ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ, ಪಕ್ಷಿಗಳಿಗೆ ಕೃತಕವಾಗಿ ತಂಪನ್ನೆರೆಯುವ ವ್ಯವಸ್ಥೆ ಕೈಗೊಳ್ಳಲಾಗಿದೆ.
ಫೆಬ್ರವರಿ ತಿಂಗಳಿನ ಮೊದಲಾರ್ದ ವಾರಗಳಿಂದಲೇ ಬಿಸಿಲಿನ ಝಳ ಹೆಚ್ಚಿದ್ದು, ಉರಿ ಬಿಸಿಲಿನ ಬಿಸಿ ತಟ್ಟಿದ್ದೆ. ಈಗಂತೂ ಮೈಕೊಡಲು ಸಾಧ್ಯವಿಲ್ಲ ಅನ್ನುವಷ್ಟು ತಾಪ ಹೆಚ್ಚಿರುವುದರಿಂದ ಮೃಗಾಲಯದ ಪ್ರಾಣಿ, ಪಕ್ಷಿಗಳಿಗೆ ಕೃತಕವಾಗಿ ತಂಪನ್ನೆರೆಯುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
ಸಿಬ್ಬಂದಿಗಳು ಜೆಟ್ ಅಳವಡಿಸಿ ಸ್ಪ್ರಿಂಕ್ಲರ್ ಮೂಲಕ ನೀರನ್ನು ಮಳೆಯ ಮಾದರಿಯಲ್ಲಿ ಚಿಮುಕಿಸಿ ತಂಪಿನ ವಾತಾವರಣ ನಿರ್ಮಿಸುತ್ತಿದ್ದಾರೆ.
ಮೃಗಾಲಯದ 45 ಕಡೆ ಸ್ಪ್ರಿಂಕ್ಲರ್ ಮೂಲಕ ಸುಮಾರು ನೂರಾರು ಮೀಟರ್ ಗಳಷ್ಟು ದೂರ ನೀರು ಚಿಮ್ಮುವಂತೆ ಮಾಡಿ ಪ್ರಾಣಿಗಳು ಮೈ ಒಡ್ದುವಂತೆ, ಸುತ್ತಲ ಪರಿಸರ ತಂಪಾಗುವಂತೆ ಕ್ರಮ ಕೈಗೊಂಡು.ಪ್ರಾಣಿಗಳಿಗೆ ನೀಡುವ ಆಹಾರದಲ್ಲಿ ಕಲ್ಲಂಗಡಿ, ಐಸ್ ನಲ್ಲಿರಿಸಿದ ಹಣ್ಣುಗಳನ್ನು ನೀಡಿ ದೇಹ ತಂಪಾಗಿರುವಂತೆ ನಿಗಾ ವಹಿಸಲಾಗಿದೆ.
ಮೃಗಾಲಯದಲ್ಲಿನ ಆನೆ, ಸಿಂಹ, ಹುಲಿ, ಕರಡಿ, ಗೊರಿಲ್ಲ, ಜೀಬ್ರಾ, ಜಿರಾಫೆ ಸೇರಿದಂತೆ ಪ್ರಾಣಿಗಳಿಗೆ ಬಿಸಿಲಿನ ತಾಪ ತಟ್ಟದ ರೀತಿ ವ್ಯವಸ್ಥೆ ಸಿದ್ದವಾಗಿದ್ದು, ಸುತ್ತಲಿನ ಉದ್ಯಾನವನ ಒಣಗದಂತೆ ನೋಡಿಕೊಳ್ಳಲಾಗುತಿದೆ. ಇದರಿಂದ ಪ್ರಾಣಿಗಳಸ್ಟೇ ಅಲ್ಲದೆ ಮೃಗಾಲಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೂ ಅನುಕೂಲವಾಗಿದೆ.
ಮೃಗಾಲಯ ನಿರ್ವಾಹಕ ಅಧಿಕಾರಿ ರಂಗಸ್ವಾಮಿ ಮಾತನಾಡಿ “ರಾಜ್ಯದಲ್ಲೂ ಹಕ್ಕಿ ಜ್ವರದ ಭೀತಿ ಇರುವುದರಿಂದ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಿದ್ದು,ಪಕ್ಷಿಗಳಿಗೆ ಯಾವುದೇ ತೊಂದರೆ ಆಗದಂತೆ ತೀವ್ರ ನಿಗಾ ವಹಿಸಲಾಗಿದೆ. ಪ್ರಾಣಿ ಪಾಲಕರು ಒಂದು ಪಕ್ಷಿ ಮನೆಯಿಂದ ಇನ್ನೊಂದು ಮನೆಗೆ ಹೋಗುವಂತಿಲ್ಲ. ಅಗತ್ಯವಾದ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಪಕ್ಷಿಗಳ ಇಕ್ಕೆ ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳಿಸಿಕೊಡಲಾಗಿದೆ. ನಮ್ಮಲ್ಲಿ ಅಂತಹ ಪ್ರಕರಣಗಳು ಇಲ್ಲಿವರೆಗೂ ಕಂಡು ಬಂದಿಲ್ಲ. ಮಾಂಸಾಹಾರಿ ಪ್ರಾಣಿಗಳಿಗೆ ತರುವ ಚಿಕನ್, ಮಾಂಸವನ್ನು ಪೊಟಾಷಿಯಂ ಪರಮೋನೈಟ್ ನಿಂದ ತೊಳೆದು ಕೊಡಲಾಗುತ್ತದೆ. ರೋಗಗ್ರಸ್ತ ಕೋಳಿ ಮಾಂಸ ಕೊಡುವುದಿಲ್ಲ. ನಮ್ಮಲ್ಲಿರುವ ಪಕ್ಷಿಗಳಿಗೆ ಯಾವುದೇ ರೋಗ ರುಜಿನಗಳು ಕಂಡು ಬಂದಿಲ್ಲ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಿಸಿಲಿನ ತಾಪಕ್ಕೆ ಬರಿದಾದ ಕೆರೆಕಟ್ಟೆ; ನಾಗರಹೊಳೆಯಲ್ಲಿ ಪ್ರಾಣಿಗಳ ದಾಹ ಇಂಗಿಸಲು ಟ್ಯಾಂಕರ್ ಮೂಲಕ ನೀರು
ಜಿಂಕೆ,ಕಡವೆಗಳಿಗೆ ಅಲ್ಲಲ್ಲಿ ನೀರಿನ ಕೊಳ,ಕೆಸರಿನ ಕೊಳಗಳ ನಿರ್ಮಾಣ ಮಾಡಲಾಗಿದೆ ನೆರಳಿಗೆ ಆಶ್ರಯಕ್ಕೆ ಶೆಡ್ ನಿರ್ಮಾಣ ಮಾಡಲಾಗಿದೆ. ಒಟ್ಟಾರೆ ಬೇಸಿಗೆ ನಿರ್ವಹಣೆಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡುವ ಕೆಲಸವನ್ನ ನಮ್ಮ ಸಿಬ್ಬಂದಿಗಳ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳು ಶಾಲಾ ಕಾಲೇಜುಗಳ ಪರೀಕ್ಷಾ ಸಮಯವಾಗಿದ್ದು, ಪ್ರವಾಸಿಗರಿಲ್ಲದೆ ಬಣ ಗುಡುತ್ತಿರುವ ಮೈಸೂರಿನ ಮೃಗಾಲಯ. ಫೆಬ್ರವರಿ, ಮಾರ್ಚ್ ನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಪರೀಕ್ಷೆ ಮುಗಿದು ರಜಾ ದಿನಗಳ ಆರಂಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ” ಎಂದು ಮಾಹಿತಿ ನೀಡಿದರು.