ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಕಳೆದ ಹಲವು ತಿಂಗಳಿನಿಂದ ನೀರಿಗಾಗಿ ಜನ ಪರದಾಡುತ್ತಿದ್ದು, ಕೂಡಲೇ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ವೆಲ್ಫೇರ್ ಪಾರ್ಟ್ ಆಫ್ ಇಂಡಿಯಾ ಇಳಕಲ್ ತಾಲೂಕು ಸಮಿತಿಯು ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿತು.
“ನಗರದಲ್ಲಿ ಜನರು ದಿನನಿತ್ಯ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸಮಸ್ಯೆ ಪರಿಹರಿಸುವಂತೆ ಈ ಮೊದಲಿಂದಲೂ ನಗರಸಭೆಗೆ ಮನವಿ ಸಲ್ಲಿಸಿದ್ದು, ಇದುವರೆಗೂ ಯಾವುದೇ ಸರಿಯಾದ ಕ್ರಮ ಕೈಗೊಳ್ಳದಿರುವುದು ಜನತೆಯಲ್ಲಿ ಅಸಮಾಧಾನ ಹುಟ್ಟಿಸಿದೆ. ಜನರ ಕಷ್ಟ ನಿರಂತರವಾಗಿ ಹೆಚ್ಚುತ್ತಿದ್ದು, ನಗರಪಾಲಿಕೆಯ ನಿರ್ಲಕ್ಷ್ಯ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ” ಎಂದು ಸಮಿತಿಯ ಪದಾಧಿಕಾರಿಗಳು ಆರೋಪಿಸಿದರು.
“ನೀರಿನ ಸರಬರಾಜು ವ್ಯವಸ್ಥೆಯನ್ನು ತಕ್ಷಣ ಸುಧಾರಿಸಬೇಕು ಮತ್ತು ನಿರಂತರ ನೀರಿನ ಪೂರೈಕೆ ಖಾತ್ರಿಯಾಗಬೇಕು. ಶಾಶ್ವತ ಪರಿಹಾರಕ್ಕಾಗಿ ದೀರ್ಘಾವಧಿ ಯೋಜನೆ ರೂಪಿಸುವುದಾಗಿ ಜನರಿಗೆ ಭರವಸೆ ನೀಡಬೇಕು. ಈಗಲೂ ಕೂಡ ಪ್ರಯೋಜನಕಾರಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮುಂದುವರಿದರೆ, ವೆಲ್ಫೇರ್ ಪಾರ್ಟಿ ಜನರ ಹಕ್ಕಿಗಾಗಿ ತೀವ್ರ ಹೋರಾಟ ಮಾಡಲು ನಿರ್ಧರಿಸಿದೆ. ಇದಕ್ಕೆ ಅವಕಾಶ ಕೊಡದೆ ಸಾರ್ವಜನಿಕ ಸಮಸ್ಯೆ ಬಗೆಹರಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬಾಗಲಕೋಟೆ | ನರೇಗಾ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯ
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ಬಾಗಲಕೋಟೆ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಜಾಕ್ ಕಲಾಲ್, ಜಿಲ್ಲಾ ಉಪಾಧ್ಯಕ್ಷ ಆಫ್ಜಲ್ ಹುಮ್ನಾಬಾದ್, ಇಳಕಲ್ ಅಧ್ಯಕ್ಷ ಸಿರಾಜ ಹುಣಚಗಿ, ರಫೀಕ್ ಬಲ್ಗನೂರ್, ಲಾಲ್ ಸಾಬ್ ಬಂಡಾರಿ, ಮುರ್ತುಜಾ ಸೈ ಇತರರು ಉಪಸ್ಥಿತರಿದ್ದರು.
