ಕಾಂಗ್ರೆಸ್‌-ಟಿಎಂಸಿ | ದೇಶದ ಹಿತಕ್ಕಾಗಿ ಒಗ್ಗೂಡುವರೇ ದಾಯಾದಿಗಳು?

Date:

Advertisements
ದೇಶದಲ್ಲಿ ಕೋಮು ರಾಜಕಾರಣ ನಡೆಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳು ಮಹಾ ಮೈತ್ರಿಗೆ ಮುಂದಾಗಿವೆ. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಡೆಯಲು ಹೊಂದಾಣಿಕೆಯೊಂದಿಗೆ ಲೋಕಸಭಾ ಚುನಾವಣೆ ಎದುರಿಸಲು ತಂತ್ರ ರೂಪಿಸುತ್ತಿವೆ. ಈ ತಂತ್ರದಲ್ಲಿ ಕಾಂಗ್ರೆಸ್‌-ಟಿಎಂಸಿ ಪರಸ್ಪರ ಒಗ್ಗೂಡುವರೇ ಎಂಬುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ

ಜೂನ್ 23ರಂದು ಬಿಹಾರದ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಮಹಾ ಸಮಾವೇಶವನ್ನು ಆಯೋಜಿಸಲಾಗಿದೆ. ಅಲ್ಲಿ, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಮುಖಾಮುಖಿಯಾಗಲಿದ್ದಾರೆ. ಮಮತಾ ಅವರು ಕಾಂಗ್ರೆಸ್‌ ತೊರೆದು ಟಿಎಂಸಿ ಕಟ್ಟಿದ ಮೇಲೆ ಎರಡೂ ಪಕ್ಷಗಳು ಪರಸ್ಪರ ಪ್ರತಿಪಕ್ಷಗಳಂತಿದ್ದವು. ಇದೀಗ, ಉಭಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದು, ಪರಸ್ಪರ ಅಭಿನಂದಿಸುವರೇ, ಅವರಿಬ್ಬರ ನಡುವಿನ ಸಂವಾದ, ಸಂವಹನ ಹೇಗಿರಲಿವೆ ಎಂಬುದು ಕುತೂಹಲ ಮೂಡಿಸಿದೆ.

ಇತ್ತೀಚಿನ ರಾಜಕೀಯ ಚರ್ಚೆಗಳ ಪ್ರಕಾರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ತಡೆಯಲು ಪಶ್ಚಿಮ ಬಂಗಾಳದ ಒಟ್ಟು 42 ಕ್ಷೇತ್ರಗಳಲ್ಲಿ ಟಿಎಂಸಿಗೆ ಕಾಂಗ್ರೆಸ್‌ ಬೆಂಬಲ ನೀಡಬೇಕು, ಯಾವುದೇ ಕ್ಷೇತ್ರ ಹಂಚಿಕೆಯನ್ನು ಕೇಳಬಾರದು ಎಂದು ಟಿಎಂಸಿ ನಿರೀಕ್ಷಿಸುತ್ತಿದೆ. ಪ್ರತಿಯಾಗಿ ಉಳಿದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಅನ್ನು ಟಿಎಂಸಿ ಬೆಂಬಲಿಸುತ್ತದೆ; ದೇಶಾದ್ಯಂತ ಪಕ್ಷವು ಭಾರೀ ಪ್ರಭಾವ ಹೊಂದಿರುವುದಾಗಿ ಟಿಎಂಸಿ ಹೇಳಿಕೊಳ್ಳುತ್ತಿದೆ.

ಪ್ರತಿಪಕ್ಷಗಳ ಮುಖ್ಯಸ್ಥರಾದ ಶರದ್ ಪವಾರ್, ಉದ್ಧವ್ ಠಾಕ್ರೆ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಎಂ ಕೆ ಸ್ಟಾಲಿನ್, ಹೇಮಂತ್ ಸೋರೇನ್, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಮ್ ಯೆಚೂರಿ, ಡಿ ರಾಜಾ ಮತ್ತು ದೀಪಂಕರ್ ಭಟ್ಟಾಚಾರ್ಯ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಸಮಾವೇಶದ ನೇತೃತ್ವ ವಹಿಸಿದ್ದು, ಲಾಲು ಪ್ರಸಾದ್ ಯಾದವ್ ಮಾರ್ಗದರ್ಶನ ನೀಡುತ್ತಿದ್ದಾರೆ.

Advertisements

ಪ್ರಮುಖವಾಗಿ ಖರ್ಗೆ, ರಾಹುಲ್‌ ಗಾಂಧಿ ಮತ್ತು ಬ್ಯಾನರ್ಜಿ ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳುತ್ತಿರುವುದರಿಂದ ಚರ್ಚೆಗಳು ಮತ್ತಷ್ಟು ಗಂಭೀರವಾಗಿರುತ್ತವೆ ಎನ್ನಲಾಗಿದೆ. ಏಕೆಂದರೆ, ಚರ್ಚೆಗಳಲ್ಲಿ ಪಕ್ಷಗಳ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವೂ ಒಂದಾಗಿರಲಿದೆ. ಈ ಇಬ್ಬರೂ, ಭಾರತದ ಅತಿದೊಡ್ಡ ಮತ್ತು ಎರಡನೇ ಅತಿದೊಡ್ಡ ವಿರೋಧ ಪಕ್ಷಗಳ ಮುಖ್ಯಸ್ಥರಾಗಿದ್ದಾರೆ.

ಸಂಸತ್‌ನಲ್ಲಿ ಕಾಂಗ್ರೆಸ್‌ 81 ಸದಸ್ಯರನ್ನು (ಲೋಕಸಭೆಯಲ್ಲಿ 50 ಮತ್ತು ರಾಜ್ಯಸಭೆಯಲ್ಲಿ 31) ಹೊಂದಿದೆ. ಟಿಎಂಸಿ 35 ಸದಸ್ಯರನ್ನು (23+12) ಹೊಂದಿದೆ. ಅಲ್ಲದೆ, ಉಭಯ ಪಕ್ಷಗಳು ಪರಸ್ಪರ ವಿಶ್ವಾಸ ಹೊಂದಿಲ್ಲ. ಆದರೂ, ವಿರೋಧಿ ಕೂಟದ ಭಾಗವಾಗುತ್ತಿವೆ. ಇದು ಅವರಿಬ್ಬರ ನಡುವಿನ ಹೊಂದಾಣಿಕೆಯ ಮಹತ್ವವನ್ನು ಹೆಚ್ಚಿಸಿದೆ.

ಪ್ರಸ್ತುತ, ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಸಂಬಂಧವು ಪ್ರತಿಕೂಲವಾಗಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಪಕ್ಷಗಳು ಈಗಾಗಲೇ ತೀವ್ರ ಸಂಘರ್ಷ ನಡೆಸುತ್ತಿವೆ. ಬಂಗಾಳದಲ್ಲಿ ಜುಲೈ 8ರಂದು ಪಂಚಾಯತ್ ಚುನಾವಣೆ ನಡೆಯಲಿದ್ದು, ಎರಡೂ ಪಕ್ಷಗಳು ಪರಸ್ಪರ ವಿರೋಧಿಗಳಾಗಿ ಸ್ಪರ್ಧಿಸುತ್ತಿವೆ. ಇದು ಜೂನ್ 23ರಂದು ನಡೆಯಲಿರುವ ಚರ್ಚೆ ಮತ್ತು ಪ್ರತಿಪಕ್ಷಗಳ ಏಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಅಲ್ಲದೆ, ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿದ್ದ ಏಕೈಕ ಕಾಂಗ್ರೆಸ್ ಶಾಸಕ ಬೈರಾನ್ ಬಿಸ್ವಾಸ್ ಅವರನ್ನೂ ಟಿಎಂಸಿ ತನ್ನತ್ತ ಸೆಳೆದುಕೊಂಡು, ಅಲ್ಲಿನ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಅಸ್ತಿತ್ವವೇ ಇಲ್ಲದಂತೆ ಮಾಡಿದೆ. ಇದರಿಂದಾಗಿ, ಟಿಎಂಸಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿತ್ತು. ಬಂಗಾಳದ ಕಾಂಗ್ರೆಸ್‌ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ಪಕ್ಷವು ಟಿಎಂಸಿಯೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳಬಾರದು ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಒತ್ತಾಯಿಸಿದ್ದರು.

ಜೊತೆಗೆ, ಕಾಂಗ್ರೆಸ್‌ ಹಿರಿಯ ವಕ್ತಾರ ಜೈರಾಮ್ ರಮೇಶ್‌ ಕೂಡ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದರು. “ಬಂಗಾಳದಲ್ಲಿ ಕಾಂಗ್ರೆಸ್‌ ಶಾಸಕರನ್ನು ಪಕ್ಷಾಂತರ ಮಾಡಿಸಿರುವ ಟಿಎಂಸಿ ಜನಾದೇಶಕ್ಕೆ ಸಂಪೂರ್ಣ ದ್ರೋಹ ಬಗೆದಿದೆ. ಟಿಎಂಸಿ ನಡೆಯು ಪ್ರತಿಪಕ್ಷಗಳ ಏಕತೆಗೆ ಧಕ್ಕೆಯುಂಟು ಮಾಡುತ್ತದೆ ಮತ್ತು ಬಿಜೆಪಿಯ ಉದ್ದೇಶಗಳನ್ನು ಪೂರೈಸಿದೆ” ಎಂದು ಕಿಡಿ ಕಾರಿದ್ದರು. ಅಲ್ಲದೆ, ಇತರ ನಾಯಕರೂ ಟಿಎಂಸಿ ವಿರುದ್ಧ ಆಕ್ರೋಶಗೊಂಡಿದ್ದರು.

ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಅಭೂತಪೂರ್ತ ಗೆಲುವು ಸಾಧಿಸಿತು. ಆ ವೇಳೆ. ಕಾಂಗ್ರೆಸ್‌ ಅನ್ನು ಉಲ್ಲೇಖಿಸದೇ, ರಾಹುಲ್‌ ಗಾಂಧಿ ಮತ್ತು ಖರ್ಗೆಗೆ ಯಾವುದೇ ಕ್ರೆಡಿಟ್‌ ನೀಡದೇ ರಾಜ್ಯದ ಮತದಾರರನ್ನು ಮಮತಾ ಅಭಿನಂದಿಸಿದ್ದರು.

ಇದೆಲ್ಲವೂ ದೇಶದ ಅತಿದೊಡ್ಡ ಮತ್ತು ಎರಡನೇ ಅತಿದೊಡ್ಡ ವಿರೋಧ ಪಕ್ಷಗಳ ನಡುವಿನ ಹಗೆತನವನ್ನು ಬಹಿರಂಗಪಡಿಸಿವೆ. ಇದೆಲ್ಲದರ ಹೊರತಾಗಿಯೂ, ಮಮತಾ ಅವರು ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಲು 42 ಕ್ಷೇತ್ರಗಳಲ್ಲಿಯೂ ಟಿಎಂಸಿಗೆ ಬೆಂಬಲ ನೀಡಬೇಕು. ಕಾಂಗ್ರೆಸ್‌ ಒಂದೇ ಒಂದು ಕ್ಷೇತ್ರದಲ್ಲಿಯೂ ಸ್ಪರ್ಧಿಸಬಾರದು ಎಂದು ಬಯಸುತ್ತಿದ್ದಾರೆ. ಒಂದು ವೇಳೆ ಹೀಗಾದಲ್ಲಿ, ಬಂಗಾಳದಲ್ಲಿ ಕಾಂಗ್ರೆಸ್‌ ತನ್ನನ್ನು ತಾನೇ ಸಂಪೂರ್ಣ ಸರ್ವನಾಶ ಮಾಡಿಕೊಳ್ಳಬೇಕಾಗುತ್ತದೆ.

ಈ ಸುದ್ದಿ ಓದಿದ್ದೀರಾ?: ಜನರ ಭಾವನೆಗಳಿಗೆ ಧಕ್ಕೆ; ‘ಆದಿಪುರುಷ್’ ಚಿತ್ರದ ವಿರುದ್ಧ ಕಾಂಗ್ರೆಸ್, ಎಎಪಿ, ಶಿವಸೇನೆ ಆಕ್ರೋಶ

ವಿರೋಧ ಪಕ್ಷಗಳ ನಡುವೆ ಸೀಟು ಹೊಂದಾಣಿಕೆಗಾಗಿ ಮಮತಾ ತಮ್ಮ ‘ಸೂತ್ರವನ್ನು’ ಘೋಷಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 200 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಬಾರದು. ಉಳಿದ 334 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷ, ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಂತಹ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌ ಬೇಷರತ್ತಾದ ಬೆಂಬಲವನ್ನು ನೀಡಬೇಕು ಎಂಬುದು ಮಮತಾರ ನಿರೀಕ್ಷೆಯಾಗಿದೆ.

2021ರಿಂದ ಮಮತಾ ಮತ್ತು ರಾಹುಲ್ ಒಮ್ಮೆಯೂ ಭೇಟಿಯಾಗಿಲ್ಲ. ಜುಲೈ 2021ರಲ್ಲಿ ನಡೆದ ಜನಪಥ್‌ನಲ್ಲಿ ಮಮತಾ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆಗ ರಾಹುಲ್ ಕೂಡ ಹಾಜರಿದ್ದರು. ಆ ಭೇಟಿಯ ಒಂದೆರಡು ತಿಂಗಳ ನಂತರ ಮಮತಾ ದೆಹಲಿಗೆ ಮತ್ತೆ ಭೇಟಿ ನೀಡಿದ್ದರು. ಆ ವೇಳೆ, ಪತ್ರಕರ್ತರು, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಬಗ್ಗೆ ಪ್ರಶ್ನಿಸಿದಾಗ, ‘ಅದು ನನ್ನ ಸಾಂವಿಧಾನಿಕ ಬಾಧ್ಯತೆಯೇ?’ ಎಂದಿದ್ದರು.

ಇದೀಗ, ಖರ್ಗೆ, ರಾಹುಲ್ ಮತ್ತು ಮಮತಾ ಪಾಟ್ನಾದಲ್ಲಿ ಭೇಟಿಯಾಗಲಿದ್ದಾರೆ. ಅವರು ಪರಸ್ಪರ ಅಂತರಾಳದಿಂದ ಮಾತನಾಡುತ್ತಾರೆಯೇ? ಪರಸ್ಪರ ಕೊಡು-ಕೊಳ್ಳುವಿಕೆಗಳ ಆಧಾರದ ಮೇಲೆ ಕಾರ್ಯತಂತ್ರ ರೂಪಿಸಲು ಹೆಜ್ಜೆ ಇಡುತ್ತಾರೆಯೇ? ಆಥವಾ ವಿರೋಧಿಗಳಾಗಿ ಉಳಿಯುತ್ತಾರೆಯೇ?

ಉತ್ತರಕ್ಕಾಗಿ ಜೂನ್ 23ರವರೆಗೂ ಕಾಯಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X