ಧರ್ಮಸ್ಥಳದ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣವು ಮರುತನಿಖೆಯಾಗಬೇಕು ಎಂದು ಆಗ್ರಹಿಸಿರುವ ನಟ ಚೇತನ್ ಅಹಿಂಸಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈವರೆಗೆ 346 ಅಸಹಜ, ನಿಗೂಢ ಸಾವಾಗಿರುವ ಬಗ್ಗೆ ನಮಗೆ ಮಾಹಿತಿಯಿದೆ ಎಂದು ಹೇಳಿದ್ದಾರೆ.
ಯೂಟ್ಯೂಬರ್ ಸಮೀರ್ ಧೂತ ಸೌಜನ್ಯ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿವರವಾದ ವಿಡಿಯೋವೊಂದನ್ನು ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಅಪ್‌ಲೋಡ್ ಮಾಡಿದ್ದಾರೆ. ಇದಾದ ಬಳಿಕ ಇನ್ನೂ ಬಗೆಹರಿಯದೆ ಉಳಿದಿರುವ ಸೌಜನ್ಯ ಪ್ರಕರಣವು ಮತ್ತೆ ಮುನ್ನಲೆಗೆ ಬಂದಿದೆ. ಬಿಜೆಪಿಗರು ಈ ವಿಚಾರದಲ್ಲಿ ಕೋಮು ದ್ವೇಷ ಹುಟ್ಟಿಸುವ ಯತ್ನ ಮಾಡಿದರೂ ಕೂಡಾ ಹಲವು ಮಂದಿ ಸಮೀರ್ ಪರವಾಗಿ ನಿಂತು ಸೌಜನ್ಯಳಿಗೆ ನ್ಯಾಯ ದೊರಕಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು
ಈ ನಡುವೆ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ ಸೌಜನ್ಯ ಪ್ರಕರಣದ ಮರುತನಿಖೆಗಾಗಿ ಆಗ್ರಹಿಸಿದ್ದಾರೆ. ಸೌಜನ್ಯಳಿಗೆ ನ್ಯಾಯ ಒದಗಿಸಬೇಕು, ಈ ಪ್ರಕರಣದೊಂದಿಗೆ ನಂಟು ಹೊಂದಿರುವ ಎಲ್ಲಾ ಪ್ರಕರಣಗಳ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
“11 ದಿನಗಳ ಹಿಂದೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಉತ್ತಮ ತನಿಖಾ ಪತ್ರಿಕೋದ್ಯಮದ ವಿಡಿಯೋ ಬಂದಿದೆ. ಇದಾದ ಬಳಿಕ ಕರ್ನಾಟಕದಾದ್ಯಂತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆಗಳು, ಹೋರಾಟಗಳು, ನ್ಯಾಯದ ಪರವಾಗಿ ಕೂಗು ಕೇಳಿಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ” ಎಂದು ಶ್ಲಾಘಿಸಿದ್ದಾರೆ.
“ಸೌಜನ್ಯ ಅವರ ತಾಯಿಯ ಜೊತೆ ಮಾತನಾಡುವ ಅವಕಾಶ ನನಗೆ ಲಭಿಸಿತು. ಅವರು ಚೇತನ್ ನನಗೆ ನ್ಯಾಯ ಒದಗಿಸಿಕೊಡಪ್ಪ ಎಂದು ಕೇಳಿದರು. ನಾನು ಖಂಡಿತ ಅಮ್ಮ, ನಾನು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದೇನೆ. ಇಂದು ನಾವು ಅನೇಕರ ಹೋರಾಟದ ಜೊತೆ ನಮ್ಮ ಹೋರಾಟವನ್ನು ಸೇರಿಸಿ ಈ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಈ ಪ್ರಕರಣವನ್ನು ಮತ್ತೆ ತೆರೆಯಬೇಕು. ನ್ಯಾಯಾಂಗ ಅಥವಾ ಎಸ್‌ಐಟಿ – ಯಾವುದಾದರೂ ತನಿಖೆಯಾಗಬೇಕು. ನಮಗೆ ನ್ಯಾಯಬೇಕು” ಎಂದು ನಟ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಸೌಜನ್ಯ ಪ್ರಕರಣ: ಸಮಾನ ಮನಸ್ಕರ ಸಮಾಲೋಚನಾ ಸಭೆಗೆ ಪೊಲೀಸರಿಂದ ಅಡ್ಡಗಾಲು!
“ಈ ತನಿಖಾ ಪತ್ರಿಕೋದ್ಯಮದ ವಿಡಿಯೋ ಹೇಳುವ ಪ್ರಕಾರ ಸೌಜನ್ಯ ಪ್ರಕರಣದ ಜೊತೆ ಅನೇಕ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿದೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಬೆಳ್ತಂಗಡಿಯಲ್ಲಿ 346 ಅಸಹಜ, ನಿಗೂಢ ಸಾವುಗಳು ಸಂಭವಿಸಿದೆ. ಈ ಎಲ್ಲಾ ಪ್ರಕರಣದಲ್ಲಿಯೂ ನ್ಯಾಯ ಬೇಕು, ಇವೆಲ್ಲವುದಕ್ಕೂ ಸಂಬಂಧಪಟ್ಟಂತೆ ತನಿಖೆಯಾಗಬೇಕು” ಎಂದು ಒತ್ತಾಯಿಸಿದ್ದಾರೆ.
“ಯಾರ ಮೇಲೆ ಆರೋಪ ಬಂದಿದೆಯೋ, ಯಾರು ತಪ್ಪಿತಸ್ಥರು ಆಗಿರಬಹುದು ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೋ ಅವರು ದೊಡ್ಡ ಮಟ್ಟದ ಪ್ರಭಾವ ಹೊಂದಿರುವವರು. ಅವರಲ್ಲಿ ಹಣ, ತೋಲು, ರಾಜಕೀಯ, ಧರ್ಮ, ಜಾತಿ ಬಲವನ್ನು ಹೊಂದಿದ್ದಾರೆ. ಅದರ ವಿರುದ್ಧ ಹೋರಾಡುವುದೆಂದರೆ ಬಹಳ ಕಷ್ಟ. ಆದರೆ ಜನಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿಯಿಂದ ಈ ಹೋರಾಟ ಸಾಧ್ಯವಿದೆ. ಬದಲಾವಣೆ ಬಂದಿರುವುದು ಮೇಲಿಂದ ಅಲ್ಲ, ತಳಮಟ್ಟದ ಹೋರಾಟದಿಂದ ಎಂಬುದು ನೆನಪಿಟ್ಟುಕೊಳ್ಳಿ. ಆ ಹೋರಾಟವನ್ನು ಮುಂದುವರೆಸೋಣ” ಎಂದು ಚೇತನ್ ಅಹಿಂಸಾ ಕರೆ ನೀಡಿದ್ದಾರೆ.
