ಸಮಾಜದಲ್ಲಿ ಪೌರಕಾರ್ಮಿಕರೂ ಕೂಡ ಎಲ್ಲರಂತೆಯೇ ಮನುಷ್ಯರು. ಅವರನ್ನೂ ಕೂಡಾ ಎಲ್ಲರಂತೆ ಸಮಾನವಾಗಿ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಪ್ರಸ್ತುತ ಸಮಾಜದಲ್ಲಿ ಪೌರಕಾರ್ಮಿಕರನ್ನು ಹೀನಾಯವಾಗಿ ಬಳಸಿಕೊಳ್ಳುವ ಪರಿಪಾಠ ಹಿಂದೆ ಹೇಗಿತ್ತೋ ಈಗಲೂ ಹಾಗೇ ಮುಂದುವರಿಯುತ್ತಿರುವುದು ನಾಚಿಕೇಗೇಡಿನ ಸಂಗತಿ.
ಗ್ರಾಮ ಪಂಚಾಯಿತಿಯಿಂದ ಮಹಾನಗರ ಪಾಲಿಕೆವರೆಗಿನ ಎಲ್ಲ ಅಧಿಕಾರಿಗಳೂ ಕೂಡಾ ಪೌರಕಾರ್ಮಿಕರನ್ನು ಜೀತದಾಳುಗಳಂತೆ ಅಮಾನವೀಯವಾಗಿ ನಡೆಸಿಕೊಳ್ಳುತ್ತಲೇ ಇರುವುದು ಅವರ ದುಷ್ಟತನಕ್ಕೆ ಸಾಕ್ಷಿಯಾಗಿದೆ.
ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮಂಗಳವಾರ ಪೌರಕಾರ್ಮಿಕರಿಗೆ ಗಂಬೂಟ್, ಗ್ಲೌಸ್ ನೀಡದೆ ಬರಿಗಾಲಿನಲ್ಲಿ ಚರಂಡಿ ಸ್ವಚ್ಛ ಮಾಡಿಸಿದ ಅಮಾನವೀಯ ಘಟನೆ ನಡೆದಿದೆ. ಮದ್ದೂರು ತಾಲೂಕಿನ ನಗರಕೆರೆ ಗ್ರಾಮದಲ್ಲಿ ಓರ್ವ ಪಂಚಾಯಿತಿ ಸದಸ್ಯನೇ ಮುಂದೆ ನಿಂತು ಪೌರಕಾರ್ಮಿಕರನ್ನು ಬರಿಗಾಲಿನಲ್ಲಿ ಚರಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸುತ್ತಿದ್ದ ಸಂಗತಿ ಕಂಡುಬಂದಿದೆ.
ಪೌರಕಾರ್ಮಿಕರಿರುವುದೇ ಇಂತಹ ಕೆಲಸಗಳನ್ನು ಮಾಡಲು ಎಂದು ಭಾವಿಸಿದ್ದ ಈ ಸದಸ್ಯ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೂಡಾ ಆಗಿದ್ದು, ಪೌರಕಾರ್ಮಿಕರನ್ನು ಮನುಷ್ಯರೆಂದು ಕಾಣದ ಈತ ಸದಸ್ಯನಾಗಲೂ ನಾಲಾಯಕ್ ಎಂದೇ ಹೇಳಬೇಕಾಗುತ್ತದೆ. ಪೌರಕಾರ್ಮಿಕರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಒಂದೆರಡು ದಿನ ಬೀದಿ ಕೆಲಸ ಮಾಡದಿದ್ದರೂ ಗ್ರಾಮಗಳು ಗಬ್ಬೆದ್ದು ನಾರುತ್ತವೆ. ಅಂಥವರನ್ನು ಮನುಷ್ಯರಂತೆ ಪರಿಗಣಿಸಿ ಗೌರವದಿಂದ ಕಾಣಬೇಕಾದ ಜನಪ್ರತಿನಿಧಿಗಳೇ ಇಂದು ಅವರನ್ನು ತುಚ್ಚವಾಗಿ ಕಾಣುತ್ತಿರುವುದಕ್ಕೆ ನಗರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಈ ಅಮಾನವೀಯ ಘಟನೆಯೇ ಸಾಕ್ಷಿ.
ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪೌರಕಾರ್ಮಿಕರ ಇಂತಹ ಅಮಾನವೀಯ ದುಃಸ್ಥಿತಿಗೆ ದೂಡಿದ ಪಂಚಾಯಿತಿ ಸದಸ್ಯ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಗಂಬೂಟ್, ಗ್ಲೌಸ್ ಸೇರಿದಂತೆ ಇನ್ನಿತರ ಅಗತ್ಯ ಪರಿಕರಗಳನ್ನು ನೀಡಬೇಕು. ಚರಂಡಿಗೆ ಇಳಿಸದೆ ಕೆಲಸ ಮಾಡಿಸಬೇಕು. ಆ ಮೂಲಕ ಪೌರಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಬೇಕಿದೆ.
ಇಂದು ನಗರಕೆರೆ ಪಂಚಾಯಿತಿಯಲ್ಲಿ ನಡೆದಂತಹ ಅಮಾನವೀಯ ಘಟನೆ ಇನ್ನೂ ಹಲವು ಪಂಚಾಯಿತಿಗಳಲ್ಲಿ ಪ್ರತಿದಿನ ನಡೆಯುತ್ತಿರುತ್ತದೆ. ಅಲ್ಲೂ ಕೂಡ ಪೌರಕಾರ್ಮಿಕರಿಗೆ ಗಂಬೂಟ್, ಗ್ಲೌಸ್ ಇನ್ನಿತರ ಪರಿಕರಗಳನ್ನು ನೀಡದೆ ಕೆಲಸ ಮಾಡಿಸುತ್ತಿರುತ್ತಾರೆ. ಚರಂಡಿಯಲ್ಲಿ ಮೊಳೆ, ಗಾಜು, ಕಲ್ಲಿನ ಚೂರು ಸೇರಿದಂತೆ ಹಲವಾರು ಅಪಾಯಕಾರಿ ವಸ್ತುಗಳು ಇರುತ್ತವೆ. ಪೌರಕಾರ್ಮಿಕರು ಬರಿಗಾಲಲ್ಲಿ ಚರಂಡಿಗೆ ಇಳಿದರೆ ಅಪಾಯಕಾರಿ ವಸ್ತುಗಳು ಕಾಲಿಗೆ ಚುಚ್ಚಿ ಗಾಯಗಳಾಗುತ್ತವೆ. ಆ ಗಾಯಗಳು ಮಾಯದೆ ಗ್ಯಾಂಗ್ರೀನ್ ಆಗಿ, ಕೊನೆಗೆ ಕಾಲು ಕತ್ತರಿಸಿಕೊಂಡು ಉಸಿರು ಚೆಲ್ಲಿದ ಹಲವು ಪೌರಕಾರ್ಮಿಕರನ್ನು ನೋಡಿದ್ದೇವೆ. ಚರಂಡಿ, ಮ್ಯಾನ್ ಹೋಲ್‌ಗಳಲ್ಲಿರುವ ಅಪಾಯಕಾರಿ ಕ್ರಿಮಿಗಳು ಪೌರಕಾರ್ಮಿಕರ ದೇಹ ಹೊಕ್ಕು ನಾನಾ ರೋಗಗಳಿಂದ ಬಳಲುತ್ತಿರುವ ಉದಾಹರಣೆಗಳು ಸಾಕಷ್ಟಿವೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಸಿಲಿನ ತಾಪಕ್ಕೆ ಬರಿದಾದ ಕೆರೆಕಟ್ಟೆ; ನಾಗರಹೊಳೆಯಲ್ಲಿ ಪ್ರಾಣಿಗಳ ದಾಹ ಇಂಗಿಸಲು ಟ್ಯಾಂಕರ್ ಮೂಲಕ ನೀರು
ಪೌರಕಾರ್ಮಿಕರನ್ನು ಇನ್ನಾದರೂ ಗೌರವದಿಂದ ಕಾಣುವಂತಹ ಸಮಸಮಾಜ ನಿರ್ಮಾಣವಾಗಬೇಕಾಗಿದೆ. ಈ ಕೂಡಲೇ ನಗರಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಗಂಬೂಟ್, ಗ್ಲೌಸ್, ಸಮವಸ್ತ್ರ, ಉಪಹಾರದ ವ್ಯವಸ್ಥೆ ಮಾಡಿ ಅವರನ್ನು ಮನುಷ್ಯರಂತೆ ಕಾಣುವುದು ನಾಗರಿಕ ಸಮಾಜದ ಕರ್ತವ್ಯ. ಪೌರಕಾರ್ಮಿಕರಿಗೆ ಗಂಬೂಟ್ ಹಾಗೂ ಗ್ಲೌಸ್ ನೀಡದೇ ಅಮಾನವೀಯವಾಗಿ ನಡೆಸಿಕೊಂಡಿರುವ ನಗರಕೆರೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸದಸ್ಯರ ವಿರುದ್ಧ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಅವರು ಕ್ರಮ ಜರುಗಿಸಬೇಕೆಂದು ಜಾಗೃತ ಕರ್ನಾಟಕದ ನಗರಕೆರೆ ಜಗದೀಶ್ ಒತ್ತಾಯಿಸಿದ್ದಾರೆ.
