್ಧ ಕರ್ನಾಟಕವನ್ನು ಕಾಣುತ್ತಿದ್ದಾರೆ.

ಭಾರತದಲ್ಲಿ ಇವತ್ತು ದೇವಮಾನವರಾಗುವುದು ಸುಲಭ. ಯೋಗ, ಸಂಗೀತ, ಆಧ್ಯಾತ್ಮಿಕತೆಯ ಮಾತಿನ ಮುಸುಕು ಗೊತ್ತಿರಬೇಕು. ಅಲ್ಲೊಬ್ಬ ಇಲ್ಲೊಬ್ಬ ವೈಚಾರಿಕವಾಗಿ ಪ್ರಶ್ನೆಮಾಡುವ ಧೀರರನ್ನು ಈ ದೇವಮಾನವರು ತಮ್ಮ ಮಾತಿನ ಚಾಲೂಕುತನದಿಂದ ಬಗ್ಗುಬಡಿಯಬಲ್ಲರು. ಪಟಪಟ ಇಂಗ್ಲಿಷ್ ಮಾತನಾಡುವವರಂತೂ ವಿಶ್ವಗುರುಗಳಾಗಿ ಇಡೀ ಜಗತ್ತಿನಲ್ಲಿಯೇ ಸಂಚರಿಸಿ ಜನರಿಗೆ ಮಂಕುಬೂದಿ ಎರಚಬಲ್ಲರು. ಹೀಗೆ ಸಮ್ಮೋಹಿತರಾಗುವವರಲ್ಲಿ ವೈದ್ಯರು, ಟೆಕ್ಕಿಗಳು, ಪ್ರಾಧ್ಯಾಪಕರು ಹೀಗೆ ಎಲ್ಲರೂ ಸೇರಿದ್ದಾರೆ.
ಮಂಕುಬೂದಿ ಎರಚುವವರನ್ನು ಹದ್ದುಬಸ್ತಿನಲ್ಲಿಡಲು ಯಾವ ಸರ್ಕಾರಗಳು ಪ್ರಯತ್ನಿಸುವುದಿಲ್ಲ; ಯಾವ ಸಿದ್ಧಾಂತಿಗಳೂ ಮುಂದಾಗುವುದಿಲ್ಲ. ಸರ್ಕಾರಗಳನ್ನೂ ಮಣಿಸುವ ಶಕ್ತಿಯನ್ನು ದೇವಮಾನವರು ತಮ್ಮ ʼದೈವಿಕ ಬಲʼದಿಂದ ಪಡೆದಿದ್ದಾರೆ. ರಾಜಕಾರಣಿಗಳ ಭವಿಷ್ಯ ಹೇಳುವ ಮಠಾಧೀಶರು, ಕಪ್ಪು ಹಣವನ್ನು ತಮ್ಮಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳುವ ಧಾರ್ಮಿಕ ಕ್ಷೇತ್ರಗಳು ಎಲ್ಲೆಲ್ಲೂ ತಲೆ ಎತ್ತಿವೆ. ಸರ್ಕಾರಗಳು ಇಂಥವರ ಸೇವೆಯನ್ನು ಪಡೆಯುವ ಉದ್ದೇಶದಿಂದ ಇವರಿಗೆ ಶರಣಾಗುತ್ತ, ತಲೆಬಾಗುತ್ತ, ತಮ್ಮ ರಾಜಕೀಯ ದಾಳಗಳನ್ನು ಉರುಳಿಸುವುದರಲ್ಲಿ, ಚುನಾವಣೆಗಳನ್ನು ಗೆಲ್ಲುವುದರಲ್ಲಿ ನಿರತರಾಗಿದ್ದಾರೆ. ಜನರು ಮೂಢರಾದರೆ, ನಾಶವಾದರೆ, ಒಂದು ದೇಶವೇ ಹಳ್ಳ ಹಿಡಿದರೆ ಯಾರಿಗೇನಾಗಬೇಕು?
ಒಬ್ಬ ವಿಶ್ವಗುರು ಇತ್ತೀಚೆಗೆ ಕರ್ನಾಟಕಕ್ಕೆ ಕಾಲಿರಿಸಿದ. ಇವನ ಕೇಂದ್ರಕ್ಕಾಗಿ ನೂರಾರು ಜನ ರೈತರು ಭೂಮಿಯನ್ನು ಕಳೆದುಕೊಂಡರು. ಈ ಕೇಂದ್ರದ ಅಪಾಯವನ್ನು ರೈತರು ಅರಿಯಲಿಲ್ಲ. ಅವರು ಮುಗ್ಧರು ಮತ್ತು ಜಮೀನು ಮಾರುವುದರಿಂದ ತಾವು ಪಡೆಯುವ ಹಣ ತಮ್ಮನ್ನು ಸುಖ ಶಾಂತಿ ನೆಮ್ಮದಿಯಲ್ಲಿರುತ್ತದೆ ಎಂದು ಭಾವಿಸಿದರು. ಒಂದು ಸರ್ಕಾರಕ್ಕೂ ಇದರ ಅಪಾಯ ತಿಳಿಯಲಿಲ್ಲವೇ? ಪಕ್ಕದ ತಮಿಳುನಾಡನ್ನು, ಶಿವರಾತ್ರಿಯ ಎಚ್ಚರದ ಕಣ್ಣಿನಿಂದ ನೋಡಿದ್ದರೂ ಇಂಥ ಕೇಂದ್ರಗಳ ಅಪಾಯ ತಿಳಿಯುತ್ತಿತ್ತು. ಅರ್ಥವಾದರೂ, ಅದನ್ನು ತಡೆಯುವ ಶಕ್ತಿಯಾಗಲಿ, ಇಚ್ಛೆಯಾಗಲಿ ಸರ್ಕಾರಕ್ಕೆ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಭಕ್ತರು, ಪ್ರವಾಸಿಗರು, ವಹಿವಾಟು, ಆದಾಯ-ಇಂಥ ಸಂಗತಿಗಳೇ ಮುಖ್ಯವಾಗಿ ಜನ ಪಾತಾಳಕ್ಕೆ ಬದ್ದರೂ ನಮಗೇನಾಗಬೇಕು ಎಂಬ ಧೋರಣೆ; ಜೊತೆಗೆ ವಿಶ್ವಗುರುಗಳು ಹಾಕುವ ಮೋಡಿ, ಹಣದ ವ್ಯವಹಾರ.

ನಮ್ಮ ಸಂವಿಧಾನ ಜಾತ್ಯತೀತ ತತ್ವವನ್ನು ಎಷ್ಟೇ ಗಟ್ಟಿಯಾಗಿ ಹೇಳಿದ್ದರೂ, ನಮ್ಮ ಚುನಾವಣೆಗಳು ಇವತ್ತಿಗೂ ನಡೆಯುತ್ತಿರುವುದು ಜಾತಿಗಳ ಆಧಾರದ ಮೇಲೆಯೇ. ಜಾತಿ ಎನ್ನವುದು ರಾಜಕಾರಣಿಗಳ ಅಧಿಕಾರ ಶಕ್ತಿಯಾಗಿದೆ. ಹೀಗಾಗಿ ಯಾವ ರಾಜಕಾರಣಿಯೂ ಜಾತಿಗಳನ್ನು ತೊಡೆದು ಹಾಕುವ, ಮಠಗಳನ್ನು ಮಲಗಿಸುವ ಮಾತಾಡಲಾರ. ಜಾತಿಗಳು ಇರಬೇಕು, ಜಾತಿಗೊಂದು ಪ್ರಭಾವೀ ಮಠ ಇರಬೇಕು, ಜನರಲ್ಲಿ ಮೌಢ್ಯ ಎನ್ನವುದು ಹೆಪ್ಪುಗಟ್ಟುತ್ತಲೇ ಇರಬೇಕು; ಜೊತೆಗೆ ಕಪ್ಪುಹಣ, ದೇವಮಾನವರು, ವಿಶ್ವಗುರುಗಳು, ಅವರ ಉಪದೇಶಗಳು, ವ್ಯವಹಾರಗಳು, ಹಿತವಚನಗಳು, ಆಶೀರ್ವಾದಗಳು ಎಲ್ಲವೂ ಇದ್ದಾಗಲೇ ದೇಶ ಸುರಕ್ಷಿತವಾಗಿರುತ್ತದೆ- ಇಂಥ ನಂಬಿಕೆಗಳು ಬಲವಾಗುತ್ತಲೇ ಇವೆ. ಸರ್ಕಾರಗಳನ್ನು, ರಾಜಕಾರಣಿಗಳನ್ನು ಪೊರೆಯುತ್ತಲೇ ಇವೆ.
ನಮ್ಮಲ್ಲಿ ಎಷ್ಟೊಂದು ಅಕಾಡೆಮಿಗಳಿವೆ. ವೈಚಾರಿಕ ಅರಿವನ್ನು ಜನರಲ್ಲಿ ಬೆಳೆಸಲು ಸಹಕಾರಿಯಾಗುವಂಥ ಚಟುವಟಿಕೆಗಳಿಗೆ ಮೀಸಲಾಗಬಲ್ಲ ವೈಚಾರಿಕ ಅಕಾಡೆಮಿಯನ್ನು ನಮ್ಮ ಕರ್ನಾಟಕ ಸರ್ಕಾರ ಯಾಕೆ ರಚಿಸಬಾರದು? ಇದು ಎಲ್ಲ ಅಕಾಡೆಮಿಗಳಂತೆ ಒಂದು ಅಕಾಡೆಮಿ ಆಗಬಹುದು, ಈ ಅಕಾಡೆಮಿಯಿಂದ ಜನರಲ್ಲಿ ವಿಚಾರ ಶಕ್ತಿ ಹೆಚ್ಚಲಾರದು ಎಂಬ ಮಾತುಗಳೂ ಬರಬಹುದು. ಆದರೆ ವೈಚಾರಿಕ ಚಿಂತನೆಯನ್ನು ಹೆಚ್ಚಿಸುವ ಕೃತಿಗಳು ಕನ್ನಡದಲ್ಲಿ ಹೆಚ್ಚು ಹೆಚ್ಚ ಪ್ರಕಟವಾದರೆ ಮುಂದಿನ ತಲೆಮಾರಿನ ಮಕ್ಕಳಾದರೂ ಅವುಗಳನ್ನು ಒಂದು ದಿನ ಓದಬಹುದು. ವೈಚಾರಿಕ ಚಿಂತನೆಗೆ ಇಂಬು ಕೊಡುವಂಥ ಚಟುವಟಿಕೆಗಳು ಒಂದಲ್ಲ ಒಂದು ಭಾಗದಲ್ಲಿ ಮೊಳಕೆಯೊಡೆದು, ಬಳ್ಳಿಯಾಗಿಯೊ, ಗಿಡವಾಗಿಯೊ ಚಿಗುರಬಹುದು. ಇಂಥಾ ಆಶಾಭಾವನೆಗಳೂ ಸರ್ಕಾರಕ್ಕೆ ಬೇಕಾಗುತ್ತವೆ; ಜನರಿಗೂ ಬೇಕಾಗುತ್ತವೆ.

ಇಂತಹ ವಿಚಾರಗಳಿಗೆ ನೀರೇರೆದು ಪೋಶಿಸುವ ಜನ ಹೆಚ್ಚಾಗಬೇಕು