- ಮಹದಾಯಿ ಪಾತ್ರದ ರಾಜ್ಯಗಳ ಸಿಎಂ ಜೊತೆ ಪಿಎಂ ಸಭೆ ನಡೆಸಲಿ
- ಒಕ್ಕೂಟ ವ್ಯವಸ್ಥೆಯಲ್ಲಿ ನೀರು ಎಲ್ಲರಿಗೂ ಹಂಚಿಕೆಯಾಗಲೇಬೇಕು
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಹದಾಯಿ ವಿಚಾರಕ್ಕೆ ಗೋವಾ ಹಾಗೂ ಮಹಾರಾಷ್ಟ್ರ ಅಡ್ಡಿಪಡಿಸುತ್ತಿವೆ. ಪದೇ ಪದೇ ಇದೇ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ವಿವಾದತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೂತು ಪ್ರಧಾನಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ” ಎಂದರು.
ಮಹಾರಾಷ್ಟ್ರ ರೈತರು ಕರ್ನಾಟಕಕ್ಕೆ ನೀರು ಬಿಡಲು ಅಡ್ಡಿಪಡಿಸುವ ವಿಚಾರ ತಮ್ಮ ಗಮಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದರು.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ, “ಮಹದಾಯಿ ವಿಚಾರವಾಗಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಮೂರು ರಾಜ್ಯಗಳ ಸಿಎಂ ಜೊತೆ ಪ್ರಧಾನ ಮಂತ್ರಿಗಳು ಮಾತನಾಡಬೇಕು. ರಾಜ್ಯಗಳ ನಡುವಿನ ನೀರಿನ ಸಮಸ್ಯೆ ಬಗೆಹರಿಸಿಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? :ಬರದ ಭೀತಿಯಲ್ಲಿದ್ದ ರೈತರಿಗೆ ಮಳೆ ಸೂಚನೆ
“ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ನೀರು ಎಲ್ಲಾ ರಾಜ್ಯಗಳಿಗೂ ಬೇಕು. ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಿದರಷ್ಟೆ ಸಮಸ್ಯೆ ಬಗೆಹರಿಯಲು ಸಾಧ್ಯ” ಎಂದು ಅವರು ಹೇಳಿದರು.
“ಹಾಗೆಯೇ ರಾಜ್ಯಕ್ಕೆ ನೀರು ಬಿಡುವ ವಿಚಾರದಲ್ಲಿ ಈ ಹಿಂದಿನ ಸಿಎಂ ಮಹಾರಾಷ್ಟ್ರಕ್ಕೆ ಮನವಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಕೃಷಿ ಸಚಿವರು ತಿಳಿಸಿದರು.