ತುಂಗಾಭದ್ರ ಜಲಾಶಯದಿಂದ ರಾಯಚೂರಿಗೆ ನೀರು ಹರಿಸಲು ರಾಯಚೂರು ಜಿಲ್ಲಾಡಳಿತವು ಕಾಲುವೆಗಳ ಆಸುಪಾಸಿನಲ್ಲಿ ಐಪಿಸಿ ಸೆಕ್ಷನ್ 144ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಜೂನ್ ಮೂರನೇ ವಾರ ಕಳೆದರೂ ರಾಜ್ಯದಲ್ಲಿ ಮಾನ್ಸೂನ್ ಮಳೆಯ ಸುಳಿವಿಲ್ಲ. ರಾಜ್ಯದ ನದಿಗಳು ಬತ್ತುತ್ತಿದ್ದು, ಹಲವೆಡೆ ನೀರಿನ ಅಭಾವ ಸೃಷ್ಠಿಯಾಗಿದೆ. ಜಲಾಶಯಗಳಲ್ಲಿ ಇರುವ ನೀರನ್ನು ಕುಡಿಯುವ ಉದ್ದೇಶಕ್ಕಷ್ಟೇ ಬಳಸಲು ನಿರ್ಧರಿದ್ದು, ಕೃಷಿಗೆ ನೀರಿಗೆ ಪೂರೈಕೆ ಇಲ್ಲವೆಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ರಾಯಚೂರಿನ ಕುಡಿಯುವ ನೀರು ಪೂರೈಸಲು ತುಂಗಭದ್ರ ಎಡದಂಡೆ ಕಾಲುವೆಗೆ (ಟಿಎಲ್‌ಬಿಸಿ) ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಕಾಲುವೆ ಉದ್ದಕ್ಕೂ ನೀರನ್ನು ಬೇರೆಡೆಗೆ ತಿರುಗಿಸದಂತೆ ತಡೆಯುವ ಉದ್ದೇಶದಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಷೇಧಾಜ್ಞೆಯು ಜೂನ್ 27ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ.
ತುಂಗಾಭದ್ರ ಅಣೆಕಟ್ಟೆಯಿಂದ ನೀರು ಪೂರೈಸುವುದರ ಜೊತೆಗೆ, ಕೃಷ್ಣಾ ನದಿಯಿಂದಲೂ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
“ತುಂಗಾಭದ್ರ ಅಣೆಕಟ್ಟಿನಿಂದ ಹರಿಸುವ ನೀರು ಟಿಎಲ್‌ಬಿಸಿ ಮೂಲಕ ಸುಮಾರು 130 ಮೈಲುಗಳವರೆಗೆ ಹರಿಯುತ್ತದೆ. ಮೊದಲು ಬಂಗಾರಪ್ಪ ಕೆರೆಯಲ್ಲಿರುವ ಬ್ಯಾಲೆನ್ಸಿಂಗ್ ಜಲಾಶಯದಲ್ಲಿ ನೀರು ಸಂಗ್ರಹಗೊಂಡು ನಂತರ ರಾಂಪುರ ಕೆರೆ ಜಲಾಶಯಕ್ಕೆ ಹರಿಸಲಾಗುವುದು. ನಂತರ ರಾಯಚೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ ನೀರು ಪೂರೈಕೆ ಮಾಡಲಾಗುವುದು” ಎಂದು ಜಿಲ್ಲಾಡಳಿತ ಹೇಳಿದೆ.
“ಕಾಲುವೆಯುದ್ದಕ್ಕೂ ನಿಷೇಧಾಜ್ಞೆ ಜಾರಿಯಲ್ಲಿದೆ. ಗಸ್ತು ತಿರುಗಲು ಎಂಜಿನಿಯರ್‌ಗಳನ್ನು ನಿಯೋಜಿಸಲಾಗಿದೆ. ಆದರೂ, ಜನರು ಗೇಜ್‌ಗಳನ್ನು ಬಳಸಿ ನೀರು ತಿರುಗಿಸುವ ಸಾಧ್ಯತೆಗಳಿವೆ” ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯ್ಕ ಹೇಳಿದ್ದಾರೆ.