ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಒಂದು ತಿಂಗಳು ವಾಹನ ಸಂಚಾರ ಸ್ಥಗಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಮನವಿಯನ್ನು ಹಾಸನ ಜಿಲ್ಲಾಡಳಿತ ತಿರಸ್ಕರಿಸಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ಕಾಮಗಾರಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಲು ನಾನಾ ಸಂಘಟನೆಗಳು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ನಂತರ ಜಿಲ್ಲಾಡಳಿತ ಮಾರ್ಚ್ 15ರಿಂದ ಏಪ್ರಿಲ್ ಅಂತ್ಯದವರೆಗೆ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಬದಲು ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲು ಉದ್ದೇಶಿಸಿದೆ.
ಗುಂಡ್ಯದಿಂದ ಸಕಲೇಶಪುರಕ್ಕೆ 40 ಕಿಮೀ ಇದ್ದು, ಸಕಲೇಶಪುರ ತಾಲೂಕಿನ ಮಾರನಹಳ್ಳಿವರೆಗೂ ರಸ್ತೆ ಕಾಮಗಾರಿ ಮುಗಿದಿದೆ. ಮಾರನಹಳ್ಳಿ, ದೊಡ್ಡತಪ್ಪಲು, ದೋಣಿಗಲ್ ಗ್ರಾಮದವರೆಗೂ ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಚತುಷ್ಪಥ ಕಾಂಕ್ರಿಟ್ ರಸ್ತೆ ನಿರ್ಮಾಣ ಸಂಬಂಧ ಈವರೆಗೆ 4.8 ಕಿಮೀ ರಸ್ತೆ ಕಾಮಗಾರಿ ಮುಗಿದಿದ್ದು, ದೊಡ್ಡತಪ್ಪಲು ಗ್ರಾಮದ ಬಳಿ ಭೂ ಕುಸಿತವಾಗುವ ಸಂಭಾವ್ಯ ಸ್ಥಳದಲ್ಲಿ ರಸ್ತೆ ಜತೆಗೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮೀಟರ್ ಬಳಸದ ಆಟೋಗಳು; ಕಣ್ಮುಚ್ಚಿ ಕುಳಿತ ಪೊಲೀಸರು
ಸಕಲೇಶಪುರ-ಶಿರಾಡಿ ಮಾರ್ಗದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ರಸ್ತೆ ಬಂದ್ ಮಾಡಿದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ, ವಹಿವಾಟು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಬಂದ್ ಆಗುತ್ತದೆ.