ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುವಂತೆ ಗಮನಾರ್ಹ ಸಾಧನೆ ಮಾಡಿರುವ ಪರಶುರಾಮ್ ಅವರು ಎಸ್ ಕೆ ಕರೀಂಖಾನ್ ಸೌಹಾರ್ದ ಪ್ರಶಸ್ತಿಗೆ ಹಾಗೂ ಯುವ ಬರಹಗಾರ ವಿಶಾಲ್ ಮ್ಯಾನ್ಸರ್ ಮತ್ತು ಸಂಘಮಿತ್ರೆ ನಾಗರಘಟ್ಟ ಅವರು ಈ ಬಾರಿಯ ಅಮೃತ ಕಾವ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಸಕಲೇಶಪುರದ ಬೆಳ್ಳೇಕೆರೆಯ ಜೈ ಕರ್ನಾಟಕ ಸಂಘದ ವತಿಯಿಂದ ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಘುನಾಥ್ ಚ.ಹ ಮಾತನಾಡಿ, “ಸಿದ್ಧಾಂತ, ಜಾತಿ, ಬಣ್ಣ ಸ್ಥಾನಮಾನಗಳ ಹೆಸರಿನಲ್ಲಿ ಸಮಾಜ ವಿಂಗಡಣೆಯಾಗುತ್ತಿದೆ. ಎಲ್ಲಾ ರೀತಿಯ ವೈರುಧ್ಯಗಳನ್ನೂ ಮೆಟ್ಟಿ ನಿಂತು ಸಮಾಜದಲ್ಲಿ ಸೌಹಾರ್ದಯುತ ಜೀವನ ನಡೆಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು” ಎಂದರು.
“ಸಮಾಜವನ್ನು ಸರಿಪಡಿಸುವ ವಿವೇಕ ಪರಂಪರೆಯನ್ನು ಕನ್ನಡ ಸಾಹಿತ್ಯ ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿತ್ತು. ಆದರೆ ಇಂದು ಲೇಖಕನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಕಾಲ ಬಂದೊದಗಿದೆ. ನಮ್ಮ ತುತ್ತೂರಿ ನಾವು ಊದಿಕೊಳ್ಳದೇ ಸಮಾಜಕ್ಕೆ ಬೇಕಾಗಿರುವುದನ್ನು ಮಾಡಬೇಕು ಎಂದು ಲಂಕೇಶರು ತಮ್ಮ ಕವನಗಳಲ್ಲಿ ಬರೆಯುತ್ತಿದ್ದರು. ಇಂದು ನಾಡಿನ ಸಂಸ್ಕೃತಿ ಕಾಪಾಡುತ್ತಿದ್ದೇವೆ ಎಂದು ಕೆಲವು ಸಂಸ್ಥೆಗಳು ಸರ್ಕಾರದ ಅನುದಾನ ಪಡೆದುಕೊಂಡು ತಮ್ಮ ತುತ್ತೂರಿ ತಾವೇ ಊದಿಕೊಳ್ಳುತ್ತಿರುವಾಗ, ಜೈ ಕರ್ನಾಟಕ ಸಂಘಟನೆ ಯಾವ ಪ್ರಚಾರವೂ ಇಲ್ಲದೇ ಸದ್ದಿಲ್ಲದೇ ಮಾಡುತ್ತಿರುವ ಕೆಲಸಗಳು ಮಾದರಿಯಾಗಿವೆ” ಎಂದರು.

ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮಾತನಾಡಿ, ರಕ್ಷಿದಿಯ ಪೂರ್ಣಚಂದ್ರ ತೇಜಸ್ವಿ ಬಯಲು ರಂಗಮಂದಿರವನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ರಂಗಮಂದಿರದ ಬಳಿಯೇ ಕುವೆಂಪು ಅವರ ಪುತ್ಥಳಿ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ನಾವೆಲ್ಲಾ ಕುವೆಂಪು ಅವರ ಸಿದ್ಧಾಂತದಲ್ಲಿ ಬೆಳೆದು ಬಂದವರು. ಅವರ ಮಂತ್ರ ಮಾಂಗಲ್ಯದಂತೆ ನಾನು ಹಾಗೂ ನನ್ನ ಕೆಲ ಸ್ನೇಹಿತರು ರಾಹುಕಾಲದಲ್ಲಿ ಸರಳ ವಿವಾಹ ಆದೆವು. ಸುಖ ಸಂಸಾರ ನಡೆಸುತ್ತಿದ್ದೇವೆ. ಇಂದಿಗೂ ಸಹ ಎಷ್ಟೋ ಕುಟುಂಬಗಳು ಆಸ್ತಿ ಮಾರಾಟ ಮಾಡಿ, ಲಕ್ಷಾಂತರ ಸಾಲ ಮಾಡಿ ಅದ್ಧೂರಿ ವಿವಾಹ ಮಾಡುವುದನ್ನು ನೋಡುತ್ತಿದ್ದೇವೆ. ಕುವೆಂಪು ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡರೆ, ಕೆಲವು ವಿಷಯಗಳಲ್ಲಾದರೂ ಅದನ್ನು ಅನುಸರಿಸುವುದು ಅಗತ್ಯವಾಗಿದೆ” ಎಂದರು.
ಹಿರಿಯ ರಂಗಕರ್ಮಿ ಎಚ್.ಆರ್. ಸ್ವಾಮಿ ಮಾತನಾಡಿ, “ಎಸ್.ಕೆ. ಕರೀಂಖಾನ್ ಅವರ ಸರಳತೆ, ಸ್ನೇಹದ ಪರಿಯನ್ನು ಮಕ್ಕಳಿಗೆ ಕಲಿಕೆಯ ಸಂಸ್ಕೃತಿ ಅಭ್ಯಾಸ ಮಾಡಿಸಿದರೆ ಅವರು ನಾಲ್ಕಾರು ಭಾಷೆ ಕಲಿಯಬಲ್ಲರು. ದೊಡ್ಡವರು ಮೊಬೈಲ್ ಹಿಡಿದುಕೊಂಡು, ಟಿವಿ ಸೀರಿಯಲ್ ನೋಡಿಕೊಂಡು ಮಕ್ಕಳಿಗೆ ಮಾತ್ರ ಓದು ಎಂದು ಹೇಳುತ್ತಿದ್ದೇವೆ. ಈ ಕಾರಣಗಳಿಂದಾಗಿ ಮಕ್ಕಳು ಓದುತ್ತಿಲ್ಲ. ಬೇರೆ ಭಾಷೆಗಳನ್ನು ಕಲಿಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು
ಕವಿ ಸುಬ್ಬು ಹೊಲೆಯಾರ್ ಮಾತನಾಡಿ, “ಈ ಪ್ರಶಸ್ತಿ ಸಮಾರಂಭ ಕೇವಲ ಗೌರವಾನ್ವಿತ ಕಾರ್ಯಕ್ರಮವಲ್ಲ. ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಜಾಗೃತಿಯ ಮಹತ್ವದ ವೇದಿಕೆ . ನಿಜವಾದ ಸೌಹಾರ್ದಕ್ಕೆ ಬದ್ಧ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ನಮ್ಮ ನೈತಿಕ ಜವಾಬ್ದಾರಿ” ಎಂದರು.
ಇದನ್ನೂ ಓದಿ: ಸಕಲೇಶಪುರ | ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆ ವಿರೋಧಿಸಿ ದಸಂಸದಿಂದ ಪ್ರತಿಭಟನೆ
ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸಾದ್ ರಕ್ಷಿದಿ, ಹೆತ್ತೂರು ನಾಗರಾಜ್, ಮಂಜು ಬನವಾಸೆ, ರಾಧೆ ರಕ್ಷಿದಿ, ಕವಿತಾ ಸುಬ್ಬಯ್ಯ, ಬಿ.ಆರ್.ವೆಂಕಟರಮಣ ಐತಾಳ್, ತನ್ವೀರ್ ಅಹಮದ್, ತೌಫೀಕ್ ಅಹಮದ್, ಕಸಾಪ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಸಂಘಮಿತ್ರೆ ನಾಗರಘಟ್ಟ, ವಿಶಾಲ್ ಮ್ಯಾಸರ್, ಎನ್.ಜಿ.ಸಚಿನ್, ಶಾಪ್ ಲಿಂಗರಾಜು ಇದ್ದರು.
